ರೇಷ್ಮೆ ಉತ್ಪಾದಕರಿಗೆ ಸುವರ್ಣಾವಕಾಶ; ಬಿತ್ತನೆ ಕೋಠಿ ನಿರ್ಮಾಣ, ಸಲಕರಣೆ ಖರೀದಿಗೆ ಸಹಾಯಧನ
ಬೆಂಗಳೂರು: ರಾಜ್ಯದ ರೇಷ್ಮೆ ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಖಾಸಗಿ ದ್ವಿತಳಿ ರೇಷ್ಮೆ ಮೊಟ್ಟೆ ಉತ್ಪಾದಕರಿಗೆ ಮಹತ್ವದ ಅವಕಾಶವನ್ನು ಕಲ್ಪಿಸಿದೆ.
ಕೇಂದ್ರ ವಲಯದ ‘ಸಿಲ್ಕ್ ಸಮಗ್ರ-2’ ಯೋಜನೆಯಡಿ ನೋಂದಾಯಿತ ಖಾಸಗಿ ದ್ವಿತಳಿ ರೇಷ್ಮೆ ಮೊಟ್ಟೆ ಉತ್ಪಾದಕರಿಗೆ ಬಿತ್ತನೆ ಕೋಠಿ ಕಟ್ಟಡ ನಿರ್ಮಾಣ ಹಾಗೂ ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹ ನೋಂದಾಯಿತ ಉತ್ಪಾದಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ತಮ್ಮ ವ್ಯಾಪ್ತಿಯ ರೇಷ್ಮೆ ವಿಸ್ತರಣಾಧಿಕಾರಿಗಳ ಮೂಲಕ 2026ರ ಅಕ್ಟೋಬರ್ 23ರೊಳಗೆ ಸಲ್ಲಿಸಬಹುದಾಗಿದೆ.
ಯೋಜನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು, ಅರ್ಹತಾ ಮಾನದಂಡಗಳು, ನಿಯಮಗಳು ಹಾಗೂ ಅರ್ಜಿ ನಮೂನೆಗಾಗಿ ರೇಷ್ಮೆ ಇಲಾಖೆಯ ಅಧಿಕೃತ ವೆಬ್‌ಸೈಟ್ sericulture.karnataka.gov.in ಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲೆಯ ರೇಷ್ಮೆ ಜಂಟಿ ನಿರ್ದೇಶಕರು ಅಥವಾ ರೇಷ್ಮೆ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ಅರ್ಹ ಖಾಸಗಿ ದ್ವಿತಳಿ ರೇಷ್ಮೆ ಮೊಟ್ಟೆ ಉತ್ಪಾದಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ರೇಷ್ಮೆ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.