ಕರ್ನಾಟಕ ಕಲಾಶ್ರೀ ಪ್ರಶಸ್ತಿ 2026–27 ಘೋಷಣೆ; ಅ.4 ರಂದು ಪ್ರದಾನ
ಆಯ್ಕೆಯಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ: 100 ಯುವ ಕಲಾವಿದರಿಗೆ ತಲಾ ₹10 ಸಾವಿರ ಶಿಷ್ಯವೇತನ
ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2026–27ನೇ ಸಾಲಿನ ಕರ್ನಾಟಕ ಕಲಾಶ್ರೀ ಹಾಗೂ ವಿವಿಧ ಕಲಾ ಪ್ರಕಾರಗಳ ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 4ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಲಿದೆ.
ಅಕಾಡೆಮಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ಶುಭ ಧನಂಜಯ, ಈ ಬಾರಿಯ ಪ್ರಶಸ್ತಿ ಆಯ್ಕೆಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
1) ಗೌರವ ಪ್ರಶಸ್ತಿ - ಪಂ. ವಿಶ್ವನಾಥ್ ನಾಕೋಡ್, ಶಕುಂತಲಾ ರಾಘವೇಂದ್ರ
2) ವಾರ್ಷಿಕ ಪ್ರಶಸ್ತಿ
ಕರ್ನಾಟಕ ಸಂಗೀತ - ಡಾ. ಟಿ.ಟಿ. ಶ್ರೀನಿವಾಸ್, ಕವಿತಾ ಮತ್ತು ತ್ರಿವೇಣಿ ಸರಳಾಯ, ಬಿ.ಎಸ್. ಶ್ರೀನಿವಾಸ ಮೂರ್ತಿ, ಹೇಮಲತ ಸಂಪತ್ತ
ಹಿಂದೂಸ್ತಾನಿ ಸಂಗೀತ - ನಾಗಲಿಂಗಯ್ಯ ವಸ್ತದಮಠ, ತಿಮ್ಮಪ್ಪಯ್ಯ ಕಟ್ಟಿಮನಿ, ಅಖಂಡೇಶ್ವರ ಪತ್ತಾರ
ನೃತ್ಯ - ಹರೀಚೇತನ, ಸಂಜಯ್ ಶಾಂತರಾಮ್, ಸುಮನ್ ಆರ್
ಸುಗಮ ಸಂಗೀತ - ಕಲ್ಯಾಣರಾವ್ ಪಾಟೀಲ್, ಗೀತಾ ಸತ್ಯಮೂರ್ತಿ
ಕಥಾಕೀರ್ತನ - ಡಾ. ವಿಜಯದಾಸ್, ಗಮಕ, ಎಂ.ಜಿ. ಸಿದ್ಧರಾಮಯ್ಯ
ಸಂಘ ಸಂಸ್ಥೆ - ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು
ವಾದ್ಯ ತಯಾರಿಕೆ - ಅಜ್ಜಪ್ಪ ಬುಡ್ಡಟ್ಟಿ
ಯಾವುದೇ ಒಂದು ಜಿಲ್ಲೆ ಅಥವಾ ಪ್ರದೇಶದ ಕಲಾವಿದರಿಗೆ ಮಾತ್ರ ಹೆಚ್ಚಿನ ಅವಕಾಶ ದೊರಕಿದೆ ಎಂಬ ಅಭಿಪ್ರಾಯ ಮೂಡದಂತೆ ರಾಜ್ಯದ ವಿವಿಧ ಭಾಗಗಳ ಕಲಾವಿದರನ್ನು ಆಯ್ಕೆಗೆ ಪರಿಗಣಿಸಲಾಗಿದೆ. ಎಲ್ಲ ಪ್ರದೇಶಗಳ ಕಲಾವಿದರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹25 ಸಾವಿರ ನಗದು ಗೌರವಧನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪ್ರಶಸ್ತಿ ಸಮಾರಂಭದಲ್ಲಿ ವಿಶೇಷ ಕೃತಿ ಲೋಕಾರ್ಪಣೆ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕಾರ್ಯದರ್ಶಿ ಮಂಜುಶ್ರೀ ಐಎಎಸ್, ನಿರ್ದೇಶಕಿ ಡಾ. ವಸುಂಧರಾ, ಅಕಾಡೆಮಿ ಸದಸ್ಯರು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಕಾಡೆಮಿಯ ‘ಹರಿಕಥೀರ್ಥ – ದಾರ್ಶನಿಕ ದರ್ಶನ ಮತ್ತು ಇತರ ಹರಿಕಥೆಗಳು’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಈ ಕೃತಿಯಲ್ಲಿ ಬಸವಣ್ಣ, ಬುದ್ಧ, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು, ಪಂಪ ಸೇರಿದಂತೆ ವಿವಿಧ ಮಹನೀಯರ ಕುರಿತ ಹರಿಕಥೆಗಳು ಇರಲಿವೆ. ಭಾರತೀಯ ಚಿಂತನೆ, ದಾರ್ಶನಿಕ ಪರಂಪರೆ ಹಾಗೂ ಹರಿಕಥಾ ಕಲೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕೃತಿಯನ್ನು ಪ್ರಕಟಿಸಲಾಗುತ್ತಿದೆ ಎಂದು ಶುಭ ಧನಂಜಯ ತಿಳಿಸಿದರು.
ಹಿರಿಯ ಕಲಾವಿದರ ಸಾಧನೆ ಪರಿಚಯಿಸುವ ವಿಡಿಯೊ
ಕರ್ನಾಟಕದ ಸಂಗೀತ ಮತ್ತು ನೃತ್ಯ ಪರಂಪರೆಯನ್ನು ಪರಿಚಯಿಸಲು ದೂರದರ್ಶನದ ಸಹಯೋಗದಲ್ಲಿ ಅಕಾಡೆಮಿ ಆರು ನಿಮಿಷಗಳ ವಿಶೇಷ ವಿಡಿಯೊ ಸಿದ್ಧಪಡಿಸಿದೆ.
ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಗಮಕ ಮತ್ತು ಕಥಾಕೀರ್ತನ ಕ್ಷೇತ್ರಗಳ ಹಿರಿಯ ಕಲಾವಿದರ ಸಾಧನೆಗಳನ್ನು ಈ ವಿಡಿಯೊ ಪರಿಚಯಿಸುತ್ತದೆ. 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರ ಅನುಭವ ಮತ್ತು ಕೊಡುಗೆಗಳನ್ನು ದಾಖಲಿಸಿ, ಯುವಪೀಳಿಗೆಗೆ ಕಲಾ ಪರಂಪರೆ ಹಾಗೂ ಗುರುಗಳ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಅವರು ವಿವರಿಸಿದರು.
ಬಿ.ಕೆ. ಸುಮಿತ್ರಾ, ರತ್ನಮಾಲ ಪ್ರಕಾಶ್, ಮಧುಮೋಹನ್, ಎಸ್. ಶಂಕರ್, ವಿದ್ವಾನ್ ವೆಂಕಟೇಶ್ ಕುಮಾರ್, ನಾಗರಾಜ್ ಹಾವಲ್ದಾರ್, ಸುಧಾ ರಘುನಾಥನ್, ಪ್ರವೀಣ್ ಗೋಡ್ಖಿಂಡಿ ಸೇರಿದಂತೆ ಹಲವು ಕಲಾವಿದರು ವಿಡಿಯೊದಲ್ಲಿ ಭಾಗವಹಿಸಿದ್ದಾರೆ. ಶತಾವಧಾನಿ ಡಾ. ಗಣೇಶ್ ಸಾಹಿತ್ಯ ರಚಿಸಿದ್ದು, ಪ್ರವೀಣ್ ಡಿ. ರಾವ್ ಸಂಗೀತ ಸಂಯೋಜಿಸಿದ್ದಾರೆ.
100 ಯುವ ಕಲಾವಿದರಿಗೆ ಶಿಷ್ಯವೇತನ
ಅಕಾಡೆಮಿಯ ಯುವ ಕಲಾವಿದರ ಶಿಷ್ಯವೇತನ ಯೋಜನೆಯಡಿ ಈ ವರ್ಷ 100 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪ್ರತಿಯೊಬ್ಬರಿಗೂ ಒಂದು ಬಾರಿಗೆ ₹10 ಸಾವಿರ ಶಿಷ್ಯವೇತನ ನೀಡಲಾಗುವುದು ಎಂದು ಶುಭ ಧನಂಜಯ ತಿಳಿಸಿದರು.
ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಗಮಕ, ಸುಗಮ ಸಂಗೀತ ಹಾಗೂ ಕಥಾಕೀರ್ತನ ಸೇರಿದಂತೆ ವಿವಿಧ ಕಲಾ ಕ್ಷೇತ್ರಗಳಲ್ಲಿ ಅಭ್ಯಾಸ ಮಾಡುತ್ತಿರುವ ಯುವ ಪ್ರತಿಭೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಅರ್ಜಿ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಯಾದವರ ಪಟ್ಟಿಯನ್ನು ಅಕಾಡೆಮಿಯ ಅಧಿಕೃತ ವೇದಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.
ಕಲಾವಿದರ ಜೀವನ, ಸಾಧನೆಗಳ ದಾಖಲೀಕರಣಕ್ಕೆ ಒತ್ತು
ಹಿರಿಯ ಕಲಾವಿದರ ಜೀವನ, ಸಾಧನೆ ಮತ್ತು ಕಲಾ ಕೊಡುಗೆಗಳನ್ನು ದಾಖಲಿಸುವ ಕಾರ್ಯಕ್ಕೆ ಅಕಾಡೆಮಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶಿವಮೊಗ್ಗ ಸುಬ್ಬಣ್ಣ, ಗಂಗೂಬಾಯಿ ಹಾನಗಲ್ ಅವರಂತಹ ಹಿರಿಯ ಕಲಾವಿದರ ಕುರಿತು ಹೆಚ್ಚಿನ ದಾಖಲೆಗಳು ಲಭ್ಯವಾಗಬೇಕು ಎಂಬುದು ಅಕಾಡೆಮಿಯ ಆಶಯವಾಗಿದೆ ಎಂದು ಶುಭ ಧನಂಜಯ ಹೇಳಿದರು.
ಅಕಾಡೆಮಿಯ ಪ್ರಕಟಣೆಗಳು ಮುಂದಿನ ಪೀಳಿಗೆಗೆ ಕಲಾ ಇತಿಹಾಸದ ಪ್ರಮುಖ ದಾಖಲೆಗಳಾಗಬೇಕು. ಕರ್ನಾಟಕದ ಸಂಗೀತ ಮತ್ತು ನೃತ್ಯ ಪರಂಪರೆಯನ್ನು ಸಂರಕ್ಷಿಸುವುದರ ಜತೆಗೆ ಹೊಸ ತಲೆಮಾರಿನ ಕಲಾವಿದರನ್ನು ಪ್ರೋತ್ಸಾಹಿಸುವುದು ಅಕಾಡೆಮಿಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ದೇವರಾಜ್ ಹಾಗೂ ರಿಜಿಸ್ಟ್ರಾರ್ ರಶ್ಮಿ ಉಪಸ್ಥಿತರಿದ್ದರು.