Full site
Health

ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತು ವಶ: ಪ್ರಿಯಾಂಕ್ ಖರ್ಗೆ

ಕಳೆದ ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಕರ್ನಾಟಕ ಪೊಲೀಸರು, ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಲು ಏಕತಾ ಮೋಟಾರ್ ಸೈಕಲ್ ರ‍್ಯಾಲಿ ನಡೆಸಿದರು.

By Anukshana News Desk2 min read

ಬೆಂಗಳೂರು, ಅ.15: ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿರುವ “ಏಕತಾ ಪರೇಡ್–ಮೋಟಾರ್ ಸೈಕಲ್ ರ‍್ಯಾಲಿ–ಮಾದಕ ವಸ್ತುಗಳ ವಿರುದ್ಧದ ಹೋರಾಟ”ಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ವಿಧಾನಸೌಧದ ಮೆಟ್ಟಿಲುಗಳ ಬಳಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಪೊಲೀಸರು ಸುಮಾರು ₹850 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಸುಮಾರು 32 ಸಾವಿರ ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಇದೇ ಅವಧಿಯಲ್ಲಿ ಸುಮಾರು 10 ಸಾವಿರ ಮಾದಕ ವಸ್ತು ಮಾರಾಟಗಾರರಿಗೆ ಶಿಕ್ಷೆಯಾಗಿರುವುದು ಪೊಲೀಸ್ ಇಲಾಖೆಯ ಪರಿಣಾಮಕಾರಿ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ ಎಂದರು.

ಮಾದಕ ವಸ್ತುಗಳ ವಿರುದ್ಧ ಕೇವಲ ಕಾನೂನು ಕ್ರಮವಷ್ಟೇ ಅಲ್ಲದೆ, ಯುವಜನರಲ್ಲಿ ಜಾಗೃತಿ ಮೂಡಿಸುವುದಕ್ಕೂ ಸರ್ಕಾರ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ RISE ಹಾಗೂ BEDA BRO ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಈ ಮೋಟಾರ್ ಸೈಕಲ್ ರ‍್ಯಾಲಿಯಲ್ಲಿ ಕರ್ನಾಟಕದ ಸುಮಾರು 200 ಪೊಲೀಸ್ ಸಿಬ್ಬಂದಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಏಳು ಮಂದಿ ಬೈಕರ್‌ಗಳ ತಂಡವು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಬೆಂಗಳೂರು ನಗರ ಪೊಲೀಸ್, ಸಿಆರ್‌ಪಿಎಫ್, ಮಾದಕ ವಸ್ತು ನಿಯಂತ್ರಣ ದಳ ಹಾಗೂ ಬೈಕರ್ಸ್ ಯೂನಿಟಿ ಕಾಲ್ಸ್ ಇಂಡಿಯಾ ಪ್ರತಿನಿಧಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಅಕ್ಟೋಬರ್ 15ರಂದು ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದ ತಂಡ, ಅಕ್ಟೋಬರ್ 16ರಂದು ಗುಜರಾತ್‌ನ ಏಕತಾ ನಗರದತ್ತ ಪ್ರಯಾಣ ಬೆಳೆಸಲಿದೆ. ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ತಂಡಗಳು ಅಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಏಕತಾ ಪರೇಡ್ನಲ್ಲಿ ಭಾಗವಹಿಸಲಿವೆ.

‘Fight Against Drugs’ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಅಭಿಯಾನವು ಮಾದಕ ವಸ್ತುಗಳ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಿಸುವ ಉದ್ದೇಶ ಹೊಂದಿದೆ.

Read the full story on Anukshana