ಎಸ್ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ
ಜಿಬಿಎ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಅ.6ರವರೆಗೆ 23.93 ಲಕ್ಷ ನೋಟಿಸ್ಗಳನ್ನು ವಿತರಿಸಿ 20.23 ಲಕ್ಷ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರಿರುವ ಕರಡು ಪಟ್ಟಿಯ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅ.22ರವರೆಗೆ ನಡೆಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
56.99 ಲಕ್ಷ ಮತದಾರರ ಕರಡು ಪಟ್ಟಿ; 24.06 ಲಕ್ಷ No Mapping–Anomalies ಪ್ರಕರಣಗಳು; 20.23 ಲಕ್ಷ ವಿಚಾರಣೆ ಪೂರ್ಣ: ವಿಶೇಷ ಆಯುಕ್ತೆ ಶಿಲ್ಪಾ ನಾಗ್
ಬೆಂಗಳೂರು, ಅ.6: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 (SIR) ಪ್ರಕ್ರಿಯೆಯಡಿ ಅಕ್ಟೋಬರ್ 6ರವರೆಗೆ ಒಟ್ಟು 24,07,043 ನೋಟಿಸ್ಗಳನ್ನು ಸೃಷ್ಟಿಸಲಾಗಿದ್ದು, 23,93,493 ನೋಟಿಸ್ಗಳನ್ನು ವಿತರಿಸಲಾಗಿದೆ. ಇನ್ನೂ 13,550 ನೋಟಿಸ್ಗಳು ವಿತರಣೆಗೆ ಬಾಕಿ ಇವೆ ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಮಂಗಳವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಐಆರ್ ಪ್ರಗತಿ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ನೀಡಲಾಗಿತ್ತು. ಸ್ವೀಕೃತ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಅಕ್ಟೋಬರ್ 22ರವರೆಗೆ ನಡೆಯಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ 56,99,660 ಮತದಾರರು
ಆಗಸ್ಟ್ 24ರ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 56,99,660 ಮತದಾರರು ಇದ್ದಾರೆ. ಇವರಲ್ಲಿ 27,69,866 ಪುರುಷರು, 29,29,092 ಮಹಿಳೆಯರು ಹಾಗೂ 702 ಇತರೆ ಮತದಾರರು ಸೇರಿದ್ದಾರೆ.
ವಿಭಾಗವಾರು ಬೆಂಗಳೂರಿನ ನಗರ ವ್ಯಾಪ್ತಿಯಲ್ಲಿ 23,03,623, ಉತ್ತರದಲ್ಲಿ 12,80,085, ಕೇಂದ್ರದಲ್ಲಿ 10,29,196 ಹಾಗೂ ದಕ್ಷಿಣದಲ್ಲಿ 10,86,756 ಮತದಾರರು ದಾಖಲಾಗಿದ್ದಾರೆ.
24.06 ಲಕ್ಷ No Mapping–Anomalies ಪ್ರಕರಣಗಳು
ಎಸ್ಐಆರ್ ಪ್ರಕ್ರಿಯೆಯಲ್ಲಿ No Mapping ಹಾಗೂ Anomalies ವಿಭಾಗಗಳಡಿ ಒಟ್ಟು 24,06,044 ಪ್ರಕರಣಗಳು ಗುರುತಿಸಲ್ಪಟ್ಟಿವೆ. ಇದರಲ್ಲಿ 17,81,858 No Mapping ಪ್ರಕರಣಗಳು ಮತ್ತು 6,24,186 Anomalies ಪ್ರಕರಣಗಳು ಸೇರಿವೆ.
ಬೆಂಗಳೂರು ನಗರದಲ್ಲಿ 9,46,037, ಉತ್ತರದಲ್ಲಿ 6,13,004, ಕೇಂದ್ರದಲ್ಲಿ 4,29,372 ಹಾಗೂ ದಕ್ಷಿಣದಲ್ಲಿ 4,17,631 No Mapping ಮತ್ತು Anomalies ಪ್ರಕರಣಗಳು ದಾಖಲಾಗಿವೆ.
814 ವಿಚಾರಣಾ ಕೇಂದ್ರಗಳು; 1,193 AEROಗಳು
ಮತದಾರರ ವಿಚಾರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 814 ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಿರುವ 76 ನಿಯಮಿತ AEROಗಳ ಜೊತೆಗೆ 1,117 ಹೆಚ್ಚುವರಿ AEROಗಳನ್ನು ನೇಮಕ ಮಾಡಲಾಗಿದ್ದು, ಒಟ್ಟು 1,193 AEROಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಮತದಾರರು ಕಚೇರಿಗೆ ಬರುವ ಅಗತ್ಯವಿಲ್ಲ
No Mapping ಅಥವಾ logical discrepancies ಕಾರಣದಿಂದ ನೋಟಿಸ್ ಪಡೆದ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (BLO) ನೇರವಾಗಿ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿ ECINetಗೆ ಅಪ್ಲೋಡ್ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಇಂತಹ ಮತದಾರರನ್ನು ಸಾಮಾನ್ಯವಾಗಿ ERO ಅಥವಾ AERO ಕಚೇರಿಯ ವಿಚಾರಣೆಗೆ ಕರೆಯುವ ಅಗತ್ಯವಿಲ್ಲ. ವಿಶೇಷ ಸಂದರ್ಭಗಳಲ್ಲಿ ERO ನಿರ್ಧಾರಕ್ಕೆ ಅನುಗುಣವಾಗಿ ವಿಚಾರಣೆಯನ್ನು ಆದ್ಯತೆಯಿಂದ ಆನ್ಲೈನ್ ಮೂಲಕ ನಡೆಸಬಹುದು. ಅಗತ್ಯವಿದ್ದಲ್ಲಿ ಮತದಾರರು ತಮ್ಮ ಕುಟುಂಬದ ಯಾವುದೇ ವಯಸ್ಕ ಸದಸ್ಯರನ್ನು ವಿಚಾರಣೆಗೆ ಹಾಜರಾಗಲು ಅಧಿಕೃತಗೊಳಿಸಬಹುದು ಎಂದು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ರಾತ್ರಿ ಆಶ್ರಯ ಕೇಂದ್ರಗಳಲ್ಲಿ ವಾಸಿಸುವವರು, ಕಾರ್ಮಿಕರು, ಬಡವರು ಮತ್ತು ನಿರಾಶ್ರಿತರಿಗೆ ಅಗತ್ಯವಿರುವ ಕಡೆಗಳಲ್ಲಿ ಸಹಾಯ ಕೇಂದ್ರಗಳು ಮತ್ತು ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ.
20.23 ಲಕ್ಷ ವಿಚಾರಣೆ ಪೂರ್ಣ
ಅಕ್ಟೋಬರ್ 6ರವರೆಗೆ ಒಟ್ಟು 20,23,164 ನೋಟಿಸ್ ವಿಚಾರಣೆಗಳು ಪೂರ್ಣಗೊಂಡಿವೆ. ಸೆಪ್ಟೆಂಬರ್ 24ರಿಂದ ಅಕ್ಟೋಬರ್ 6ರವರೆಗೆ ಹೆಚ್ಚುವರಿಯಾಗಿ 6,82,501 ವಿಚಾರಣೆಗಳು ಪೂರ್ಣಗೊಂಡಿದ್ದು, ಇನ್ನೂ 3,70,329 ಪ್ರಕರಣಗಳು ಬಾಕಿ ಇವೆ.
ನಗರ ವಿಭಾಗದಲ್ಲಿ 8,09,614, ಉತ್ತರದಲ್ಲಿ 5,54,744, ಕೇಂದ್ರದಲ್ಲಿ 3,53,961 ಹಾಗೂ ದಕ್ಷಿಣದಲ್ಲಿ 3,04,845 ವಿಚಾರಣೆಗಳು ಪೂರ್ಣಗೊಂಡಿವೆ.
5.42 ಲಕ್ಷ ಅರ್ಜಿಗಳು ಸಲ್ಲಿಕೆ
ನಮೂನೆಗಳ ಪ್ರಕ್ರಿಯೆಗೆ ಸಂಬಂಧಿಸಿ ಜಿಬಿಎ ವ್ಯಾಪ್ತಿಯಲ್ಲಿ ಅಕ್ಟೋಬರ್ 6ರವರೆಗೆ ಒಟ್ಟು 5,42,893 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 1,02,712 ಅರ್ಜಿಗಳನ್ನು ಅಂಗೀಕರಿಸಿ ಮತದಾರರ ಪಟ್ಟಿಯಲ್ಲಿ ನವೀಕರಿಸಲಾಗಿದೆ. ಇನ್ನೂ 3,89,698 ಅರ್ಜಿಗಳು ಬಾಕಿ ಇವೆ.
ಕೇಂದ್ರ ವಿಭಾಗದಲ್ಲಿ 93,369 ಅರ್ಜಿಗಳ ಪೈಕಿ 37,326 ಅಂಗೀಕರಿಸಲಾಗಿದ್ದು 42,164 ಬಾಕಿ ಇವೆ. ಉತ್ತರದಲ್ಲಿ 1,26,850 ಅರ್ಜಿಗಳ ಪೈಕಿ 29,242 ಅಂಗೀಕಾರಗೊಂಡಿದ್ದು 72,296 ಬಾಕಿ; ದಕ್ಷಿಣದಲ್ಲಿ 95,696 ಅರ್ಜಿಗಳ ಪೈಕಿ 12,672 ಅಂಗೀಕಾರಗೊಂಡಿದ್ದು 76,996 ಬಾಕಿ; ಬೆಂಗಳೂರು ನಗರ ವಿಭಾಗದಲ್ಲಿ 2,26,978 ಅರ್ಜಿಗಳ ಪೈಕಿ 23,472 ಅಂಗೀಕಾರಗೊಂಡಿದ್ದು 1,98,242 ಅರ್ಜಿಗಳು ಬಾಕಿ ಇವೆ.
2.43 ಲಕ್ಷ ನೋಟಿಸ್ ವಿತರಣೆಯಲ್ಲಿ ಪ್ರಗತಿ
ಸೆಪ್ಟೆಂಬರ್ 24ರಂದು 21,50,077 ನೋಟಿಸ್ಗಳು ವಿತರಿಸಲ್ಪಟ್ಟಿದ್ದರೆ, ಅಕ್ಟೋಬರ್ 6ಕ್ಕೆ ಈ ಸಂಖ್ಯೆ 23,93,493ಕ್ಕೆ ಏರಿಕೆಯಾಗಿದೆ. ಕಳೆದ ಸಭೆಯ ನಂತರ ಒಟ್ಟು 2,43,416 ನೋಟಿಸ್ಗಳ ವಿತರಣೆಯಲ್ಲಿ ಪ್ರಗತಿ ಸಾಧಿಸಲಾಗಿದೆ.
ಇದರಲ್ಲಿ ನಗರ ವಿಭಾಗದಲ್ಲಿ 1,00,079, ಉತ್ತರದಲ್ಲಿ 26,341, ಕೇಂದ್ರದಲ್ಲಿ 53,638 ಹಾಗೂ ದಕ್ಷಿಣದಲ್ಲಿ 63,358 ನೋಟಿಸ್ಗಳನ್ನು ಹೆಚ್ಚುವರಿಯಾಗಿ ವಿತರಿಸಲಾಗಿದೆ.
ಬಾಕಿ ಉಳಿದ ಮತ್ತು ಮೊದಲ ಬಾರಿಗೆ ಮತದಾರರಾಗುವವರಿಗೆ ವಿಶೇಷ ಅಭಿಯಾನ
ಎಸ್ಐಆರ್ ಸಂದರ್ಭದಲ್ಲಿ ಅಥವಾ ನಂತರ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವವರು ಹಾಗೂ ಯುವ ಮತ್ತು ಮೊದಲ ಬಾರಿಗೆ ಮತದಾರರಾಗುವವರು ಸಂಬಂಧಪಟ್ಟ EROಗೆ ಅರ್ಜಿ ಸಲ್ಲಿಸಿ continuous updation ಪ್ರಕ್ರಿಯೆಯಡಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬಹುದು.
ಇಂತಹ ಅರ್ಹ ಮತದಾರರ ನೋಂದಣಿಗಾಗಿ CEO, DEO ಮತ್ತು EROಗಳು ತಕ್ಷಣ ವಿಶೇಷ ಅಭಿಯಾನ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿ ಸೆಪ್ಟೆಂಬರ್ 23ಕ್ಕೆ ಮುಕ್ತಾಯಗೊಂಡಿದ್ದು, ಆ ಅವಧಿಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಅಕ್ಟೋಬರ್ 22ರೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹ ಮತದಾರರೊಬ್ಬರೂ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ದೋಷರಹಿತ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಎಸ್ಐಆರ್ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದು ಶಿಲ್ಪಾ ನಾಗ್ ತಿಳಿಸಿದರು.