ಬೆಂಗಳೂರು: ಒಂದ್ಕಡೆ ಬೀದಿ ನಾಯಿಗಳ ಕಾಟ, ಮತ್ತೊಂದೆಡೆ ಬೀದಿಗಳಲ್ಲಿ ಇಲಿಗಳ ಹಾವಳಿ—ಈ ದ್ವಂದ್ವ ಸಮಸ್ಯೆಯಿಂದ ನಗರ ನಿವಾಸಿಗಳು ಕಂಗೆಟ್ಟಿದ್ದಾರೆ. ನಗರದ ಹಲವು ಭಾಗಗಳಲ್ಲಿ ಸ್ವಚ್ಛತೆ ಕೊರತೆಯಿಂದಾಗಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ನಗರದ ಬೀದಿ ಬದಿಗಳಲ್ಲಿ ಕಸದ ರಾಶಿಗಳು ತುಂಬಿ ಹೋಗಿರುವುದರಿಂದ ಇಲಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ HAL 2ನೇ ಹಂತದ 3ನೇ ಕ್ರಾಸ್ ರಸ್ತೆಯಲ್ಲಿ ರಾಶಿ ರಾಶಿಯಾಗಿ ಕಾಣಿಸುತ್ತಿರುವ ಇಲಿಗಳು ಸ್ಥಳೀಯರನ್ನು ಬೆಚ್ಚಿಬೀಳಿಸುವಂತಾಗಿದೆ. ಈ ದೃಶ್ಯವನ್ನು ಕಂಡು ನಾಗರಿಕರು ದಂಗಾಗಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ವೀಡಿಯೋ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ಇಲಿಗಳ ಓಡಾಟ ಹೆಚ್ಚಾಗುತ್ತಿದ್ದು, ಜನರು ಹೊರಗೆ ಹೋಗಲು ಹೆದರುತ್ತಿದ್ದಾರೆ.
ಇಲಿಗಳ ಹಾವಳಿಯಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿ ಹೆಚ್ಚಾಗಿದೆ. ಸ್ವಚ್ಛತೆಯ ಕೊರತೆ ಮತ್ತು ಕಸದ ಸರಿಯಾದ ನಿರ್ವಹಣೆ ಇಲ್ಲದಿರುವುದು ಈ ಸಮಸ್ಯೆಗೆ ಮುಖ್ಯ ಕಾರಣವೆಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ಕೋಪಗೊಂಡಿರುವ ಸ್ಥಳೀಯರು ಜಿಬಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಕ್ಷಣ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.




