Full site
Protest

ಜ್ಞಾನೇಶ್ ಕುಮಾರ್ ತಪ್ಪು ಒಪ್ಪಿಕೊಳ್ಳಬೇಕು: ಸಿಎಂ ಆಗ್ರಹ

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯ; ಎಸ್‌ಐಆರ್ ವಿರುದ್ಧ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸುವುದಾಗಿ ಘೋಷಣೆ

By Anukshana News Desk3 min readNew Delhi

ದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಬೇಕು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ವಿಜಯ್ ಚೌಕ್‌ನಲ್ಲಿ ಶುಕ್ರವಾರ ನಡೆದ ಪ್ರತಿಪಕ್ಷಗಳ ಪ್ರತಿಭಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಮತದಾರರನ್ನು ಸಮಾನವಾಗಿ ಕಾಣಬೇಕಾದ ಸಾಂವಿಧಾನಿಕ ಸಂಸ್ಥೆ ಎಂದು ಹೇಳಿದರು.

“ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದರೂ ಮುಖ್ಯ ಚುನಾವಣಾ ಆಯುಕ್ತರು ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿಲ್ಲ. ಅವರ ಸಮಸ್ಯೆಗಳು ಹಾಗೂ ಆರೋಪಗಳನ್ನು ಆಲಿಸಿ ಸ್ಪಷ್ಟನೆ ನೀಡುವುದು ಆಯೋಗದ ಜವಾಬ್ದಾರಿ. ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳಬೇಕು” ಎಂದು ಹೇಳಿದರು.

ಚುನಾವಣಾ ಆಯೋಗವು ಸ್ವಾಯತ್ತ ಮತ್ತು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಯಾವುದೇ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನಕ್ಕೂ ಅವಕಾಶ ನೀಡಬಾರದು. ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಗಳಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದೆ ಎಂದು ಶಿವಕುಮಾರ್ ಹೇಳಿದರು.

Form 6 ವಿಚಾರ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಸ್ವಾಗತ

ಮತದಾರರ ನೋಂದಣಿಗೆ ಬಳಸುವ Form 6ರಲ್ಲಿ ಮಾಡಲಾಗಿದ್ದ ಬದಲಾವಣೆಗಳಿಗೆ ಸುಪ್ರೀಂ ಕೋರ್ಟ್ ತನ್ನ ಅನುಮೋದನೆ ನೀಡಿರಲಿಲ್ಲ ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ಉಲ್ಲೇಖಿಸಿದ ಶಿವಕುಮಾರ್, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಅತ್ಯಗತ್ಯ ಎಂದರು.

“ಅನ್ಯಾಯದ ವಿರುದ್ಧ ನ್ಯಾಯಾಲಯ ಧ್ವನಿ ಎತ್ತಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ. ಚುನಾವಣಾ ಪ್ರಕ್ರಿಯೆ ಮತ್ತು ಮತದಾರರ ಹಕ್ಕಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಗತ್ಯವಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿ ಪ್ರಜಾಪ್ರಭುತ್ವದ ಹಿತವನ್ನು ಕಾಪಾಡುತ್ತದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

‘ಯಾವುದೇ ರಾಜಕೀಯ ಪಕ್ಷದ ಟೂಲ್ ಆಗಬಾರದು’

ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷದ ಸಾಧನವಾಗಿ ಕಾರ್ಯನಿರ್ವಹಿಸಬಾರದು ಎಂದು ಒತ್ತಿ ಹೇಳಿದ ಶಿವಕುಮಾರ್, ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

“ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಂಪೂರ್ಣ ಸಮತೋಲನ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳಬೇಕು. ಚುನಾವಣಾ ಆಯೋಗದ ಮೇಲೆ ಜನರ ವಿಶ್ವಾಸ ಉಳಿಯಬೇಕು. ಜ್ಞಾನೇಶ್ ಕುಮಾರ್ ಅವರು ಯಾವುದೇ ಪಕ್ಷದ ಕೈಗೊಂಬೆಯಾಗಬಾರದು; ಯಾವುದೇ ರಾಜಕೀಯ ಪಕ್ಷದ ‘ಟೂಲ್’ ಆಗಿ ಕೆಲಸ ಮಾಡಬಾರದು” ಎಂದು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಕುರಿತು ಪ್ರಧಾನಿಯವರು ಸೂಕ್ತ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಈಗಿನ ಎಸ್‌ಐಆರ್ ಪ್ರಕ್ರಿಯೆಯನ್ನು ಮರುಪರಿಶೀಲಿಸಿ, ಪ್ರತಿಪಕ್ಷಗಳೊಂದಿಗೆ ಸಮಾಲೋಚನೆಯ ನಂತರ ಮುಕ್ತ ಮತ್ತು ನ್ಯಾಯಸಮ್ಮತ ಮತದಾರರ ಪಟ್ಟಿ ಪರಿಷ್ಕರಣೆ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.

‘ಮತದಾನದ ಹಕ್ಕು ಕಸಿಯಲು ಬಿಡುವುದಿಲ್ಲ’

ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಕೈಬಿಡಲು ಅವಕಾಶ ನೀಡುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

“ಎಸ್‌ಐಆರ್ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದುದಲ್ಲ. ಇದು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಹಾಗೂ ಸಂವಿಧಾನದ ರಕ್ಷಣೆಗೆ ಸಂಬಂಧಿಸಿದ ಹೋರಾಟ. ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸುವುದರ ಜೊತೆಗೆ ಅನರ್ಹ ಹೆಸರುಗಳ ಸೇರ್ಪಡೆಯನ್ನೂ ತಡೆಯಬೇಕು” ಎಂದರು.

ಕಾನೂನುಬದ್ಧವಾಗಿ ಮತದಾನದ ಅರ್ಹತೆ ಹೊಂದಿರುವ ಪ್ರತಿಯೊಬ್ಬರಿಗೂ ಮತದಾನ ಮಾಡುವ ಅವಕಾಶ ಸಿಗಬೇಕು. ಮತದಾನದ ಹಕ್ಕು ದುರುಪಯೋಗವಾಗಬಾರದು ಎಂಬುದೇ ಸರ್ಕಾರದ ನಿಲುವು ಎಂದು ತಿಳಿಸಿದರು.

ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು Form 6 ಸಲ್ಲಿಸಬಹುದಾಗಿದ್ದು, ಹೆಸರು ಕೈಬಿಟ್ಟಿರುವವರು ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಪ್ರತಿ ಜಿಲ್ಲೆ, ಕ್ಷೇತ್ರದಲ್ಲೂ ಜಾಗೃತಿ

ಮತದಾರರ ಹಕ್ಕಿನ ರಕ್ಷಣೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲೂ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಅರಿವು ಮೂಡಿಸಲಾಗುವುದು. ಅರ್ಹ ಮತದಾರರ ಹೆಸರು ಕೈಬಿಟ್ಟಿರುವುದು ಕಂಡುಬಂದರೆ, ಅಗತ್ಯ ಅರ್ಜಿ ಹಾಗೂ ಕಾನೂನು ಪ್ರಕ್ರಿಯೆಗಳ ಮೂಲಕ ಹೆಸರು ಮರುಸೇರಿಸಿಕೊಳ್ಳಲು ನೆರವು ನೀಡಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಹಿರಿಯ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ರಾಜ್ಯಾದ್ಯಂತ ಸಂಘಟಿತ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ರಾಷ್ಟ್ರಮಟ್ಟದಲ್ಲೂ ಪ್ರತಿಪಕ್ಷಗಳ ಒಗ್ಗಟ್ಟಿನ ಹೋರಾಟ

ಎಸ್‌ಐಆರ್ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ರಾಷ್ಟ್ರಮಟ್ಟದಲ್ಲೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿವೆ ಎಂದು ಶಿವಕುಮಾರ್ ಹೇಳಿದರು.

ದೆಹಲಿಯ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಪ್ರತಿಪಕ್ಷಗಳ ನಾಯಕರು ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದಾರೆ. ಬಳಿಕ INDIA ಮೈತ್ರಿಕೂಟದ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಎಸ್‌ಐಆರ್ ಕುರಿತು ತಮ್ಮ ಆಕ್ಷೇಪಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದರು.

“ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ವಿಚಾರದಲ್ಲಿ ಎಲ್ಲ ಪ್ರತಿಪಕ್ಷಗಳೂ ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿವೆ. ಒಗ್ಗಟ್ಟಿನಲ್ಲಿ ಶಕ್ತಿಯಿದೆ” ಎಂದು ಶಿವಕುಮಾರ್ ಹೇಳಿದರು.

Read the full story on Anukshana