ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.8ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ
ಬೆಂಗಳೂರು: ಕನ್ನಡಿಗರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಅಕ್ಟೋಬರ್ 8, 2026ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11 ಗಂಟೆಯಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕನ್ನಡಪರ ಸಂಘಟನೆಗಳು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆ ಮನವಿ ಮಾಡಿದೆ.
ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ. ಮಂಜುನಾಥ ದೇವ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಉದ್ಯೋಗ ಹಕ್ಕುಗಳ ರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ.
ಪ್ರಮುಖ ಬೇಡಿಕೆಗಳು:
ಮೇಕೆದಾಟು ಯೋಜನೆ ಹಾಗೂ ಕಳಸಾ-ಬಂಡೂರಿ ಯೋಜನೆಗಳನ್ನು ತಕ್ಷಣ ಆರಂಭಿಸಬೇಕು.
ಸರ್ಕಾರಿ ಶಾಲೆಗಳನ್ನು ಉಳಿಸಿ ಬಲಪಡಿಸಬೇಕು.
ಖಾಸಗಿ ಕ್ಷೇತ್ರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.75ರಷ್ಟು ಮೀಸಲಾತಿ ನೀಡಬೇಕು.
ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ₹25,000 ಬೆಳೆ ಪರಿಹಾರ ನೀಡಬೇಕು.
ಬೆಳಗಾವಿ ಮಹಾನಗರಪಾಲಿಕೆಯನ್ನು ಕರ್ನಾಟಕದ ಅವಿಭಾಜ್ಯ ಅಂಗವೆಂದು ಘೋಷಿಸಬೇಕು.
ಎಂಇಎಸ್ (MES) ಸಂಘಟನೆಯನ್ನು ನಿಷೇಧಿಸಬೇಕು.
ಕನ್ನಡ ಕಲಿಸದ ಹಾಗೂ ನಾಡಗೀತೆ ಹಾಡಿಸದ ಶಾಲೆಗಳ ಮಾನ್ಯತೆ ರದ್ದುಪಡಿಸಬೇಕು.
ರಾಜ್ಯದ ಎಲ್ಲೆಡೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕು.
ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ಸರ್ಕಾರಿ ಯೋಜನೆಗಳ ಗುತ್ತಿಗೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗ ಅಧಿಕಾರಿಗಳ ನೇಮಕಕ್ಕೆ ಆದ್ಯತೆ ನೀಡಬೇಕು.
ವೇದಿಕೆ ಪ್ರಕಟಣೆಯಲ್ಲಿ, ಕರ್ನಾಟಕ ಏಕೀಕರಣದ ಉದ್ದೇಶಗಳಾದ ಕನ್ನಡ ಭಾಷೆ, ಸಂಸ್ಕೃತಿ, ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ರಕ್ಷಣೆಗೆ ಕನ್ನಡಿಗರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಲಾಗಿದೆ.
"ಕನ್ನಡಿಗರ ಅಸ್ತಿತ್ವ ಮತ್ತು ಹಕ್ಕುಗಳ ರಕ್ಷಣೆಗೆ ಯುವಶಕ್ತಿ ಒಂದಾಗಿ ನಾಡು ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು" ಎಂದು ಸಂಘಟನೆ ಮನವಿ ಮಾಡಿದೆ.
ಪ್ರತಿಭಟನೆಗೆ ಸಂಬಂಧಿಸಿದಂತೆ ಶ್ರೀಮತಿ ಕವಿತಾ ಪೇಟೆಮರ್ (ರಾಜ್ಯ ಪ್ರಧಾನ ಕಾರ್ಯದರ್ಶಿ), ಎಸ್ಕೆ ಗೌರೀಶ್ (ಯುವ ಘಟಕ ರಾಜ್ಯಾಧ್ಯಕ್ಷ), ಗುಡಹಟ್ಟಿ ರಾಮಸ್ವಾಮಿ ಹಾಗೂ ಹೆಚ್.ಎಸ್. ವೆಂಕಟೇಶ್ (ರಾಜ್ಯ ಸಂಘಟನಾ ಕಾರ್ಯದರ್ಶಿಗಳು) ಸಂಪರ್ಕಕ್ಕೆ ಲಭ್ಯವಿರುತ್ತಾರೆ ಎಂದು ತಿಳಿಸಲಾಗಿದೆ.