Full site
Bengaluru

ಬನಶಂಕರಿ ಸುಬ್ರಹ್ಮಣ್ಯಪುರ ರಸ್ತೆ ಅಗಲೀಕರಣಕ್ಕೆ ಸ್ಥಳ ಪರಿಶೀಲನೆ

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ಇಂದು ಬನಶಂಕರಿ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಗ್ಗಿಸಲು ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

*ಬನಶಂಕರಿ ಜಂಕ್ಷನ್‌ನಲ್ಲಿ ಪರ್ಯಾಯ ಮಾರ್ಗಕ್ಕಾಗಿ ಬಿಎಂಟಿಸಿ ಟರ್ಮಿನಲ್ ಪಕ್ಕದ ಜಾಗ ಪರಿಶೀಲನೆ*

ಬನಶಂಕರಿ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಿ, ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಸುಬ್ರಹ್ಮಣ್ಯಪುರದಿಂದ ಬನಶಂಕರಿ ಕಡೆಗೆ ಆಗಮಿಸುವ ವಾಹನಗಳಿಗೆ ಬನಶಂಕರಿ ಬಿಎಂಟಿಸಿ ಬಸ್ ಟರ್ಮಿನಲ್‌ನ ಹಿಂಭಾಗದಲ್ಲಿ ಪರ್ಯಾಯ ರಸ್ತೆ ಮಾರ್ಗ ಕಲ್ಪಿಸುವ ಸಾಧ್ಯತೆ , ರಸ್ತೆ ಸಂಪರ್ಕ ಹಾಗೂ ಸಂಚಾರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

*ಸುಬ್ರಹ್ಮಣ್ಯಪುರ ರಸ್ತೆ ಅಗಲೀಕರಣಕ್ಕಾಗಿ ಸ್ಥಳ ಪರಿಶೀಲನೆ*

ಬನಶಂಕರಿ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕದಿರೇನಹಳ್ಳಿ ಕ್ರಾಸ್ ಮೂಲಕ ಬನಶಂಕರಿಗೆ ಬರುವ ವಾಹನ ಸಂಚಾರ ಸಾಮರ್ಥ್ಯ ಹೆಚ್ಚಿಸಲು ಸುಬ್ರಹ್ಮಣ್ಯಪುರ ರಸ್ತೆ ಅಗಲೀಕರಣ ಕೈಗೊಳ್ಳುವ ರಸ್ತೆಗಳ ಸರ್ವೇ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

*ವಿವಿಧ ಇಲಾಖೆಗಳ ಸಮನ್ವಯಕ್ಕೆ ಸೂಚನೆ*

ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಈ ಯೋಜನೆಯ ಕಾರ್ಯಸಾಧ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಡಿಸಿಪಿ ಗೋಪಾಲ್ ಎಂ. ಬ್ಯಾಕೋಡ್ ಹಾಗೂ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.

Read the full story on Anukshana