ಬೆಂಗಳೂರು, ಮೇ 30: ಹಾಪ್‌ಕಾಮ್ಸ್ ಮತ್ತು ಅಂಚೆ ಇಲಾಖೆ ಸಹಯೋಗದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಮಾವು ಹಾಗೂ ಇತರ ವಿಶೇಷ ಹಣ್ಣುಗಳನ್ನು ತಲುಪಿಸುವ ‘ರೈತರ ಅಂಚೆ’ ಆನ್‌ಲೈನ್ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು. ಈ ಸೇವೆಯ ಮೂಲಕ ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದರ ಜೊತೆಗೆ ಗುಣಮಟ್ಟದ ಹಣ್ಣುಗಳನ್ನು ಶೀಘ್ರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ (ಜಿಪಿಒ)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್, ಬೆಂಗಳೂರು ಮುಖ್ಯಾಲಯದ ಕ್ಷೇತ್ರ ಅಂಚೆ ಸೇವೆಗಳ ನಿರ್ದೇಶಕಿ ತಾರಾ ವಿ., ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಗೂರ್, ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್. ಚಂದ್ರೇಗೌಡ, ಉಪಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವು ಗಣ್ಯರು ಸೇವೆಗೆ ಚಾಲನೆ ನೀಡಿದರು.
ಹಾಪ್‌ಕಾಮ್ಸ್ ವತಿಯಿಂದ ಅಂಚೆ ಇಲಾಖೆಯ ಸಹಯೋಗದಲ್ಲಿ ‘ರೈತರ ಅಂಚೆ’ ಆನ್‌ಲೈನ್ ಮಾರಾಟ ಜಾಲವನ್ನು ವಿಸ್ತರಿಸಲಾಗಿದ್ದು, ಗ್ರಾಹಕರು ಮನೆಯಲ್ಲೇ ಕುಳಿತು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು https://hopcomsbengaluru.com/ ವೆಬ್‌ಸೈಟ್ ಮೂಲಕ ಮಾವಿನ ಹಣ್ಣುಗಳನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿದರೆ, 24 ಗಂಟೆಗಳೊಳಗೆ ಹಣ್ಣುಗಳು ನಿಗದಿತ ವಿಳಾಸಕ್ಕೆ ತಲುಪಲಿವೆ.
ಪ್ರಸ್ತುತ ಮಾವಿನ ಮೇಳ ಆರಂಭವಾಗಿರುವ ಹಿನ್ನೆಲೆಯಲ್ಲಿ ನೈಸರ್ಗಿಕವಾಗಿ ಮಾಗಿದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು 3 ಕೆ.ಜಿ. ಹಾಗೂ 5 ಕೆ.ಜಿ. ತೂಕದ ಪೆಟ್ಟಿಗೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಂಚೆ ಇಲಾಖೆ ಪತ್ರಗಳನ್ನು ಮನೆಗಳಿಗೆ ತಲುಪಿಸುವ ರೀತಿಯಲ್ಲೇ ಈ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲಿದೆ.
ಬೆಂಗಳೂರು ನಗರದ ಎಲ್ಲ ಪ್ರದೇಶಗಳಲ್ಲೂ ಹಾಪ್‌ಕಾಮ್ಸ್ ಮಳಿಗೆಗಳು ಲಭ್ಯವಿಲ್ಲದ ಕಾರಣ ಈ ಸೇವೆ ಆರಂಭಿಸಲಾಗಿದೆ. ಇದರಿಂದ ನಗರದ ಯಾವುದೇ ಭಾಗದಲ್ಲಿರುವ ಗ್ರಾಹಕರು ಸುಲಭವಾಗಿ ಆನ್‌ಲೈನ್ ಮೂಲಕ ಹಣ್ಣುಗಳನ್ನು ಖರೀದಿಸಬಹುದಾಗಿದೆ.
ಅಂಚೆ ಇಲಾಖೆಯು ಈಗಾಗಲೇ ಮಾವು ಬೆಳೆಗಾರರೊಂದಿಗೆ ‘ಬುಕ್ ನೌ, ಪೇ ಲೇಟರ್’ ಒಪ್ಪಂದದಡಿ ಪಾರ್ಸಲ್ ಸೇವೆ ಒದಗಿಸುತ್ತಿದ್ದು, ಇದರಿಂದ ರೈತರಿಗೆ ಸೂಕ್ತ ಬೆಲೆ ದೊರೆಯುವುದರ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಸಿಗಲಿವೆ. ರೈತರು ಆರ್ಡರ್ ಆಧಾರದ ಮೇಲೆ ಹಣ್ಣುಗಳ ಪಾರ್ಸಲ್‌ಗಳನ್ನು ಸಂಜೆ ವೇಳೆಗೆ ಜಿಪಿಒಗೆ ತಲುಪಿಸುತ್ತಾರೆ. ಬಳಿಕ ಅವುಗಳಿಗೆ ಬಾರ್‌ಕೋಡ್ ಅಳವಡಿಸಿ ಸ್ಪೀಡ್ ಪಾರ್ಸಲ್ ರೂಪದಲ್ಲಿ ಬುಕ್ಕಿಂಗ್ ಮಾಡಿ ಸಂಬಂಧಿತ ಅಂಚೆ ಕಚೇರಿಗಳಿಗೆ ರವಾನಿಸಲಾಗುತ್ತದೆ. ಮರುದಿನ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತದೆ.
ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್. ಚಂದ್ರೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ್ ಮಾತನಾಡಿ, ಪ್ರತಿದಿನ ಸದಸ್ಯ ರೈತರಿಂದ ಖರೀದಿಸಲಾದ ತಾಜಾ ಹಣ್ಣು ಮತ್ತು ತರಕಾರಿಗಳು ಈ ವೇದಿಕೆಯಲ್ಲಿ ಲಭ್ಯವಿರುತ್ತವೆ. ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಈ ಸೇವೆಯನ್ನು ಬಳಸಿದಷ್ಟು ರೈತರು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
2019ರಿಂದ ಲಕ್ಷಾಂತರ ಕೆಜಿ ಮಾವು ವಿತರಣೆ
ಅಂಚೆ ಇಲಾಖೆ ಮಾಹಿತಿ ಪ್ರಕಾರ, 2019ರಿಂದ ಇದುವರೆಗೆ 3,81,183 ಕೆಜಿ ತೂಕದ 1,13,347 ಮಾವಿನ ಹಣ್ಣಿನ ಪಾರ್ಸಲ್‌ಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ. ‘ರೈತರ ಅಂಚೆ’ ಸೇವೆಯು ರೈತರ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸುವುದರ ಜೊತೆಗೆ ಗ್ರಾಹಕರಿಗೆ ತಾಜಾ ಹಣ್ಣುಗಳನ್ನು ನೇರವಾಗಿ ತಲುಪಿಸುವ ಪರಿಣಾಮಕಾರಿ ವೇದಿಕೆಯಾಗುವ ನಿರೀಕ್ಷೆ ಮೂಡಿಸಿದೆ.




