Full site
Greater Bengaluru Authority GBA

ಬೆಂಗಳೂರಿನಲ್ಲಿ ನವೆಂಬರ್ 1ರಿಂದ ‘ವಾರ್ಡ್ ಒನ್’ ಅಭಿಯಾನ ಆರಂಭ; 43 ವಾರ್ಡ್‌ಗಳ ಆಯ್ಕೆ

ರಸ್ತೆ ದುರಸ್ತಿ, ಗುಂಡಿ ಮುಚ್ಚುವಿಕೆ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಸುಧಾರಣೆಗೆ ಒಂದು ತಿಂಗಳ ವಿಶೇಷ ಅಭಿಯಾನ

By Anukshana News Desk2 min read

ಬೆಂಗಳೂರು: ನಗರದ ನಾಗರಿಕ ಮೂಲಸೌಕರ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನವೆಂಬರ್ 1ರಿಂದ ಒಂದು ತಿಂಗಳ ಕಾಲ ‘ವಾರ್ಡ್ ಒನ್’ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಒಟ್ಟು 43 ವಾರ್ಡ್‌ಗಳನ್ನು ಈ ಅಭಿಯಾನಕ್ಕಾಗಿ ಆಯ್ಕೆ ಮಾಡಲಾಗಿದೆ.

ರಸ್ತೆಗಳ ದುರಸ್ತಿ, ರಸ್ತೆ ಗುಂಡಿಗಳ ಮುಚ್ಚುವಿಕೆ, ಸ್ವಚ್ಛತಾ ಕಾರ್ಯ, ಸಂಗ್ರಹವಾಗಿರುವ ತ್ಯಾಜ್ಯ ಮತ್ತು ಕಸ ವಿಲೇವಾರಿ, ಬೀದಿದೀಪಗಳ ದುರಸ್ತಿ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು. ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದರ ಜೊತೆಗೆ ಸ್ಥಳೀಯ ನಿವಾಸಿಗಳನ್ನೂ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ವಾರ್ಡ್‌ಗಳ ಆಯ್ಕೆಯ ಪ್ರಕಾರ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 12, ಪಶ್ಚಿಮದಲ್ಲಿ 10, ಪೂರ್ವದಲ್ಲಿ 8, ಉತ್ತರದಲ್ಲಿ 7 ಹಾಗೂ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ವಾರ್ಡ್‌ಗಳನ್ನು ಗುರುತಿಸಲಾಗಿದೆ.

ಮಳೆ ಹಾನಿಗೊಳಗಾದ ರಸ್ತೆಗಳಿಗೆ ಆದ್ಯತೆ

ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ದುರಸ್ತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪ್ರತಿ ನಗರ ಪಾಲಿಕೆಯ ವಿಭಾಗದಿಂದ ಆಯ್ದ ವಾರ್ಡ್‌ಗಳಲ್ಲಿನ ಪ್ರಮುಖ ನಾಗರಿಕ ಸಮಸ್ಯೆಗಳನ್ನು ಗುರುತಿಸಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಜಿಬಿಎ, ನಗರ ಪಾಲಿಕೆಗಳು ಹಾಗೂ ಇತರ ಸರ್ಕಾರಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.

ಯಾವೆಲ್ಲ ಕಾಮಗಾರಿಗಳಿಗೆ ಆದ್ಯತೆ?

ಅಭಿಯಾನದಡಿ ರಸ್ತೆ ಮತ್ತು ಜಂಕ್ಷನ್‌ಗಳ ದುರಸ್ತಿ, ರಸ್ತೆ ಗುಂಡಿಗಳನ್ನು ಮುಚ್ಚುವುದು, ತೀವ್ರ ಸ್ವಚ್ಛತಾ ಕಾರ್ಯಾಚರಣೆ ಹಾಗೂ ಸಂಗ್ರಹವಾಗಿರುವ ಕಸ ಮತ್ತು ಕಟ್ಟಡ ತ್ಯಾಜ್ಯ ತೆರವುಗೊಳಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ.

ಇದರೊಂದಿಗೆ ಪಾದಚಾರಿ ಮಾರ್ಗಗಳ ಕರ್ಬ್‌ಸ್ಟೋನ್‌ಗಳು ಮತ್ತು ಸ್ಲ್ಯಾಬ್‌ಗಳ ದುರಸ್ತಿ, ಮ್ಯಾನ್‌ಹೋಲ್ ಮುಚ್ಚಳಗಳ ಅಳವಡಿಕೆ ಹಾಗೂ ದುರಸ್ತಿ, ಹಾಳಾಗಿರುವ ಬೀದಿದೀಪಗಳ ಪುನಃಸ್ಥಾಪನೆ ಮತ್ತು ಅಪಾಯಕಾರಿಯಾಗಿರುವ ಒಣ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತದೆ.

ಬೆಸ್ಕಾಂಗೆ ಸಂಬಂಧಿಸಿದ ವಿದ್ಯುತ್ ಕಂಬಗಳು ಮತ್ತು ರಿಂಗ್ ಮೇನ್ ಯುನಿಟ್‌ಗಳ (RMU) ದುರಸ್ತಿ ಅಥವಾ ಸ್ಥಳಾಂತರ, ನೀರು ಸೋರಿಕೆ ತಡೆಗಟ್ಟುವಿಕೆ ಹಾಗೂ ಹಾನಿಗೊಳಗಾದ ನೀರಿನ ಪೈಪ್‌ಲೈನ್‌ಗಳ ದುರಸ್ತಿ ಅಥವಾ ತೆರವು ಕಾರ್ಯಗಳಿಗೂ ಒತ್ತು ನೀಡಲಾಗುತ್ತದೆ. ಆಯ್ದ ವಾರ್ಡ್‌ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವೂ ಇದೆ.

ನಾಗರಿಕರ ಸಹಭಾಗಿತ್ವಕ್ಕೆ ಕರೆ

ಅಭಿಯಾನ ಯಶಸ್ವಿಯಾಗಲು ಸ್ಥಳೀಯ ನಿವಾಸಿಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (RWA) ಸಕ್ರಿಯ ಸಹಕಾರ ಅಗತ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸ್ವಚ್ಛತಾ ಕಾರ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಹಾಗೂ ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಅಭಿಯಾನವನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿಭಾಗ ಮಟ್ಟದ ಸಮಿತಿಗಳನ್ನು ರಚಿಸಿ, ಕಾಮಗಾರಿಗಳ ಅನುಷ್ಠಾನ ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿರುವ ಸಮಸ್ಯೆಗಳ ಸ್ವರೂಪ ಹಾಗೂ ಕಾಮಗಾರಿ ಪೂರ್ಣಗೊಳ್ಳಲು ಬೇಕಾಗುವ ಸಮಯವನ್ನು ಆಧರಿಸಿ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತದೆ.

ಕೇವಲ ಸ್ವಚ್ಛತಾ ಅಭಿಯಾನಕ್ಕೆ ಸೀಮಿತವಾಗದೆ, ಆಯ್ಕೆಯಾದ 43 ವಾರ್ಡ್‌ಗಳಲ್ಲಿ ಸಮಗ್ರ ನಾಗರಿಕ ಮೂಲಸೌಕರ್ಯ ಸುಧಾರಣೆ ಮತ್ತು ಉತ್ತಮ ಪರಿಸರ ನಿರ್ಮಿಸುವುದು ‘ವಾರ್ಡ್ ಒನ್’ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

Read the full story on Anukshana