ಜುಲೈ 4ರಿಂದ ಟೌನ್ ಹಾಲ್‌ನಲ್ಲಿ 10 ವಿಶೇಷ ಪ್ರದರ್ಶನಗಳು; ಮನರಂಜನೆ, ಮೈಂಡ್ ರೀಡಿಂಗ್ ಮತ್ತು ಭವ್ಯ ಇಲ್ಯೂಷನ್‌ಗಳ ಸಂಗಮ
ಬೆಂಗಳೂರು, ಜುಲೈ 2: ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ಅಂತರರಾಷ್ಟ್ರೀಯ ಮ್ಯಾಜಿಷಿಯನ್ ವಿಕ್ಕಿ ಕೃಷ್ ಅವರು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಮ್ಯಾಜಿಕ್ ಪ್ರದರ್ಶನ ನೀಡಲಿದ್ದು, ಜುಲೈ 4ರಿಂದ ಆರಂಭವಾಗಲಿರುವ “ವಿಕ್ಕಿ ಕೃಷ್ ಇಂಟರ್‌ನ್ಯಾಷನಲ್ ಮ್ಯಾಜಿಕ್ ಶೋ” ಕುರಿತು ಬುಧವಾರ ನಗರದ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಆರಂಭದಲ್ಲೇ ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಎದುರು ತಮ್ಮ ಅದ್ಭುತ ಮ್ಯಾಜಿಕ್ ಕೌಶಲ್ಯಗಳನ್ನು ಪ್ರದರ್ಶಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ಕಿ ಕೃಷ್, ಕಳೆದ 15 ವರ್ಷಗಳಿಂದ ಭಾರತ ಸೇರಿದಂತೆ ಅಮೆರಿಕ, ಯುಕೇ, ಆಸ್ಟ್ರೇಲಿಯಾ ಹಾಗೂ ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡಿರುವುದಾಗಿ ತಿಳಿಸಿದರು. ಇದುವರೆಗೆ ಸಾರ್ವಜನಿಕ ಹಾಗೂ ಖಾಸಗಿ ಸೇರಿ ಸುಮಾರು 5,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಡೆಸಿದ್ದು, ತಮ್ಮ ಕಾರ್ಯಕ್ರಮಗಳು ಮ್ಯಾಜಿಕ್ ಮಾತ್ರವಲ್ಲದೆ ಮೈಂಡ್ ರೀಡಿಂಗ್, ಮೆಂಟಲಿಸಂ, ಮನೋವಿಜ್ಞಾನ, ಹಾಸ್ಯ ಹಾಗೂ ಪ್ರೇಕ್ಷಕರ ನೇರ ಭಾಗವಹಿಸುವಿಕೆಯ ಮೂಲಕ ವಿಭಿನ್ನ ಅನುಭವ ನೀಡುತ್ತವೆ ಎಂದು ಹೇಳಿದರು.
ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಫೈನಲಿಸ್ಟ್ ಆಗಿದ್ದ ವಿಕ್ಕಿ ಕೃಷ್, ಈ ಬಾರಿ ಗೋಲ್ಡನ್ ಬಜರ್ ಪಡೆದ ಏಕೈಕ ಮ್ಯಾಜಿಷಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ 2014 ಮತ್ತು 2018ರ ರಾಷ್ಟ್ರೀಯ ಮಟ್ಟದ ಕ್ಲೋಸ್-ಅಪ್ ಮ್ಯಾಜಿಕ್ ಚಾಂಪಿಯನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಸಾರ್ವಜನಿಕರಿಗಾಗಿ ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ನಗರದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಮುಂದಿನ ಆರು ತಿಂಗಳೊಳಗೆ ಸೂಕ್ತ ಅನುಮತಿ ಹಾಗೂ ಪ್ರಾಯೋಜಕರ ಸಹಕಾರ ದೊರೆತರೆ ಬೆಂಗಳೂರಿನ ಟೌನ್ ಹಾಲ್ ಅನ್ನು ಕೆಲವು ನಿಮಿಷಗಳ ಕಾಲ “ಮಾಯವಾಗುವ” ಭವ್ಯ ಇಲ್ಯೂಷನ್ ಪ್ರದರ್ಶನ ನೀಡುವ ಯೋಜನೆಯೂ ಇದೆ ಎಂದು ತಿಳಿಸಿದರು. ಜೊತೆಗೆ ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಕ್ಕಳಿಗಾಗಿ ಮ್ಯಾಜಿಕ್ ಶಾಲೆ ಆರಂಭಿಸುವ ಯೋಜನೆಯನ್ನೂ ಪ್ರಕಟಿಸಿದರು.
ವಿಕ್ಕಿ ಕೃಷ್ ಅವರ ಪತ್ನಿ ಡಾ. ಸುವಿಯಾ ಮಾತನಾಡಿ, ವಿಕ್ಕಿ ಅವರ ಮ್ಯಾಜಿಕ್ ವೇಗ, ಹಾಸ್ಯ ಹಾಗೂ ಪ್ರೇಕ್ಷಕರೊಂದಿಗೆ ನೇರ ಸಂವಾದವೇ ಅವರ ವಿಶೇಷತೆ ಎಂದು ಹೇಳಿದರು. ದಕ್ಷಿಣ ಭಾರತದ ಮ್ಯಾಜಿಷಿಯನ್ ಆಗಿ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಫೈನಲ್ ತಲುಪಿ ಗೋಲ್ಡನ್ ಬಜರ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು. ಬೆಂಗಳೂರಿನಲ್ಲಿ ನಡೆಯುವ ಪ್ರದರ್ಶನದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಪ್ರದರ್ಶಿಸಿದ್ದ ವಿಶೇಷ ಆ್ಯಕ್ಟ್‌ಗಳನ್ನೂ ಪ್ರೇಕ್ಷಕರು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಇತ್ತೀಚಿನ ತಿಂಗಳುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಪ್ರೇಕ್ಷಕರಿಂದ ಅಪಾರ ಬೆಂಬಲ ದೊರೆತಿರುವ ಹಿನ್ನೆಲೆಯಲ್ಲಿ ಇಲ್ಲಿಯೇ ಮೊದಲ ಸಾರ್ವಜನಿಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ವಿಕ್ಕಿ ಕೃಷ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅನುಯಾಯಿಗಳಿದ್ದು, ಅವರ ಹಲವು ವಿಡಿಯೊಗಳು ಕೋಟ್ಯಂತರ ವೀಕ್ಷಣೆಗಳನ್ನು ಪಡೆದಿವೆ.
ಕಾರ್ಯಕ್ರಮದ ಆಯೋಜಕರು ಮಾತನಾಡಿ, ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಒಂದೇ ಮಾದರಿಯ ಮ್ಯಾಜಿಕ್ ಪ್ರದರ್ಶನಗಳು ನಡೆಯುತ್ತಿದ್ದು, ಈ ಬಾರಿ ಸಂಪೂರ್ಣ ಹೊಸ ಶೈಲಿಯ ಅಂತರರಾಷ್ಟ್ರೀಯ ಮಟ್ಟದ ಮನರಂಜನೆಯನ್ನು ನಗರಕ್ಕೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಜುಲೈ 4ರಿಂದ ಟೌನ್ ಹಾಲ್‌ನಲ್ಲಿ ಪ್ರದರ್ಶನ
ಜುಲೈ 4, 5, 11, 12 ಹಾಗೂ 19ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಒಟ್ಟು 10 ಪ್ರದರ್ಶನಗಳು ನಡೆಯಲಿವೆ. ಪ್ರತಿದಿನ ಸಂಜೆ 4 ಗಂಟೆ ಹಾಗೂ ರಾತ್ರಿ 7 ಗಂಟೆಗೆ ಎರಡು ಪ್ರದರ್ಶನಗಳು ನಡೆಯಲಿದ್ದು, ಪ್ರತಿ ಕಾರ್ಯಕ್ರಮದ ಅವಧಿ ಸುಮಾರು ಒಂದೂವರೆ ಗಂಟೆ ಇರಲಿದೆ. ಟಿಕೆಟ್ ದರ ₹500ರಿಂದ ಆರಂಭವಾಗುತ್ತದೆ. ಟಿಕೆಟ್‌ಗಳು ಬುಕ್ ಮೈ ಶೋ ಮೂಲಕ ಲಭ್ಯವಿವೆ.
ವಿಶ್ವಮಟ್ಟದ ಮನರಂಜನೆಯ ಭರವಸೆ
ವಿಕ್ಕಿ ಕೃಷ್ ಅವರು ಸಮಕಾಲೀನ ಭಾರತದ ಪ್ರಮುಖ ಮ್ಯಾಜಿಷಿಯನ್‌ಗಳಲ್ಲಿ ಒಬ್ಬರಾಗಿದ್ದು, ಮ್ಯಾಜಿಕ್, ಮೈಂಡ್ ರೀಡಿಂಗ್, ಮನೋವಿಜ್ಞಾನ, ಹಾಸ್ಯ ಹಾಗೂ ಭವ್ಯ ಇಲ್ಯೂಷನ್‌ಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿ ವಿಶಿಷ್ಟ ಮನರಂಜನೆ ನೀಡುತ್ತಿದ್ದಾರೆ. ದಶಕಕ್ಕೂ ಹೆಚ್ಚು ಕಾಲದ ವೃತ್ತಿಪರ ಅನುಭವದೊಂದಿಗೆ ಭಾರತ ಹಾಗೂ ವಿದೇಶಗಳಲ್ಲಿ ಸಾವಿರಾರು ಪ್ರೇಕ್ಷಕರನ್ನು ರಂಜಿಸಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್ ಆಗಿರುವ ವಿಕ್ಕಿ ಕೃಷ್ ಅವರ ಪ್ರದರ್ಶನಗಳಲ್ಲಿ ಆಧುನಿಕ ಮ್ಯಾಜಿಕ್, ಅಸಾಧ್ಯವೆನಿಸುವ ಭವಿಷ್ಯವಾಣಿಗಳು, ಮನೋವೈಜ್ಞಾನಿಕ ಇಲ್ಯೂಷನ್‌ಗಳು ಹಾಗೂ ಪ್ರೇಕ್ಷಕರ ನೇರ ಭಾಗವಹಿಸುವಿಕೆ ಪ್ರಮುಖ ಆಕರ್ಷಣೆಯಾಗಿವೆ.
ಬೆಂಗಳೂರು ಪ್ರದರ್ಶನದ ಕುರಿತು ಮಾತನಾಡಿದ ಅವರು, ಬುದ್ಧಿವಂತಿಕೆ, ಹಾಸ್ಯ, ರಹಸ್ಯ ಹಾಗೂ ವಿಸ್ಮಯವನ್ನು ಒಂದೇ ವೇದಿಕೆಯಲ್ಲಿ ಅನುಭವಿಸುವ ಅಪರೂಪದ ಅವಕಾಶ ಇದಾಗಿದ್ದು, ಕುಟುಂಬ ಸಮೇತರಾಗಿ ಬರುವ ಪ್ರೇಕ್ಷಕರು, ಯುವಕರು ಹಾಗೂ ಮ್ಯಾಜಿಕ್ ಅಭಿಮಾನಿಗಳಿಗೆ ಮರೆಯಲಾಗದ ಅನುಭವವಾಗಲಿದೆ ಎಂದು ಹೇಳಿದರು.
“ವಿಕ್ಕಿ ಕೃಷ್ ಇಂಟರ್‌ನ್ಯಾಷನಲ್ ಮ್ಯಾಜಿಕ್ ಶೋ” ವಿಶ್ವಮಟ್ಟದ ಮನರಂಜನೆಯನ್ನು ಬೆಂಗಳೂರಿಗೆ ತರುವ ಉದ್ದೇಶ ಹೊಂದಿದ್ದು, ಅಸಾಧ್ಯವೆನಿಸುವ ಸಂಗತಿಗಳೇ ಸಾಧ್ಯವಾಗುವ ಅದ್ಭುತ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ.




