ಚುನಾವಣಾ ಅಕ್ರಮದ ವಿರುದ್ಧ ಹೋರಾಟ: ಮೋದಿ, ಜ್ಞಾನೇಶ್ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ಪ್ರಧಾನಿ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ನವದೆಹಲಿ: ‘ಚುನಾವಣಾ ಅಕ್ರಮ’ದ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ವೇಗ ನೀಡಿರುವ ಕಾಂಗ್ರೆಸ್, ಅಧಿಕಾರದಲ್ಲಿ ಉಳಿಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಸಾಧನವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ಅಲ್ಲದೆ, ಮತ ಕಳ್ಳತನ ಮತ್ತು ಚುನಾವಣಾ ಫಲಿತಾಂಶವನ್ನು ಮೊದಲೇ ನಿರ್ಧರಿಸುವಂತಹ ವ್ಯವಸ್ಥೆಗೆ (ಮ್ಯಾಚ್ ಫಿಕ್ಸಿಂಗ್) ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಕ್ಷ ಆಗ್ರಹಿಸಿದೆ.
ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಮತ ಕಳ್ಳತನದ ವಿರುದ್ಧದ ಪ್ರತಿಭಟನೆ ಮತ್ತು ರಾಜೀನಾಮೆ ಬೇಡಿಕೆಯನ್ನು ಸಂವಿಧಾನ ಉಳಿಸಿ ಎಂಬ ವಿಷಯದೊಂದಿಗೆ ಕಾಂಗ್ರೆಸ್ ಜೋಡಿಸುತ್ತಿದೆ. ಸಂವಿಧಾನ ಉಳಿಸಿ ವಿಷಯವು 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದುಕೊಟ್ಟಿತ್ತು.
ಇಂದಿರಾ ಭವನದಲ್ಲಿ ಮಂಗಳವಾರ ಸುಮಾರು ಎರಡೂವರೆ ಗಂಟೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಎಸ್ಐಆರ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಮೂರು ಹಂತಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 13.3 ಕೋಟಿ ಹೆಸರುಗಳನ್ನು ಮರಳಿ ಸೇರಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತು.
ಎಲ್ಲ ವಿರೋಧ ಪಕ್ಷಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದರೂ ಸಿಡಬ್ಲ್ಯುಸಿ ಯಾವುದೇ ನಿರ್ದಿಷ್ಟ ಪ್ರತಿಭಟನಾ ಕಾರ್ಯಕ್ರಮವನ್ನು ಘೋಷಿಸಲಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ 68 ಸದಸ್ಯರ ಪೈಕಿ 30 ಮಂದಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ‘ಇಂಡಿಯಾ’ ಕೂಟದ ಸಭೆ ಬುಧವಾರ ನಡೆಯಲಿದೆ.
ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೈತಿಕತೆ ಆಧಾರದಲ್ಲಿ ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ‘ಜ್ಞಾನೇಶ್ ಅವರ ಪುನರಾವರ್ತಿತ ಪ್ರಯತ್ನಗಳು ಆಡಳಿತಾರೂಢ ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿವೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಅವರ ಕ್ರಮಗಳನ್ನು ಇಬ್ಬರು ಚುನಾವಣಾ ಆಯುಕ್ತರು ಸ್ವೇಚ್ಛಾಚಾರ ಮತ್ತು ಅನುಚಿತ ಎಂದು ಬಣ್ಣಿಸಿದ್ದಾರೆ’ ಎಂದರು.
‘ಮೋದಿ ಮತ್ತು ಶಾ ತಾವು ಅಧಿಕಾರದಿಂದ ಕೆಳಗಿಳಿಯಲೇಬೇಕೆಂಬುದನ್ನು ಒಪ್ಪಿಕೊಂಡಂತಿದೆ ಮತ್ತು ನೀವು ಕೂಡ ಅದನ್ನು ಒಪ್ಪಿಕೊಳ್ಳಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಹೇಳಿದರು. ‘ಈ ವಿಷಯದ ಬಗ್ಗೆ ಯಾವುದೇ ಗೊಂದಲದ ಅಗತ್ಯವಿಲ್ಲ. ಕಳೆದ ಎರಡು ವರ್ಷಗಳಿಂದ ನಾನು ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡುತ್ತಿದ್ದೇನೆ. ಆರಂಭದಲ್ಲಿ ಅದನ್ನು ಒಪ್ಪಿಕೊಳ್ಳಲು ಇಷ್ಟಪಡದವರು ಈಗ ಅದನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ’ ಎಂದು ಅವರು ಹೇಳಿದರು.
ಸಿಇಸಿ ಮತ್ತು ಆಡಳಿತಾರೂಢ ಬಿಜೆಪಿಯ ವಿರುದ್ಧದ ಪ್ರತಿಭಟನೆಗಳನ್ನು ತೀವ್ರಗೊಳಿಸುವಂತೆ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದ ಅವರು, ಕಾಂಗ್ರೆಸ್ ಕೇವಲ ವಿರೋಧ ಮಾಡುವ ಪಕ್ಷವಲ್ಲ, ಬದಲಿಗೆ ಪ್ರತಿರೋಧ ಒಡ್ಡುವ ಪಕ್ಷ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಅವರು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಬೇಡಿ. ಅವರು ಖಂಡಿತವಾಗಿಯೂ ರಾಜೀನಾಮೆ ನೀಡುತ್ತಾರೆ. ನೀವು ನಿಮ್ಮ ಬೇಡಿಕೆಗೆ ಬದ್ಧರಾಗಿರಿ’ ಎಂದು ಹೇಳಿದರು.
ಪ್ರಧಾನಿ ಮತ್ತು ಗೃಹ ಸಚಿವರ ಪರವಾಗಿ ಮುಖ್ಯ ಚುನಾವಣಾ ಆಯುಕ್ತರು ಬಹಿರಂಗವಾಗಿ ಈ ಮತ ಕಳ್ಳತನ ನಡೆಸಿದ್ದಾರೆ. ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಸುರಕ್ಷತೆಗೆ ಮೋದಿ-ಶಾ ರಾಜೀನಾಮೆ ನೀಡಲೇಬೇಕು ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ‘ಚುನಾವಣಾ ಅಕ್ರಮಗಳು ಕೇವಲ ಜ್ಞಾನೇಶ್ ಕುಮಾರ್ ಆಡಿದ ಆಟಗಳಲ್ಲ, ಅವರು ಸಾಧನವಷ್ಟೇ. ಸರ್ವಾಧಿಕಾರಿಗಳು ತಮ್ಮ ಹಿಡಿತ ಕಳೆದುಕೊಂಡಾಗ, ಅಧಿಕಾರದಲ್ಲಿ ಉಳಿಯಲು ಅಸಾಮಾನ್ಯ ಮಾರ್ಗಗಳನ್ನು ಆಶ್ರಯಿಸುತ್ತಾರೆ. ಮೋದಿ-ಶಾ ಅದನ್ನೇ ಮಾಡಿದ್ದಾರೆ. ಈಗ ಇದರ ವಿರುದ್ಧ ಹೋರಾಡುವ ಸಮಯ ಬಂದಿದೆ ಎಂಬುದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅಭಿಪ್ರಾಯವಾಗಿತ್ತು’ ಎಂದು ಹೇಳಿದರು.
ಜನರ ಮತ ಹಕ್ಕಿನ ಈ ಕಳ್ಳತನಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂಬುದನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ನೇಮಿಸಿದ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ಸಿಡಬ್ಲ್ಯುಸಿ ಅಂಗೀಕರಿಸಿದ ನಿರ್ಣಯವು ಹೇಳಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ, ಪ್ರತಿಯೊಬ್ಬ ನಾಗರಿಕನ ಮತ ಸುರಕ್ಷಿತವಾಗುವವರೆಗೆ ಮತ್ತು ಭಾರತೀಯ ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಪುನಃಸ್ಥಾಪನೆಯಾಗುವವರೆಗೆ ಪಕ್ಷವು ಸಂಸತ್ತಿನಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಬೀದಿಗಿಳಿದು ಹೋರಾಡಲಿದೆ ಎಂದು ನಿರ್ಣಯ ತಿಳಿಸಿದೆ.
ಮಲ್ಲಿಕಾರ್ಜುನ ಖರ್ಗೆಹತ್ತು ವರ್ಷಗಳ ಹಿಂದೆ ನೋಟು ರದ್ದತಿ (ನೋಟು-ಬಂದಿ) ಮೂಲಕ ದೇಶದ ಆರ್ಥಿಕತೆ ಧ್ವಂಸಗೊಳಿಸಿದ ಮಾದರಿಯಲ್ಲೇ, ಈಗ ‘ವೋಟ್-ಬಂದಿ’ ಮೂಲಕ ನರೇಂದ್ರ ಮೋದಿ ಅವರು ಭಾರತದ ಬಲಿಷ್ಠ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆರಾಹುಲ್ ಗಾಂಧಿಪ್ರಸ್ತುತ ಮೋದಿ ಸರ್ಕಾರವು ಅಲ್ಪಮತದ ಸರ್ಕಾರವಲ್ಲ, ಬದಲಿಗೆ ಅಕ್ರಮವಾಗಿ ನಡೆದ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಅಕ್ರಮ ಸರ್ಕಾರ.
ಈ ಸರ್ಕಾರ ರೂಪಿಸಿದ ಪ್ರತಿಯೊಂದು ಕಾನೂನೂ ಅಕ್ರಮವಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಪಕ್ಷವು ತನ್ನ ಹೋರಾಟವನ್ನುತೀವ್ರಗೊಳಿಸಬೇಕು.
Source: Prajavani
Read the full story on Anukshana