ಬೀದಿ ನಾಯಿಗಳ ಬಂಧನವಲ್ಲ, ಮಾನವೀಯ ನಿರ್ವಹಣೆಗೆ ಆದ್ಯತೆ ನೀಡಿ: ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್
ಪೌಂಡ್ಗಳ ನಿರ್ಮಾಣಕ್ಕಿಂತ ABC–ARV, ಪಶುವೈದ್ಯಕೀಯ ಆರೈಕೆ ಮತ್ತು ವೈಜ್ಞಾನಿಕ ಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಹೂಡಿಕೆ ಮಾಡುವಂತೆ ಸರ್ಕಾರಕ್ಕೆ ಯುವಜನರ ಆಗ್ರಹ
3min read
ಬೆಂಗಳೂರು: ಆರೋಗ್ಯವಂತ ಬೀದಿ ನಾಯಿಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಡಿದು ಪೌಂಡ್ಗಳು ಅಥವಾ ಶೆಲ್ಟರ್ಗಳಲ್ಲಿ ದೀರ್ಘಕಾಲ ಇರಿಸುವುದು ಪ್ರಾಣಿ ಕಲ್ಯಾಣಕ್ಕೆ ಪರಿಹಾರವಲ್ಲ. ಅದರ ಬದಲು ಪ್ರಾಣಿ ಜನನ ನಿಯಂತ್ರಣ (ABC), ರೇಬೀಸ್ ವಿರೋಧಿ ಲಸಿಕೆ (ARV), ಪಶುವೈದ್ಯಕೀಯ ಚಿಕಿತ್ಸೆ ಮತ್ತು ಜವಾಬ್ದಾರಿಯುತ ಬಿಡುಗಡೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮಾನವೀಯ ಹಾಗೂ ವೈಜ್ಞಾನಿಕ ವಿಧಾನ ಅನುಸರಿಸಬೇಕು ಎಂದು ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್ (students for streeties) ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿಗಳು, ಯುವ ನಾಗರಿಕರು ಹಾಗೂ ಪ್ರಾಣಿ ಕಲ್ಯಾಣ ಕಾರ್ಯಕರ್ತರು ಸಮುದಾಯ ನಾಯಿಗಳ ನಿರ್ವಹಣೆಯಲ್ಲಿ ಕರುಣೆ, ವಿಜ್ಞಾನ ಮತ್ತು ಸಾರ್ವಜನಿಕ ಸುರಕ್ಷತೆ ಪರಸ್ಪರ ವಿರೋಧಿಗಳಲ್ಲ ಎಂಬ ಸಂದೇಶ ನೀಡಿದರು.
ಪತ್ರಿಕಾಗೋಷ್ಠಿಯ ಆರಂಭದಲ್ಲೇ ಪ್ರಿಯಾಂಕ ಮತ್ತು ಮಾಹಿ, ಬೀದಿಯಲ್ಲಿ ಸ್ವತಂತ್ರವಾಗಿ ಬದುಕುತ್ತಿರುವ ಪ್ರಾಣಿಯನ್ನು ಏಕಾಏಕಿ ಬಲೆಗೆ ಸೆರೆಹಿಡಿದು, ಅಪರಿಚಿತ ಸ್ಥಳಕ್ಕೆ ಕೊಂಡೊಯ್ದು ಸೀಮಿತ ಜಾಗದಲ್ಲಿ ಉಳಿಸಿದರೆ ಅದು ಎದುರಿಸುವ ಭಯ ಮತ್ತು ಒತ್ತಡವನ್ನು ಕಲ್ಪಿಸಿಕೊಳ್ಳುವಂತೆ ಸಭಿಕರಿಗೆ ಮನವಿ ಮಾಡಿದರು. “ಇಂತಹ ಪರಿಸ್ಥಿತಿಯನ್ನೇ ಅನೇಕ ಬೀದಿ ನಾಯಿಗಳು ಎದುರಿಸಬೇಕಾಗಬಹುದು” ಎಂಬುದನ್ನು ಅವರು ಭಾವನಾತ್ಮಕವಾಗಿ ವಿವರಿಸಿದರು.
ಬೆಂಗಳೂರು ನಗರಕ್ಕೆ ABC ಮತ್ತು ARV ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ದೀರ್ಘ ಅನುಭವವಿದೆ. ಹೀಗಿರುವಾಗ ಸಮುದಾಯ ನಾಯಿಗಳನ್ನು ಇರಿಸಲು ಐದು ಪೌಂಡ್ಗಳನ್ನು ಸ್ಥಾಪಿಸುವ ಪ್ರಸ್ತಾವನೆಯ ಬದಲು, ಅದೇ ಸಂಪನ್ಮೂಲವನ್ನು ಸಂತಾನಹರಣ, ಲಸಿಕೆ, ತುರ್ತು ಪಶುವೈದ್ಯಕೀಯ ಆರೈಕೆ, ಪುನರ್ವಸತಿ ಮತ್ತು ಜವಾಬ್ದಾರಿಯುತ ಬಿಡುಗಡೆ ವ್ಯವಸ್ಥೆಗೆ ಬಳಸಬೇಕು ಎಂದು ಸಂಘಟನೆ ಒತ್ತಾಯಿಸಿತು.
ಪ್ರಾಣಿ ಕಲ್ಯಾಣ ಕಾರ್ಯಕರ್ತ ಅರುಣ್ ಪ್ರಸಾದ್ ಮಾತನಾಡಿ, ನಾಯಿಗಳನ್ನು ಅತ್ಯಂತ ಸೀಮಿತ ಜಾಗದಲ್ಲಿ ದೀರ್ಘಕಾಲ ಇರಿಸುವ ವ್ಯವಸ್ಥೆ ಅವುಗಳ ಸಹಜ ಚಲನವಲನ ಹಾಗೂ ಕಲ್ಯಾಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಾಣಿಗಳ ಆರೈಕೆಗಾಗಿ ಸಮರ್ಪಕ ಜಾಗ, ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಅಗತ್ಯವಿದ್ದು, ಕೇವಲ ಹಿಡಿದು ಕೂಡಿಹಾಕುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದರು.
ಪ್ರಾಣಿಗಳಿಗೆ ಅನಗತ್ಯ ಹಿಂಸೆ ಆಗದಂತೆ ನೋಡಿಕೊಳ್ಳುವುದು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದ ಅವರು, ಸಂವಿಧಾನದ 51A(g) ಅಡಿಯಲ್ಲಿ ಜೀವಿಗಳ ಬಗ್ಗೆ ಕರುಣೆ ತೋರಿಸುವುದು ನಾಗರಿಕರ ಮೂಲಭೂತ ಕರ್ತವ್ಯ ಎಂಬ ಅಂಶವನ್ನೂ ಉಲ್ಲೇಖಿಸಿದರು. ಪಶುವೈದ್ಯಕೀಯ ಸೇವೆ ಮತ್ತು ಪ್ರಾಣಿಗಳ ಆರೈಕೆಗೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯವನ್ನು ಅವರು ಮುಂದಿಟ್ಟರು.
ಹರಿಣಿ ರಾಘವನ್ ಮಾತನಾಡಿ, ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ABC ಮತ್ತು ARV ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಸಮುದಾಯ ನಾಯಿಗಳ ಸಂಖ್ಯೆಯನ್ನು ದೀರ್ಘಾವಧಿಯಲ್ಲಿ ನಿಯಂತ್ರಿಸಲು ಸಂತಾನಹರಣ ಮತ್ತು ರೇಬೀಸ್ ವಿರೋಧಿ ಲಸಿಕೆಯೇ ವೈಜ್ಞಾನಿಕ ಮಾರ್ಗವಾಗಿದ್ದು, ಇದಕ್ಕೆ ಅಗತ್ಯ ಹಣಕಾಸು ಹಾಗೂ ಮೂಲಸೌಕರ್ಯ ಒದಗಿಸಬೇಕೆಂದು ಹೇಳಿದರು.
ಯಾಸ್ಮಿನ್ ಮತ್ತು ಮಲ್ಲಿಕಾ ಮೆನನ್ ಪ್ರಾಣಿ ಆಶ್ರಯ ಕೇಂದ್ರಗಳಲ್ಲಿ ಸ್ಥಳಾವಕಾಶ, ಸ್ವಚ್ಛತೆ, ವೈದ್ಯಕೀಯ ಆರೈಕೆ ಹಾಗೂ ಸೋಂಕು ನಿಯಂತ್ರಣಕ್ಕೆ ಅತ್ಯಂತ ಕಟ್ಟುನಿಟ್ಟಾದ ವ್ಯವಸ್ಥೆ ಅಗತ್ಯ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯ ಪ್ರಾಣಿಗಳನ್ನು ಒಂದೇ ಸ್ಥಳದಲ್ಲಿ ಇರಿಸಿದಾಗ ಅವುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ, ಯಾವುದೇ ಹೊಸ ವ್ಯವಸ್ಥೆಯ ಕೇಂದ್ರಬಿಂದುವಿನಲ್ಲಿ ಪ್ರಾಣಿ ಕಲ್ಯಾಣವೇ ಇರಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಿಯಾಂಕ ಮಾತನಾಡಿ, “ಮಾತನಾಡಲು ಸಾಧ್ಯವಿಲ್ಲದ ಜೀವಿಗಳನ್ನೂ ಕರುಣೆಯಿಂದ ನಡೆಸಿಕೊಳ್ಳುವುದು ಸಮಾಜದ ಜವಾಬ್ದಾರಿ. ಪ್ರಾಣಿಗಳನ್ನು ಕೇವಲ ಹಿಡಿದು ಪೌಂಡ್ಗಳಲ್ಲಿ ಇರಿಸುವ ಬದಲು ABC ನಿಯಮಗಳ ಅನುಷ್ಠಾನವೇ ಮುಂದಿನ ದಾರಿ” ಎಂದು ಹೇಳಿದರು. ಶೆಲ್ಟರ್ಗಳಲ್ಲಿ ಪ್ರಾಣಿಗಳಿಗೆ ದೊರೆಯುವ ಆರೈಕೆ ಕುರಿತು ಸಾರ್ವಜನಿಕ ಮೇಲ್ವಿಚಾರಣೆ ಮತ್ತು ಪಾರದರ್ಶಕತೆಯೂ ಅಗತ್ಯ ಎಂದು ಅವರು ಒತ್ತಾಯಿಸಿದರು.
ಮಾಹಿ ಮಾತನಾಡಿ, ಬೀದಿ ನಾಯಿಗಳಿಗೆ ಆಶ್ರಯ ಕೇಂದ್ರಗಳನ್ನು ನಿರ್ಮಿಸಲು ಬಳಸುವ ದೊಡ್ಡ ಪ್ರಮಾಣದ ಸಂಪನ್ಮೂಲವನ್ನು ಸಮರ್ಪಕವಾಗಿ ಲಸಿಕೆ, ಸಂತಾನಹರಣ, ಆಹಾರ ಮತ್ತು ವೈದ್ಯಕೀಯ ಆರೈಕೆಗೆ ಬಳಸಿದರೆ ಸಮಸ್ಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದರು. “ಕರುಣೆಯೇ ಮುಂದಿನ ದಾರಿ. ನಾಯಿಗಳನ್ನು ಅವುಗಳ ಪ್ರದೇಶದಲ್ಲೇ ಸಂತಾನಹರಣ ಮಾಡಿ, ಲಸಿಕೆ ನೀಡಿ, ಜವಾಬ್ದಾರಿಯಿಂದ ಆರೈಕೆ ಮಾಡುವುದು ಉತ್ತಮ ಪರಿಹಾರ” ಎಂದು ಪ್ರತಿಪಾದಿಸಿದರು.
ಸರ್ಕಾರವು ಪ್ರಸ್ತಾವಿತ ಪೌಂಡ್ಗಳ ಟೆಂಡರ್, ಬಜೆಟ್, ನಿರ್ಮಾಣ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ಅನುಷ್ಠಾನ ಕಾಲಮಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್ ಆಗ್ರಹಿಸಿದೆ. ಪ್ರಸ್ತಾವಿತ ಮೂಲಸೌಕರ್ಯವನ್ನು ABC, ಲಸಿಕೆ, ಪಶುವೈದ್ಯಕೀಯ ಚಿಕಿತ್ಸೆ, ಪುನರ್ವಸತಿ ಮತ್ತು ಬಿಡುಗಡೆ ಕೇಂದ್ರಗಳಾಗಿ ರೂಪಿಸುವ ಸಾಧ್ಯತೆಯನ್ನೂ ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.
“ಇದು ಸಾರ್ವಜನಿಕ ಸುರಕ್ಷತೆಯ ವಿರುದ್ಧದ ಹೋರಾಟವಲ್ಲ. ವಿಜ್ಞಾನ, ಕರುಣೆ ಮತ್ತು ಸಾಕ್ಷ್ಯಾಧಾರಿತ ನೀತಿಯ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಸಾಧಿಸಬೇಕೆಂಬ ಮನವಿ” ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಆರೋಗ್ಯವಂತ ಸಮುದಾಯ ನಾಯಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಂಧಿಸುವ ಯೋಜನೆಯನ್ನು ಮುಂದುವರಿಸುವ ಮೊದಲು ವಿದ್ಯಾರ್ಥಿಗಳು, ನಾಗರಿಕರು, ಪ್ರಾಣಿ ಕಲ್ಯಾಣ ಸಂಘಟನೆಗಳು, ಪಶುವೈದ್ಯರು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಬೇಕು. ಸಾರ್ವಜನಿಕ ಆರೋಗ್ಯ ಮತ್ತು ಪ್ರಾಣಿ ಕಲ್ಯಾಣ ಎರಡನ್ನೂ ಸಮತೋಲನಗೊಳಿಸುವ ಮಾನವೀಯ ಮಾದರಿಯನ್ನು ಬೆಂಗಳೂರು ರೂಪಿಸಬೇಕು ಎಂದು ಸ್ಟೂಡೆಂಟ್ಸ್ ಫಾರ್ ಸ್ಟ್ರೀಟೀಸ್ ಒತ್ತಾಯಿಸಿದೆ.
No ratings yet
