ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಮನವಿ
217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಬೆಂಗಳೂರು: ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ರೈತರು ಹಾಗೂ ಜನಸಾಮಾನ್ಯರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾನದಂಡಗಳ ಅನ್ವಯ ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೇಂದ್ರದ ಅಂತರ್ಸಚಿವಾಲಯ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡದೊಂದಿಗೆ ಮುಖ್ಯಮಂತ್ರಿ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ನಡೆಸಿದರು. ರಾಜ್ಯದ ಬರ ಪರಿಸ್ಥಿತಿ, ಬೆಳೆ ನಷ್ಟ, ಜಲಾಶಯಗಳ ಸ್ಥಿತಿ, ಅಂತರ್ಜಲ ಕುಸಿತ, ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ನೀಡಲಾಯಿತು.
217 ತಾಲ್ಲೂಕುಗಳು ಬರಪೀಡಿತ
ರಾಜ್ಯದ 240 ತಾಲ್ಲೂಕುಗಳ ಪೈಕಿ ಇದುವರೆಗೆ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೊದಲ ಹಂತದಲ್ಲಿ 101, ಎರಡನೇ ಹಂತದಲ್ಲಿ 23, ಮೂರನೇ ಹಂತದಲ್ಲಿ 53 ಹಾಗೂ ನಾಲ್ಕನೇ ಹಂತದಲ್ಲಿ 40 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಐದನೇ ಹಂತದ ಪರಿಶೀಲನೆಯೂ ಪ್ರಗತಿಯಲ್ಲಿದೆ.
ಬರಪೀಡಿತ ತಾಲ್ಲೂಕುಗಳ ಘೋಷಣೆಯಲ್ಲಿ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರ ತಂಡಕ್ಕೆ ತಿಳಿಸಿದೆ.
ಮೊದಲ ಮತ್ತು ಎರಡನೇ ಪ್ರಸ್ತಾವನೆಗಳ ಮೂಲಕ ಈಗಾಗಲೇ 177 ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು ₹7,142.64 ಕೋಟಿ ಪರಿಹಾರ ಕೋರಲಾಗಿದೆ. ಈ 177 ತಾಲ್ಲೂಕುಗಳಲ್ಲಿ ಬರದಿಂದ ₹46,324.50 ಕೋಟಿ ನಷ್ಟ ಸಂಭವಿಸಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಉಳಿದ ಬರಪೀಡಿತ ತಾಲ್ಲೂಕುಗಳಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಸ್ತಾವನೆಯನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಸಲ್ಲಿಸಲು ಸರ್ಕಾರ ಉದ್ದೇಶಿಸಿದೆ.
ಮೊದಲ ಹಂತದಲ್ಲಿ 101 ತಾಲ್ಲೂಕುಗಳಿಗೆ ₹3,705.30 ಕೋಟಿ ನೆರವು ಕೋರಲಾಗಿದ್ದು, ನಂತರ 76 ತಾಲ್ಲೂಕುಗಳಿಗೆ ₹3,437.34 ಕೋಟಿ ಹೆಚ್ಚುವರಿ ನೆರವು ಕೋರಿ ಪೂರಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಎರಡೂ ಪ್ರಸ್ತಾವನೆಗಳ ಒಟ್ಟು ಮೊತ್ತ ₹7,142.64 ಕೋಟಿಯಾಗಿದೆ.
ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ದೊರಕಿಸಿ
“ಯಾವುದೇ ಒತ್ತಡಗಳಿಗೆ ಒಳಗಾಗದೆ ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಗುರುತಿಸಲಾಗಿದೆ. ಕೇಂದ್ರ ತಂಡವು ವಸ್ತುಸ್ಥಿತಿಯನ್ನು ಪರಿಶೀಲಿಸಿ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ದೊರೆಯಬೇಕಾದ ಪರಿಹಾರ ಒದಗಿಸಲು ಸಹಕರಿಸಬೇಕು” ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
“ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತಗೊಂಡಂತೆ. ಬರದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಧಾವಿಸಬೇಕು” ಎಂದು ಅವರು ಹೇಳಿದರು.
ಮುಂಗಾರಿನಲ್ಲಿ ಶೇ.35ರಷ್ಟು ಮಳೆ ಕೊರತೆ
ರಾಜ್ಯವು 2001ರಿಂದ 2025ರವರೆಗೆ 16 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ಕರ್ನಾಟಕದ ವಾರ್ಷಿಕ ಮಳೆಯ ಶೇ.74ಕ್ಕೂ ಹೆಚ್ಚು ಮಳೆ ನೈಋತ್ಯ ಮುಂಗಾರು ಅವಧಿಯಲ್ಲೇ ಸುರಿಯುತ್ತದೆ. ಆದರೆ 2026ರ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ರಾಜ್ಯದಲ್ಲಿ ಒಟ್ಟಾರೆ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಶೇ.41, ಉತ್ತರ ಒಳನಾಡಿನಲ್ಲಿ ಶೇ.42, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಭಾಗದಲ್ಲಿ ಶೇ.28ರಷ್ಟು ಮಳೆ ಕೊರತೆಯಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಮಳೆ ಪಡೆಯುವ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿಯೂ ಈ ಬಾರಿ ಮಳೆಯ ಕೊರತೆ ಕಂಡುಬಂದಿದ್ದು, ಜಲಾಶಯಗಳು ಮತ್ತು ಅಚ್ಚುಕಟ್ಟು ಪ್ರದೇಶಗಳಿಗೆ ನೀರಿನ ಒಳಹರಿವು ಕುಸಿದಿದೆ.
ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ದತ್ತಾಂಶ ಸಂಗ್ರಹಿಸಲು 6,605 ಸೌರ ವಿದ್ಯುತ್ ಚಾಲಿತ ಜಿಪಿಆರ್ಎಸ್ ಆಧಾರಿತ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
237 ತಾಲ್ಲೂಕುಗಳಲ್ಲಿ ದೀರ್ಘ ‘ಡ್ರೈ ಸ್ಪೆಲ್’
ಮಳೆ ಕೊರತೆಯ ತೀವ್ರತೆಯನ್ನು ವಿವರಿಸಿದ ಸರ್ಕಾರ, ರಾಜ್ಯದ 240 ತಾಲ್ಲೂಕುಗಳ ಪೈಕಿ 237 ತಾಲ್ಲೂಕುಗಳಲ್ಲಿ ಕನಿಷ್ಠ ಮೂರು ವಾರಗಳ ಕಾಲ ಸತತವಾಗಿ ಮಳೆಯಾಗದ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದೆ.
88 ತಾಲ್ಲೂಕುಗಳಲ್ಲಿ ಕನಿಷ್ಠ ಮೂರು ವಾರ, 120 ತಾಲ್ಲೂಕುಗಳಲ್ಲಿ ನಾಲ್ಕರಿಂದ ಆರು ವಾರ ಹಾಗೂ 22 ತಾಲ್ಲೂಕುಗಳಲ್ಲಿ ಏಳರಿಂದ ಹತ್ತು ವಾರಗಳವರೆಗೆ ನಿರಂತರ ಮಳೆ ಕೊರತೆ ಕಂಡುಬಂದಿದೆ.
2026ರ ಮುಂಗಾರು ಹಂಗಾಮಿನಲ್ಲಿ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 69.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಗುರಿಯ ಶೇ.83ರಷ್ಟು ಸಾಧನೆಯಾಗಿದೆ.
ಜಲಾಶಯಗಳಲ್ಲೂ ನೀರಿನ ಕೊರತೆ
ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ 529 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಟ್ಟು ಸಾಮರ್ಥ್ಯದ ಶೇ.65ರಷ್ಟು ಮಾತ್ರ ಭರ್ತಿಯಾಗಿದೆ. ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ಜಲಾಶಯಗಳಲ್ಲಿ ಶೇ.54, ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ಶೇ.47 ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ಶೇ.78ರಷ್ಟು ನೀರು ಸಂಗ್ರಹವಾಗಿದೆ.
2026ರಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಕಳೆದ ಹತ್ತು ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಣ್ಣ ನೀರಾವರಿ ಕೆರೆಗಳ ಸ್ಥಿತಿಯೂ ಆತಂಕಕಾರಿಯಾಗಿದ್ದು, ಶೇ.58ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಒಟ್ಟಾರೆ ಶೇ.75ರಷ್ಟು ಸಣ್ಣ ನೀರಾವರಿ ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದೆ.
ಶೇ.30ಕ್ಕಿಂತ ಕಡಿಮೆ ನೀರಿರುವ ಕೆರೆಗಳ ಸಂಖ್ಯೆ 2025ರಲ್ಲಿ 885 ಇದ್ದರೆ, 2026ರಲ್ಲಿ 2,224ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 200 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, 2016-2025ರ ದಶಕದ ಸರಾಸರಿಗೆ ಹೋಲಿಸಿದರೆ 153 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಇಳಿಕೆಯಾಗಿದೆ.
45 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟ
ಮೊದಲ ಪ್ರಸ್ತಾವನೆಯ ವ್ಯಾಪ್ತಿಯ 101 ತಾಲ್ಲೂಕುಗಳಲ್ಲಿ 19.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ನಂತರದ 76 ತಾಲ್ಲೂಕುಗಳಲ್ಲಿ 26.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಅಂದಾಜಿಸಲಾಗಿದೆ.
NDRF ಮಾನದಂಡಗಳ ಪ್ರಕಾರ ಕೃಷಿ ಬೆಳೆಗಳ ನಷ್ಟಕ್ಕೆ ಸಂಬಂಧಿಸಿದಂತೆ 101 ತಾಲ್ಲೂಕುಗಳಿಗೆ ₹2,017.26 ಕೋಟಿ ಹಾಗೂ 76 ತಾಲ್ಲೂಕುಗಳಿಗೆ ₹2,918.34 ಕೋಟಿ ಪರಿಹಾರ ಅವಶ್ಯಕತೆ ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಕಳೆದ ಹತ್ತು ವರ್ಷಗಳಲ್ಲೇ ಅತಿ ಹೆಚ್ಚು 37.50 ಲಕ್ಷ ರೈತರು 28.48 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
30 ವಾರಗಳಿಗೆ ಸಾಕಾಗುವಷ್ಟು ಮೇವು
ರಾಜ್ಯದಲ್ಲಿ ಸದ್ಯ ಒಟ್ಟಾರೆಯಾಗಿ ಸುಮಾರು 30 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಆದಾಗ್ಯೂ, ಹಾಲು ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದ್ದು, ಜೂನ್ನಲ್ಲಿ ದಿನಕ್ಕೆ 115.58 ಲಕ್ಷ ಕೆಜಿ ಇದ್ದ ಹಾಲು ಉತ್ಪಾದನೆ ಸೆಪ್ಟೆಂಬರ್ ವೇಳೆಗೆ 108.09 ಲಕ್ಷ ಕೆಜಿಗೆ ಇಳಿಕೆಯಾಗಿದೆ.
SDRF ಅಡಿಯಲ್ಲಿ ಮೇವಿನ ಮಿನಿಕಿಟ್ ಪೂರೈಕೆಗಾಗಿ ₹25 ಕೋಟಿ ಮಂಜೂರು ಮಾಡಲಾಗಿದ್ದು, ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ 4.72 ಲಕ್ಷ ಮಿನಿಕಿಟ್ಗಳನ್ನು ಪೂರೈಸಲಾಗಿದೆ.
110 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಬರದ ಪರಿಣಾಮ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗುತ್ತಿದೆ. ರಾಜ್ಯದ 110 ತಾಲ್ಲೂಕುಗಳ 548 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 225 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 636 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ನಗರ ಪ್ರದೇಶಗಳಲ್ಲಿ ಏಳು ಜಿಲ್ಲೆಗಳ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, 81 ವಾರ್ಡ್ಗಳಿಗೆ ಟ್ಯಾಂಕರ್ ಹಾಗೂ 21 ವಾರ್ಡ್ಗಳಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಕೇಂದ್ರ-ರಾಜ್ಯ ಜೊತೆಯಾಗಿ ಕೆಲಸ ಮಾಡೋಣ: ಸಿಎಂ
ರಾಜ್ಯದ ಸಚಿವರು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದಾರೆ. ಅಧಿಕಾರಿಗಳು ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಬ್ಬು ಬೆಳೆಗಾರರು ಹೆಚ್ಚಿನ ಬೆಲೆಗೆ ಒತ್ತಾಯಿಸುತ್ತಿದ್ದು, ಹಾಲು ಉತ್ಪಾದಕರೂ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಬರ ಪರಿಸ್ಥಿತಿಯಿಂದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಈಗಾಗಲೇ ಪ್ರತಿ ಬಾಧಿತ ರೈತನಿಗೆ ₹2,500 ತಾತ್ಕಾಲಿಕ ನೆರವು ಘೋಷಿಸಿದ್ದು, ಬೆಳೆ ರಕ್ಷಣೆ, ಮೇವು, ಜಾನುವಾರು ಸಂರಕ್ಷಣೆ ಹಾಗೂ ಕುಡಿಯುವ ನೀರು ಪೂರೈಕೆಗೆ ಕ್ರಮಗಳನ್ನು ಕೈಗೊಂಡಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಮೂರು ದಿನ ರಾಜ್ಯ ಪ್ರವಾಸ: ವಸ್ತುನಿಷ್ಠ ವರದಿಯ ಭರವಸೆ
ಮುಖ್ಯಮಂತ್ರಿಗಳ ಮನವಿಗೆ ಪ್ರತಿಕ್ರಿಯಿಸಿದ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು, ತಂಡವು ಮೂರು ದಿನ ರಾಜ್ಯದ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿದೆ. ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಅಗತ್ಯ ದತ್ತಾಂಶ ಸಂಗ್ರಹಿಸಿ ವಸ್ತುನಿಷ್ಠ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ. ಉಮಾ ಮಹಾದೇವನ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.