ಬೆಂಗಳೂರು: ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ವಿಶ್ವದ ಹಲವು ಭಾಗಗಳಲ್ಲಿ ಯುದ್ಧದ ಭೀತಿ ಎದುರಾಗುತ್ತಿರುವ ಈ ಕಾಲಘಟ್ಟದಲ್ಲಿ ಕಲೆ ಮತ್ತು ಸಂಸ್ಕೃತಿ ಸಮಾಜದ ನಿಜವಾದ ಪ್ರತಿಬಿಂಬವಾಗಬೇಕು. ಸೂಕ್ಷ್ಮ ಸಂವೇದನೆಗಳೊಂದಿಗೆ ಸಮಾಜದ ಸಮಸ್ಯೆಗಳತ್ತ ಮುಖಾಮುಖಿಯಾಗಿ ಚಿಂತನೆ ನಡೆಸುವ ಅಗತ್ಯವಿದೆ ಎಂದು ವಕೀಲೆ ಹಾಗೂ ಕಲಾವಿದೆ ಜಯಶ್ರೀ ಅಭಿಪ್ರಾಯಪಟ್ಟರು.
ಮಹಿಳಾ ದಿನಾಚರಣೆ ಹಾಗೂ ನಾಟಕ ಪ್ರದರ್ಶನ
ರಂಗ ಕಳಸ ಕಲಾವಿದರು ಮತ್ತು ಸುಖಾಂಕ್ಷ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಶಿವನಗರದಲ್ಲಿರುವ ಸಿದ್ಧಾಂಗಂಗಾ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ “ಕತ್ತಲೆಗೆ ಬೆಳಕಾಗಿ” ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ನೈಜ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ನಾಟಕಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ಮಹಿಳೆಯರ ಹೊಣೆಗಾರಿಕೆ ಮಹತ್ವದ್ದು
ಸಮಸಮಾಜ ನಿರ್ಮಾಣದ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಯುವಪೀಳಿಗೆಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ಮಹಿಳೆಯರದ್ದಾಗಿದ್ದು, ಮಹಿಳೆಯರನ್ನು ಗೌರವದಿಂದ ಕಾಣದ ಸಮಾಜ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಹಿಂದೂಸ್ತಾನಿ ಗಾಯಕಿ ಸುನೀತಾ ಗಂಗಾವತಿ ಹೇಳಿದರು.
ಆಶ್ರಮದ ಮಕ್ಕಳಿಂದ ನಾಟಕ ಪ್ರದರ್ಶನ
ದಾನಿಗಳ ಸಹಕಾರದಿಂದ ಆಶ್ರಮವಾಸಿ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಅದರ ಭಾಗವಾಗಿ ಆಶ್ರಮದ ಮಕ್ಕಳು “ಕತ್ತಲೆಗೆ ಬೆಳಕಾಗಿ” ಎಂಬ ರಂಗನಾಟಕವನ್ನು ಪ್ರದರ್ಶಿಸಿರುವುದು ಅತ್ಯಂತ ಮೆಚ್ಚುವಂತಹ ಪ್ರಯತ್ನ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟನೆ
ಕಾರ್ಯಕ್ರಮವನ್ನು ಹಿರಿಯ ಕಲಾವಿದ ಗೋವಿಂದ ಉದ್ಘಾಟಿಸಿದರು. ಸುಖಾಂಕ್ಷ ಹಾಗೂ ಸಮೂಹ ಸಂಸ್ಥೆಯ ಆಶ್ರಮವಾಸಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಿದರು. ಟಮ್ಮಿ ಪ್ಯೂಯಲ್ ಆಶಾ ಅವರಿಂದ ಸಿದ್ಧಪಡಿಸಲಾದ ವಿವಿಧ ಸ್ವಾದಿಷ್ಟ ಆಹಾರವನ್ನು ಎಲ್ಲರೂ ಸಾಮೂಹಿಕವಾಗಿ ಸವಿದರು.
ಕಾರ್ಯಕ್ರಮವನ್ನು ಜಯದೇವ ಶ್ರೀನಿವಾಸು ನಿರೂಪಿಸಿದರು. ಸುಖಾಂಕ್ಷ ಸಂಸ್ಥೆಯ ಯಶೋಧ ಜಿ ಅವರು ಪರೋಪಕಾರದ ಮಹತ್ವ ಹಾಗೂ ಯುವ ಸಮುದಾಯ ಸಮಾಜಮುಖಿ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಶ್ರೀನಾಥ್ ದಂಪತಿ, ಭಾಸ್ಕರ್, ಗೀತಾ, ರಂಗ ಕಳಸದ ಆನಂದ್ ಡಿ ಕಳಸ, ಯುವ ನಿರ್ದೇಶಕ ರಾಕೇಶ್, ಪತ್ರಕರ್ತ ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




