ಅಪೌಷ್ಟಿಕತೆ ವಿರುದ್ಧ ಸ್ಪಿರುಲಿನಾ ಬಳಕೆಗೆ ಐಐಎಂಎಸ್‌ಎಎಂ-ನೋವಾಲ್ಗೇ ಸಹಭಾಗಿತ್ವ
ಬಳ್ಳಾರಿ ರೈತರ ಸಮೂಹವನ್ನು ಸಮುದಾಯ ಆಧಾರಿತ ಸ್ಪಿರುಲಿನಾ ಕೃಷಿಯ ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ; 2027ರ ವೇಳೆಗೆ 10 ಲಕ್ಷ ಪೌಷ್ಟಿಕಾಂಶ ಪೂರಕ ವಿತರಿಸುವ ಯೋಜನೆ
ಬೆಂಗಳೂರು, ಅ.5: ಅಪೌಷ್ಟಿಕತೆ, ಆಹಾರ ಭದ್ರತೆ, ಸುಸ್ಥಿರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಮಸ್ಯೆಗಳನ್ನು ಎದುರಿಸುವ ವಿಶಾಲ ಪ್ರಯತ್ನದ ಭಾಗವಾಗಿ ಸ್ಪಿರುಲಿನಾವನ್ನು ಪೌಷ್ಟಿಕಾಂಶದ ವೇಗವರ್ಧಕವಾಗಿ ಬಳಸುವ ಉದ್ದೇಶದಿಂದ ಇಂಟರ್‌ಗವರ್ನ್‌ಮೆಂಟಲ್ ಇನ್‌ಸ್ಟಿಟ್ಯೂಷನ್ ಫಾರ್ ದಿ ಯೂಸ್ ಆಫ್ ಮೈಕ್ರೋ-ಆಲ್ಗೀ ಸ್ಪಿರುಲಿನಾ ಎಗೇನ್ಸ್ಟ್ ಮಾಲ್‌ನ್ಯೂಟ್ರಿಷನ್ (IIMSAM) ಮತ್ತು ಭಾರತ ಮೂಲದ ಮೈಕ್ರೋಆಲ್ಗೀ ಸಂಸ್ಥೆ ನೋವಾಲ್ಗೇ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವಕ್ಕೆ ಮುಂದಾಗಿವೆ.
ಸ್ಪಿರುಲಿನಾ ಕೃಷಿ, ತಂತ್ರಜ್ಞಾನ, ಸಂಸ್ಕರಣೆ ಹಾಗೂ ಸಮುದಾಯ ಆಧಾರಿತ ಕೃಷಿ ಕ್ಷೇತ್ರದಲ್ಲಿ ನೋವಾಲ್ಗೇ ಹೊಂದಿರುವ ಪರಿಣತಿಯನ್ನು, ಅಪೌಷ್ಟಿಕತೆ ವಿರುದ್ಧ ಸ್ಪಿರುಲಿನಾ ಬಳಕೆಗೆ ಸಂಬಂಧಿಸಿದ ಐಐಎಂಎಸ್‌ಎಎಂನ ಅಂತರರಾಷ್ಟ್ರೀಯ ಮಾನವೀಯ ಉದ್ದೇಶದೊಂದಿಗೆ ಜೋಡಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯನ್ನು ಈ ಮಾದರಿಯ ಕ್ಷೇತ್ರಮಟ್ಟದ ಪ್ರಯೋಗ ಮತ್ತು ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿ ರೂಪಿಸಲಾಗುತ್ತಿದೆ. ಬಳ್ಳಾರಿಯಲ್ಲಿ ಆರಂಭಗೊಂಡಿರುವ ನೋವಾಲ್ಗೇ ಬಳ್ಳಾರಿ ರೈತರ ಸಮೂಹ ಮೊದಲ ಹಂತದಲ್ಲಿ ಸುಮಾರು 14 ಎಕರೆ ಪ್ರದೇಶದಲ್ಲಿ ಎಂಟು ಕೃಷಿಕ ಕುಟುಂಬಗಳನ್ನು ಒಳಗೊಂಡಿದೆ. ಮುಂದಿನ ಹಂತಗಳಲ್ಲಿ ಮತ್ತಷ್ಟು ರೈತರು ಸೇರ್ಪಡೆಯಾಗುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಗಳ ಪ್ರತಿನಿಧಿಗಳು, ಈ ಯೋಜನೆ ಕೇವಲ ವಾಣಿಜ್ಯ ಉದ್ದೇಶದ ಸ್ಪಿರುಲಿನಾ ಉತ್ಪಾದನೆಗೆ ಸೀಮಿತವಾಗದೆ ರೈತರು, ವಿಜ್ಞಾನ, ತಂತ್ರಜ್ಞಾನ ಹಾಗೂ ಪೌಷ್ಟಿಕಾಂಶವನ್ನು ಒಂದೇ ವ್ಯವಸ್ಥೆಯಲ್ಲಿ ಸಂಪರ್ಕಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ರೈತರಿಂದ ‘ಸಮುದಾಯ ವಿಜ್ಞಾನಿಗಳ’ವರೆಗೆ
ಐಐಎಂಎಸ್‌ಎಎಂನ ಭಾರತ ರಾಯಭಾರಿ ಎಚ್.ಇ. ಎರ್. ಆಸಿಫ್ ಅಯೂಬ್ ಅವರು ಸೆ.9ರಂದು ಬಳ್ಳಾರಿ ರೈತರ ಸಮೂಹಕ್ಕೆ ಭೇಟಿ ನೀಡಿ ರೈತರು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದ್ದರು.
ಭವಿಷ್ಯದ ರೈತ ಕೇವಲ ಕೃಷಿಕನಾಗಿರದೆ ‘ಸಮುದಾಯ ವಿಜ್ಞಾನಿ’ಯಾಗಿಯೂ ರೂಪುಗೊಳ್ಳಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಸ್ಪಿರುಲಿನಾದ ಬೆಳವಣಿಗೆಯನ್ನು ಗಮನಿಸುವುದು, ಅದರ ಬೆಳವಣಿಗೆಯ ಹಂತಗಳನ್ನು ಅರ್ಥಮಾಡಿಕೊಳ್ಳುವುದು, ಸಂಭವನೀಯ ಮಾಲಿನ್ಯದ ಸೂಚನೆಗಳನ್ನು ಗುರುತಿಸುವುದು ಹಾಗೂ ವೈಜ್ಞಾನಿಕ ಸಾಧನಗಳ ನೆರವಿನಿಂದ ಕೃಷಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಕುರಿತು ರೈತರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಸೂಕ್ತ ತಾಂತ್ರಿಕ ಮಾರ್ಗಸೂಚಿ ಮತ್ತು ಮೇಲ್ವಿಚಾರಣೆಯಡಿ ಸೂಕ್ಷ್ಮದರ್ಶಕದ ಮೂಲಕ ವೀಕ್ಷಣೆ, ಕೃಷಿ ಮೇಲ್ವಿಚಾರಣೆ, ಸ್ವಚ್ಛತಾ ಕ್ರಮ, ದಾಖಲೀಕರಣ ಹಾಗೂ ಗುಣಮಟ್ಟದ ಪ್ರಕ್ರಿಯೆಗಳ ಕುರಿತು ರೈತರಿಗೆ ತರಬೇತಿ ನೀಡುವ ಮೂಲಕ ಅವರನ್ನು ಉತ್ಪಾದಕರಷ್ಟೇ ಅಲ್ಲದೆ ಉತ್ಪಾದನೆಯ ವಿಜ್ಞಾನ ಮತ್ತು ಗುಣಮಟ್ಟ ನಿಯಂತ್ರಣದಲ್ಲಿ ಭಾಗಿಯಾಗುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಬಳ್ಳಾರಿ ಸ್ಪಿರುಲಿನಾ ತಳಿಗೆ ಜಾಗತಿಕ ಮಾರುಕಟ್ಟೆ ಗುರಿ
ಸುದ್ದಿಗೋಷ್ಠಿಯಲ್ಲಿ ಐಐಎಂಎಸ್‌ಎಎಂ ಪ್ರತಿನಿಧಿಗಳು ಬಳ್ಳಾರಿ ಮೂಲದ ಸ್ಪಿರುಲಿನಾ ತಳಿಯನ್ನು ಅಭಿವೃದ್ಧಿಪಡಿಸಿ, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವಿದೆ ಎಂದು ತಿಳಿಸಿದರು.
ಬಳ್ಳಾರಿಯಿಂದ ಆರಂಭಿಸಿ ಭಾರತವನ್ನು ಸ್ಪಿರುಲಿನಾ ಉತ್ಪಾದನೆ ಮತ್ತು ಪೌಷ್ಟಿಕಾಂಶ ಆಧಾರಿತ ಯೋಜನೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ದೂರದೃಷ್ಟಿಯನ್ನು ಸಂಸ್ಥೆಗಳು ಹೊಂದಿವೆ ಎಂದು ಹೇಳಿದರು.
ನೋವಾಲ್ಗೇ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಶಿವ ಶಂಕರ್ ಮಾತನಾಡಿ, ಸ್ಪಿರುಲಿನಾ ಕೃಷಿಯನ್ನು ಕೇವಲ ಖಾಸಗಿ ಉದ್ಯಮದ ಲಾಭದಾಯಕ ಚಟುವಟಿಕೆಯನ್ನಾಗಿ ಮಾಡುವ ಬದಲು ರೈತರ ಜೀವನೋಪಾಯವನ್ನು ಸುಧಾರಿಸುವ ಸಮುದಾಯ ಆಧಾರಿತ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ರೈತರ ಆದಾಯ ಹೆಚ್ಚಿಸುವುದರ ಜತೆಗೆ ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ರೂಪಿಸಿ, ಸ್ಪಿರುಲಿನಾ ಆಧಾರಿತ ಪೌಷ್ಟಿಕ ಉತ್ಪನ್ನಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡುವತ್ತ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಸುಲಭವಾಗಿ ಸೇವಿಸುವಂತೆ ಉತ್ಪನ್ನ ಅಭಿವೃದ್ಧಿ
ಸ್ಪಿರುಲಿನಾದ ಪ್ರಮುಖ ಸಮಸ್ಯೆಗಳಲ್ಲೊಂದಾದ ಅದರ ಪ್ರಬಲ ವಾಸನೆ ಮತ್ತು ರುಚಿಯಿಂದಾಗಿ ಮಕ್ಕಳಿಗೆ ಅದನ್ನು ನೇರವಾಗಿ ಸೇವಿಸುವುದು ಕಷ್ಟವಾಗಬಹುದು ಎಂದು ನೋವಾಲ್ಗೇ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸಂಸ್ಥೆಯ ವೈಜ್ಞಾನಿಕ ಮತ್ತು ಸಂಶೋಧನಾ ತಂಡವು ಮಕ್ಕಳಿಗೂ ಸ್ವೀಕಾರಾರ್ಹವಾಗುವ ರೀತಿಯಲ್ಲಿ ಸ್ಪಿರುಲಿನಾವನ್ನು ಆಹಾರದಲ್ಲಿ ಬಳಸಬಹುದಾದ ಉತ್ಪನ್ನಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಮುಂದಿನ ತಿಂಗಳುಗಳಲ್ಲಿ ಈ ಸಂಬಂಧ ಹಲವು ಬೆಳವಣಿಗೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದರು.
ಮಾತ್ರೆ, ಪೂರಕ ಉತ್ಪನ್ನಗಳಿಗೆ ಸೀಮಿತವಾಗದೆ ಸಾಮಾನ್ಯ ಆಹಾರ ವ್ಯವಸ್ಥೆಗೆ
ಸ್ಪಿರುಲಿನಾವನ್ನು ಹೆಚ್ಚಿನ ಬೆಲೆಯ ನ್ಯೂಟ್ರಾಸ್ಯುಟಿಕಲ್, ಪೂರಕ ಆಹಾರ ಅಥವಾ ಔಷಧೀಯ ಉತ್ಪನ್ನಗಳಾಗಿ ಮಾತ್ರ ಮಾರಾಟ ಮಾಡುವುದಕ್ಕಿಂತ ಸಾಮಾನ್ಯ ಆಹಾರ ವ್ಯವಸ್ಥೆಯ ಭಾಗವಾಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸ್ಪಿರುಲಿನಾವನ್ನು ಕೆ.ಜಿ.ಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಅಪೌಷ್ಟಿಕತೆಯ ಸಮಸ್ಯೆ ಪರಿಹಾರವಾಗುವುದಿಲ್ಲ. ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚವನ್ನು ಕಡಿಮೆ ಮಾಡಿ ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡುವುದು ಮುಖ್ಯ ಎಂದು ಶಿವ ಶಂಕರ್ ಹೇಳಿದರು.
ಅಂತಿಮ ಉತ್ಪನ್ನದ ವೆಚ್ಚ ಕಡಿಮೆ ಮಾಡಿ ಸಾಮಾನ್ಯ ಆಹಾರ ಉತ್ಪನ್ನಗಳಲ್ಲಿ ಸ್ಪಿರುಲಿನಾವನ್ನು ಸೇರಿಸುವ ಉದ್ದೇಶದಿಂದ ಒಂದು ಪೇಟೆಂಟ್‌ಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಇನ್ನೂ ಮೂರು ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನೋವಾಲ್ಗೇ ತಿಳಿಸಿದೆ.
ರೈತರ ಹಿತವೇ ಕೇಂದ್ರಬಿಂದು
ಬಳ್ಳಾರಿ ಮಾದರಿಯಲ್ಲಿ ರೈತರು ಸಮುದಾಯವಾಗಿ ಒಗ್ಗೂಡಿ ಕೃಷಿಯಲ್ಲಿ ಪಾಲ್ಗೊಳ್ಳಲಿದ್ದು, ನೋವಾಲ್ಗೇ ಸಂಸ್ಥೆ ಹೂಡಿಕೆ, ಕೌಶಲ, ತಾಂತ್ರಿಕ ಮಾರ್ಗದರ್ಶನ ಹಾಗೂ ಅಗತ್ಯ ಬೆಂಬಲ ಒದಗಿಸುವ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಸಾಂಪ್ರದಾಯಿಕ ಕೃಷಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಷ್ಟ ಅನುಭವಿಸಿರುವ ಕೆಲವು ರೈತರು ಭೂಮಿ ಮಾರಾಟ ಮಾಡುವ ಪರಿಸ್ಥಿತಿಯನ್ನೂ ಎದುರಿಸಿದ್ದಾರೆ. ಇಂತಹ ರೈತರಿಗೆ ಆರಂಭಿಕ ಹೂಡಿಕೆಯ ಸಂಪೂರ್ಣ ಹೊರೆ ಬೀಳದಂತೆ ಮಾದರಿಯನ್ನು ರೂಪಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು.
ಮೊದಲ ಹಂತದ ಬಳಿಕ ಮತ್ತಷ್ಟು ರೈತರು ಮತ್ತು ಪ್ರದೇಶಗಳನ್ನು ಯೋಜನೆಗೆ ಸೇರಿಸುವ ಉದ್ದೇಶವಿದೆ. ತಂತ್ರಜ್ಞಾನ ಆಧಾರಿತ ಕೃಷಿಯ ಮೂಲಕ ಯುವಜನರನ್ನು ಮತ್ತೆ ಕೃಷಿಯತ್ತ ಆಕರ್ಷಿಸುವ ಸಾಧ್ಯತೆಯನ್ನೂ ಸಂಸ್ಥೆಗಳು ಉಲ್ಲೇಖಿಸಿವೆ.
ರೈತರು, ಸ್ವಸಹಾಯ ಸಂಘಗಳು, ಯುವಜನರು ಸೇರಿದಂತೆ ವಿವಿಧ ಸಮುದಾಯಗಳ ಭಾಗವಹಿಸುವಿಕೆ, ವೈಜ್ಞಾನಿಕ ತರಬೇತಿ, ಸುಸ್ಥಿರ ಉತ್ಪಾದನೆ, ಸಂಸ್ಕರಣಾ ತಂತ್ರಜ್ಞಾನ, ಪೌಷ್ಟಿಕಾಂಶ ಆಧಾರಿತ ಬಳಕೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಜ್ಞಾನ ವಿನಿಮಯಕ್ಕೂ ಯೋಜನೆಯಲ್ಲಿ ಒತ್ತು ನೀಡಲಾಗಿದೆ.
2027ರ ವೇಳೆಗೆ 10 ಲಕ್ಷ ಪೌಷ್ಟಿಕಾಂಶ ಪೂರಕ ವಿತರಣೆ ಗುರಿ
2027ರ ವೇಳೆಗೆ 10 ಲಕ್ಷ ಪೌಷ್ಟಿಕಾಂಶ ಪೂರಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆಗಳು ತಿಳಿಸಿವೆ. ಇದಕ್ಕೆ ಅಗತ್ಯವಿರುವ ತಾಂತ್ರಿಕ ಹಾಗೂ ಸಂಸ್ಥಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ.
ಈ ಯೋಜನೆಗೆ ಸರ್ಕಾರದ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಇತರ ಸಂಘಟನೆಗಳನ್ನು ಒಳಗೊಳ್ಳಿಸುವ ಪ್ರಯತ್ನ ನಡೆಯುತ್ತಿದೆ. ದಾನಿಗಳು, ಕಾರ್ಪೊರೇಟ್ ಪ್ರಾಯೋಜಕತ್ವ ಮತ್ತು ಸಿಎಸ್‌ಆರ್ ನಿಧಿಗಳ ಮೂಲಕ ಯೋಜನೆಗೆ ಅಗತ್ಯ ನೆರವು ಪಡೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಅಗತ್ಯವಿರುವ ಪೌಷ್ಟಿಕಾಂಶ ಪೂರಕಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡುವ ಉದ್ದೇಶವಿದ್ದು, ಇದಕ್ಕೆ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರ ಪಾಲುದಾರರು ನೆರವು ನೀಡಲಿದ್ದಾರೆ ಎಂದು ತಿಳಿಸಲಾಗಿದೆ.
ಅ.7ರಂದು ಎಫ್‌ಎಒಗೆ ತಾಂತ್ರಿಕ ವರದಿ
ಸ್ಪಿರುಲಿನಾ, ಪೌಷ್ಟಿಕಾಂಶ ಮತ್ತು ಆಹಾರ ಭದ್ರತೆ ಕುರಿತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಕಾರವನ್ನು ಬಲಪಡಿಸುವ ಪ್ರಯತ್ನವೂ ನಡೆಯುತ್ತಿದೆ.
ಆಹಾರ ಮತ್ತು ಕೃಷಿ ಸಂಸ್ಥೆ ಎಫ್‌ಎಒ ತಾಂತ್ರಿಕ ವರದಿಯನ್ನು ಕೇಳಿದ್ದು, ಅ.7ರಂದು ವರದಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಐಐಎಂಎಸ್‌ಎಎಂ ಪ್ರತಿನಿಧಿಗಳು ತಿಳಿಸಿದರು.
ಮುಂದಿನ ಹಂತದಲ್ಲಿ ಎಫ್‌ಎಒ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯುಎಚ್‌ಒ ಜತೆ ತಾಂತ್ರಿಕ ಹಾಗೂ ಸ್ಪಿರುಲಿನಾ ಆಧಾರಿತ ಪೌಷ್ಟಿಕಾಂಶ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪ್ರೋಟೋಕಾಲ್ ಕುರಿತು ಚರ್ಚೆ ನಡೆಸುವ ಉದ್ದೇಶವಿದೆ ಎಂದು ಹೇಳಿದರು.
ಐಐಎಂಎಸ್‌ಎಎಂ ಪ್ರಧಾನ ಕಾರ್ಯದರ್ಶಿ ಎಚ್.ಇ. ರೆಮಿಜಿಯೊ ಮರಡೋನಾ ಅವರು, ತೀವ್ರ ಅಪೌಷ್ಟಿಕತೆ ವಿರುದ್ಧದ ಹೋರಾಟದಲ್ಲಿ ಸ್ಪಿರುಲಿನಾವನ್ನು ಮಾನವೀಯ ಸಾಧನವಾಗಿ ಅಭಿವೃದ್ಧಿಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ಸಾಕ್ಷ್ಯಾಧಾರಿತ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಭಾರತವನ್ನು ಜಾಗತಿಕ ಸ್ಪಿರುಲಿನಾ ಕೇಂದ್ರವಾಗಿಸುವ ಗುರಿ
ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಪಿರುಲಿನಾ ಕೃಷಿಯನ್ನು ವಿಸ್ತರಿಸಿ, ಭಾರತವನ್ನು ಕೈಗೆಟುಕುವ ಪೌಷ್ಟಿಕಾಂಶ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯನ್ನು ಸಂಸ್ಥೆಗಳು ವ್ಯಕ್ತಪಡಿಸಿವೆ.
ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರೊಂದಿಗೆ ಸೇರಿ ಸ್ಪಿರುಲಿನಾ ಉತ್ಪಾದನೆ ವಿಸ್ತರಿಸುವುದು ಹಾಗೂ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೈಗೆಟುಕುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ದೀರ್ಘಾವಧಿಯ ಗುರಿಯಾಗಿದೆ ಎಂದು ನೋವಾಲ್ಗೇ ತಿಳಿಸಿದೆ.
ಬಳ್ಳಾರಿ ರೈತರ ಸಮೂಹವನ್ನು ಈ ದೊಡ್ಡ ಯೋಜನೆಯ ಆರಂಭಿಕ ಮಾದರಿಯಾಗಿ ಪರಿಗಣಿಸಲಾಗುತ್ತಿದೆ. ರೈತರಿಂದ ಸಮುದಾಯ ವಿಜ್ಞಾನಿಗಳತ್ತ, ಕೃಷಿ ಭೂಮಿಯಿಂದ ಪೌಷ್ಟಿಕಾಂಶ ಉತ್ಪಾದನೆಯತ್ತ ಹಾಗೂ ಸ್ಥಳೀಯ ಪ್ರಯತ್ನದಿಂದ ಜಾಗತಿಕ ಕಲಿಕೆಯತ್ತ ಸಾಗುವುದು ಯೋಜನೆಯ ಪ್ರಮುಖ ಆಶಯವಾಗಿದೆ.
ನೋವಾಲ್ಗೇ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ವ್ಯವಹಾರ ಅಧಿಕಾರಿ ಅತುಲ್ ಘೋಷ್ ಮಾತನಾಡಿ, ಐಐಎಂಎಸ್‌ಎಎಂನ ಅಂತರರಾಷ್ಟ್ರೀಯ ಉದ್ದೇಶವನ್ನು ಭಾರತದಲ್ಲಿನ ಸುಸ್ಥಿರ ಸ್ಪಿರುಲಿನಾ ಕೃಷಿ, ತಂತ್ರಜ್ಞಾನ ಮತ್ತು ಸಮುದಾಯದ ಭಾಗವಹಿಸುವಿಕೆಯ ಮಾದರಿಯೊಂದಿಗೆ ಈ ಸಹಭಾಗಿತ್ವ ಜೋಡಿಸುತ್ತದೆ ಎಂದರು.
ಬಳ್ಳಾರಿಯಲ್ಲಿ ರೈತರು, ತಂತ್ರಜ್ಞಾನ ಮತ್ತು ವೈಜ್ಞಾನಿಕ ಜ್ಞಾನ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸಲು ಉತ್ತಮ ಅವಕಾಶವಿದೆ ಎಂದು ಅವರು ಹೇಳಿದರು.
ಪೌಷ್ಟಿಕಾಂಶದ ಸಾಧ್ಯತೆ
ಸುದ್ದಿಗೋಷ್ಠಿಯಲ್ಲಿ ಸ್ಪಿರುಲಿನಾದಲ್ಲಿರುವ ಪ್ರೋಟೀನ್, ಕಬ್ಬಿಣ, ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಅಮೈನೊ ಆಮ್ಲಗಳ ಕುರಿತು ಪ್ರತಿನಿಧಿಗಳು ವಿವರಿಸಿದರು. ಸಮತೋಲಿತ ಆಹಾರದ ಭಾಗವಾಗಿ ಸೂಕ್ತ ರೀತಿಯಲ್ಲಿ ಬಳಸಿದರೆ ಪೌಷ್ಟಿಕಾಂಶದ ಕೊರತೆಗಳನ್ನು ಎದುರಿಸಲು ಸ್ಪಿರುಲಿನಾ ನೆರವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಸ್ಪಿರುಲಿನಾವನ್ನು ಮತ್ತೊಂದು ವಾಣಿಜ್ಯ ಪೂರಕ ಉತ್ಪನ್ನವನ್ನಾಗಿ ಮಾಡುವುದಕ್ಕಿಂತ ರೈತರು, ಆಹಾರ ಉತ್ಪಾದನೆ, ಪೌಷ್ಟಿಕಾಂಶ ಮತ್ತು ಸಮುದಾಯ ಅಭಿವೃದ್ಧಿಯನ್ನು ಸಂಪರ್ಕಿಸುವ ಕೈಗೆಟುಕುವ ಹಾಗೂ ವಿಸ್ತರಿಸಬಹುದಾದ ಮಾದರಿಯನ್ನು ರೂಪಿಸುವುದು ತಮ್ಮ ಉದ್ದೇಶ ಎಂದು ಸಂಸ್ಥೆಗಳು ತಿಳಿಸಿವೆ.
ಬಳ್ಳಾರಿಯಲ್ಲಿ ಆರಂಭವಾಗಿರುವ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಅಧ್ಯಯನ ಮಾಡಿ, ಅಗತ್ಯ ಬದಲಾವಣೆಗಳೊಂದಿಗೆ ಪೌಷ್ಟಿಕಾಂಶ, ಆಹಾರ ಭದ್ರತೆ, ಕೃಷಿ ಜೀವನೋಪಾಯ ಮತ್ತು ಸುಸ್ಥಿರ ಉತ್ಪಾದನೆಯ ಸವಾಲುಗಳನ್ನು ಎದುರಿಸುತ್ತಿರುವ ಇತರ ಪ್ರದೇಶಗಳಲ್ಲಿಯೂ ಅಳವಡಿಸುವ ಗುರಿಯನ್ನು ಐಐಎಂಎಸ್‌ಎಎಂ ಮತ್ತು ನೋವಾಲ್ಗೇ ಹೊಂದಿವೆ.