Full site
Agriculture

ಕೃಷಿ-ತೋಟಗಾರಿಕಾ ನಷ್ಟ ತಗ್ಗಿಸಲು ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್-2026’; ಆರು ನಾವೀನ್ಯತಾ ಪರಿಹಾರಗಳ ಆಯ್ಕೆ

ರೈತರ ಆದಾಯ ರಕ್ಷಣೆಗೆ ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆ; ಕಟಾವಿನ ನಂತರದ ನಷ್ಟ ಕಡಿಮೆ ಮಾಡುವ ತಂತ್ರಜ್ಞಾನಗಳಿಗೆ ಉತ್ತೇಜನ

2 min read

ಬೆಂಗಳೂರು, ಸೆ. 25: ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಕಟಾವಿನ ನಂತರ ಉಂಟಾಗುವ ನಷ್ಟವನ್ನು ಕಡಿಮೆ ಮಾಡಿ, ರೈತರ ಆದಾಯವನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್-2026’ ಅನ್ನು ಹಮ್ಮಿಕೊಂಡಿದೆ.

ಈ ನಾವೀನ್ಯತಾ ಉಪಕ್ರಮದ ಮೂಲಕ ಕೃಷಿ ಮತ್ತು ತೋಟಗಾರಿಕಾ ಮೌಲ್ಯ ಸರಪಳಿಯಲ್ಲಿನ ಆಹಾರ ನಷ್ಟ ಹಾಗೂ ಸಂರಕ್ಷಣಾ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್-2026’ ಉನ್ನತ ಮಟ್ಟದ ಸ್ಟೀರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವೇದಿಕೆಯಡಿ ಆರು ನಾವೀನ್ಯತಾ ಪರಿಹಾರಗಳನ್ನು ಅಂತಿಮಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಅವುಗಳಿಗೆ ಸರ್ಕಾರಿ ಬೆಂಬಲ, ಮಾರುಕಟ್ಟೆ ಸಂಪರ್ಕ ಮತ್ತು ಹೂಡಿಕೆ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಉಪಕ್ರಮವು ನಾವೀನ್ಯಕಾರರು, ಉದ್ಯಮಿಗಳು, ಸಂಶೋಧಕರು, ಹೂಡಿಕೆದಾರರು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತಂದು, ಆಹಾರ ನಷ್ಟದ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದೆ.

ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಈ ವೇದಿಕೆಯು ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಹಾಗೂ ತಂತ್ರಜ್ಞಾನೇತರ ಪರಿಹಾರಗಳನ್ನು ಗುರುತಿಸಿ, ಅವುಗಳನ್ನು ಅನುಷ್ಠಾನಗೊಳಿಸುವತ್ತ ಗಮನಹರಿಸಿದೆ.

ಆಹಾರ ನಷ್ಟವನ್ನು ಕೇವಲ ವ್ಯರ್ಥದ ಸಮಸ್ಯೆಯಾಗಿ ಪರಿಗಣಿಸದೆ, ರೈತರ ಆದಾಯಕ್ಕೆ ಸಂಬಂಧಿಸಿದ ಆರ್ಥಿಕ ಸವಾಲಾಗಿ ನೋಡಲಾಗುತ್ತಿದೆ. ಬೆಳೆಗಳ ಮೌಲ್ಯವನ್ನು ಉಳಿಸುವ ಮೂಲಕ ರೈತರ ಆದಾಯ ಹೆಚ್ಚಿಸುವುದು ಮತ್ತು ಕೃಷಿ ಆರ್ಥಿಕತೆಯನ್ನು ಬಲಪಡಿಸುವುದು ‘ಸಂಪೂರ್ಣ’ ವೇದಿಕೆಯ ಪ್ರಮುಖ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ರೂಪುರೇಷೆಗಳನ್ನು ಥಿಂಕ್ ಥ್ರೂ ಕನ್ಸಲ್ಟಿಂಗ್ ಸಂಸ್ಥಾಪಕಿ ಹಾಗೂ ABWCI ಪ್ರಧಾನ ಕಾರ್ಯದರ್ಶಿ ಡಾ. ಪರುಲ್ ಸೋನಿ ಮತ್ತು GAIN ಇಂಡಿಯಾ ದೇಶಿ ನಿರ್ದೇಶಕಿ ಡಾ. ಭುವನೇಶ್ವರಿ ಬಾಲಸುಬ್ರಮಣಿಯನ್ ಸಿದ್ಧಪಡಿಸಿದ್ದಾರೆ.

ಗ್ರ್ಯಾಂಡ್ ಚಾಲೆಂಜ್‌ಗೆ ಕೃಷಿ ಉದ್ಯಮಗಳು, FPO ಆಧಾರಿತ ಸಂಸ್ಥೆಗಳು, ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳು, ಇನ್‌ಕ್ಯೂಬೇಟರ್‌ಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಒಟ್ಟು 210 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿವಿಧ ಹಂತದ ಮೌಲ್ಯಮಾಪನದ ಬಳಿಕ ತಜ್ಞರ ಸಮಿತಿಯು ಆರು ಪರಿಹಾರಗಳನ್ನು ಆಯ್ಕೆ ಮಾಡಿದೆ.

ಸರ್ಕಾರ, ಶಿಕ್ಷಣ ಕ್ಷೇತ್ರ ಮತ್ತು ಹೂಡಿಕೆದಾರರನ್ನು ಒಳಗೊಂಡ 14 ಸದಸ್ಯರ ತಜ್ಞರ ತಂಡ ಮೌಲ್ಯಮಾಪನ ಪ್ರಕ್ರಿಯೆ ನಡೆಸಿದ್ದು, ಆಯ್ಕೆಯಾದ ಪರಿಹಾರಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಬೆಂಬಲ, ಹೂಡಿಕೆ ಸಂಪರ್ಕ ಮತ್ತು ಮಾರುಕಟ್ಟೆ ಅವಕಾಶಗಳನ್ನು ಒದಗಿಸಲಾಗುತ್ತದೆ.

‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್-2026’ರ ಸಮಾರೋಪ ಸಮಾರಂಭವು ಅಕ್ಟೋಬರ್ 15ರಿಂದ 18ರವರೆಗೆ ಬೆಂಗಳೂರಿನ ಜಿಕೆವಿಕೆ (GKVK) ಆವರಣದಲ್ಲಿ ನಡೆಯಲಿರುವ ಕೃಷಿಮೇಳ-2026ರಲ್ಲಿ ನಡೆಯಲಿದೆ. ಈ ವೇಳೆ ಆಯ್ಕೆಯಾದ ನಾವೀನ್ಯತಾ ಪರಿಹಾರಗಳನ್ನು ಗೌರವಿಸಿ, ಅವುಗಳಿಗೆ ಮುಂದಿನ ಹಂತದ ಅವಕಾಶಗಳನ್ನು ಕಲ್ಪಿಸಲಾಗುತ್ತದೆ.

ಸಂಪೂರ್ಣ 2026 ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಆಶ್ರಯದಲ್ಲಿ, GAIN, Nutrition Connect, Think Through Consulting ಮತ್ತು ABWCI ಸಹಯೋಗದಲ್ಲಿ ರೂಪುಗೊಂಡ ಬಹು-ಕ್ಷೇತ್ರದ ವೇದಿಕೆಯಾಗಿದೆ.

Read the full story on Anukshana