ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಕಲ ಮರಾಠ ಸಮಾಜವು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದು, ಅವರ ನೇತೃತ್ವದಲ್ಲಿ ಕರ್ನಾಟಕವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಕಲ ಮರಾಠ ಸಮಾಜದ ಪದಾಧಿಕಾರಿಗಳು, ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ ಸೇರಿದ 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಸಮುದಾಯವು ರಾಜ್ಯದಾದ್ಯಂತ ವ್ಯಾಪಕವಾಗಿ ನೆಲೆಸಿದೆ ಎಂದು ತಿಳಿಸಿದರು.
ಮರಾಠ ಸಮುದಾಯದ ಪ್ರಮುಖ ನಾಯಕರಾಗಿರುವ ಸಂತೋಷ್ ಲಾಡ್ ಅವರು ತಮ್ಮ ಕಾರ್ಯಕ್ಷಮತೆ, ಜನಪ್ರಿಯತೆ ಹಾಗೂ ಆಡಳಿತಾತ್ಮಕ ದಕ್ಷತೆಯಿಂದ ಈ ಹಿಂದೆ ವಿವಿಧ ಸರ್ಕಾರಗಳಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಯುವ ನಾಯಕತ್ವದ ಜೊತೆಗೆ ಜನಾಂಗಾತೀತವಾಗಿ ಜನರ ವಿಶ್ವಾಸ ಗಳಿಸಿರುವ ನಾಯಕರಾಗಿದ್ದಾರೆ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಂತೋಷ್ ಲಾಡ್ ಅವರು ಕಾರ್ಮಿಕರ ಕಲ್ಯಾಣ, ಅಂಗವಿಕಲರ ಅಭಿವೃದ್ಧಿ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಅವರ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ನೂತನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಸಕಲ ಮರಾಠ ಸಮಾಜ ಒತ್ತಾಯಿಸಿತು.
ಇದೇ ವೇಳೆ ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಅವರಿಗೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಅವರು ಜನಪ್ರಿಯ ನಾಯಕರಾಗಿದ್ದು, ಕ್ಯಾಬಿನೆಟ್ ಸಚಿವರಾಗಿ ಅವಕಾಶ ನೀಡಿದಲ್ಲಿ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ ಎಂದು ಸಮಾಜದ ಮುಖಂಡರು ಅಭಿಪ್ರಾಯಪಟ್ಟರು.
ಹೀಗಾಗಿ, ಸಂತೋಷ್ ಲಾಡ್ ಅವರನ್ನು ಉಪಮುಖ್ಯಮಂತ್ರಿಯಾಗಿ ಹಾಗೂ ಶ್ರೀನಿವಾಸ ಮಾನೆ ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರಾಗಿ ನೇಮಕ ಮಾಡುವಂತೆ ಸಕಲ ಮರಾಠ ಸಮಾಜ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದೆ.




