ನೂತನ ಜವಳಿ ನೀತಿ: ಹೂಡಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆ
ಹೊಸ ಜವಳಿ ನೀತಿ ಅನುಷ್ಠಾನಕ್ಕೆ ವೇಗ ನೀಡಿ: ರೋಹಿಣಿ ಸಿಂಧೂರಿ ಸೂಚನೆ ಫೋಕಸ್ ತಾಲೂಕುಗಳ ಸಾಮರ್ಥ್ಯ ಆಧರಿಸಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸಲು ನಿರ್ದೇಶನ | ನೇಕಾರರು, ಉದ್ಯಮಿಗಳು ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪ್ರೋತ್ಸಾಹಕ ಸೌಲಭ್ಯಗಳನ್ನು ತಲುಪಿಸಲು ಒತ್ತು
2min read
ಬೆಂಗಳೂರು: ರಾಜ್ಯದ ಕೈಮಗ್ಗ ಮತ್ತು ಜವಳಿ ಉದ್ಯಮಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ನೂತನ ಜವಳಿ ಮತ್ತು ಉಡುಪು ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆದ್ಯತೆ ನೀಡಬೇಕು. ನೀತಿಯಲ್ಲಿರುವ ಯೋಜನೆಗಳು ಹಾಗೂ ಪ್ರೋತ್ಸಾಹಕ ಸೌಲಭ್ಯಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ, ನೇಕಾರರು, ಉದ್ಯಮಿಗಳು ಮತ್ತು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೂಚಿಸಿದರು.
ನಗರದ ಕಾಸಿಯಾ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ‘ಜವಳಿ ಮತ್ತು ಉಡುಪು ನೀತಿ ಅನುಷ್ಠಾನ ತರಬೇತಿ’ (Textile & Apparel Policy Implementation Training) ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಜವಳಿ ಉದ್ಯಮದ ವಿಸ್ತರಣೆ, ಬಂಡವಾಳ ಹೂಡಿಕೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶಗಳಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಕ್ಕರೆ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ಅವರ ಮುತುವರ್ಜಿಯಿಂದ ರೂಪಿಸಲಾಗಿರುವ ನೂತನ ನೀತಿಯನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.
ಫೋಕಸ್ ತಾಲೂಕುಗಳಿಗೆ ವಿಶೇಷ ಕಾರ್ಯಯೋಜನೆ
ನೂತನ ಜವಳಿ ನೀತಿಯಡಿ ಗುರುತಿಸಲಾಗಿರುವ ಫೋಕಸ್ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಆಯಾ ತಾಲೂಕುಗಳ ಕೈಮಗ್ಗ ಪರಂಪರೆ, ಜವಳಿ ಉತ್ಪಾದನಾ ಸಾಮರ್ಥ್ಯ, ಸ್ಥಳೀಯ ಕೌಶಲ್ಯ, ಮೂಲಸೌಕರ್ಯ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಅಧ್ಯಯನ ಮಾಡಿ, ಅವುಗಳಿಗೆ ಅನುಗುಣವಾಗಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸಬೇಕು ಎಂದು ರೋಹಿಣಿ ಸಿಂಧೂರಿ ನಿರ್ದೇಶನ ನೀಡಿದರು.
ಪ್ರತಿಯೊಂದು ಪ್ರದೇಶದಲ್ಲಿಯೂ ವಿಶಿಷ್ಟ ಉತ್ಪನ್ನಗಳು ಮತ್ತು ಕೌಶಲ್ಯ ಸಂಪನ್ಮೂಲಗಳಿವೆ. ಇವುಗಳನ್ನು ಗುರುತಿಸಿ ಉದ್ಯಮಶೀಲತೆಗೆ ಉತ್ತೇಜನ ನೀಡುವುದರ ಜೊತೆಗೆ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮುಂದಾಗಬೇಕು. ವಿಶೇಷವಾಗಿ ಸಾಂಪ್ರದಾಯಿಕ ಕೈಮಗ್ಗ ಮತ್ತು ಆಧುನಿಕ ಜವಳಿ ಉದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ನೇಕಾರರಿಗೆ ಸೌಲಭ್ಯ ತಲುಪಿಸುವುದು ಆದ್ಯತೆ
ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ. ಬಸವರಾಜು ಮಾತನಾಡಿ, ನೂತನ ನೀತಿಯಲ್ಲಿ ಕೈಮಗ್ಗ ವಲಯ, ನೇಕಾರರು ಮತ್ತು ಜವಳಿ ಉದ್ಯಮದ ಸಮಗ್ರ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳು ಹಾಗೂ ಪ್ರೋತ್ಸಾಹಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಸೌಲಭ್ಯಗಳ ಕುರಿತು ತಳಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.
ಅರ್ಹ ನೇಕಾರರು, ಉದ್ಯಮಿಗಳು ಮತ್ತು ಫಲಾನುಭವಿಗಳಿಗೆ ಯೋಜನೆಗಳ ಮಾಹಿತಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಸೌಲಭ್ಯಗಳನ್ನು ಪಡೆಯುವ ವಿಧಾನಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಸರ್ಕಾರದ ನೀತಿಯ ಉದ್ದೇಶಗಳು ಈಡೇರಬೇಕಾದರೆ ಇಲಾಖೆಯ ಅಧಿಕಾರಿಗಳು ಕೇವಲ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಸೀಮಿತವಾಗದೆ, ಸ್ಥಳೀಯ ಅಗತ್ಯಗಳನ್ನು ಗುರುತಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂಬ ಅಭಿಪ್ರಾಯ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.
ಕಾರ್ಯಾಗಾರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್. ಯೋಗೇಶ್, ಶ್ರೀಧರ್ ನಾಯಕ್, ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ ಎಂ. ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಅಧಿಕಾರಿಗಳು ಭಾಗವಹಿಸಿದ್ದರು.
No ratings yet
