ಕೋಬ್ರಾ ವಿಷಕ್ಕೆ ವ್ಯಾಪಕ ರಕ್ಷಣೆ ನೀಡುವ ಹೊಸ ಆ್ಯಂಟಿವೆನಮ್ ಅಭಿವೃದ್ಧಿ
ಐಐಎಸ್‌ಸಿ–ಡಿಟಿಯು ಸಂಶೋಧಕರ ಮಹತ್ವದ ಸಾಧನೆ | ಐದು ನ್ಯಾನೋಬಾಡಿಗಳ ಸಂಯೋಜನೆಯಿಂದ ವಿಷದ ಪರಿಣಾಮ ತಡೆ | ಇಲಿಗಳ ಮೇಲೆ ಯಶಸ್ವಿ ಪರೀಕ್ಷೆ
ಬೆಂಗಳೂರು: ಭಾರತದಲ್ಲಿ ಹಾವು ಕಡಿತದಿಂದ ಪ್ರತಿವರ್ಷ ಸುಮಾರು 50,000 ಮಂದಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಂಶೋಧಕರು ಮಹತ್ವದ ವೈದ್ಯಕೀಯ ಪ್ರಗತಿ ಸಾಧಿಸಿದ್ದಾರೆ. ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರ (CES) ಹಾಗೂ ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯ (DTU) ಸಂಶೋಧಕರು ವಿವಿಧ ಪ್ರದೇಶಗಳ ಕೋಬ್ರಾ ಮತ್ತು ಕಾಳಿಂಗ ಸರ್ಪಗಳ ವಿಷದ ವಿರುದ್ಧ ವ್ಯಾಪಕ ರಕ್ಷಣೆ ನೀಡಬಲ್ಲ ಪುನರ್‌ಸಂಯೋಜಿತ ನ್ಯಾನೋಬಾಡಿ ಆಧಾರಿತ ಆ್ಯಂಟಿವೆನಮ್ ಅಭಿವೃದ್ಧಿಪಡಿಸಿದ್ದಾರೆ.
ಈ ಕುರಿತು ನಡೆಸಿದ ಅಧ್ಯಯನವು Science Translational Medicine ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ವಿವಿಧ ಕೋಬ್ರಾ ಪ್ರಭೇದಗಳ ವಿರುದ್ಧ ಪರಿಣಾಮಕಾರಿ
ಐಐಎಸ್‌ಸಿಯ ಸಹ ಪ್ರಾಧ್ಯಾಪಕ ಕಾರ್ತಿಕ್ ಸುನಗರ್ ಮತ್ತು ಡಿಟಿಯುನ ಪ್ರಾಧ್ಯಾಪಕ ಆಂಡ್ರಿಯಾಸ್ ಲಾಸ್ಟ್ಸನ್ ನೇತೃತ್ವದಲ್ಲಿ ಸಂಶೋಧನೆ ನಡೆದಿದೆ. ವಿವಿಧ ಕೋಬ್ರಾ ಪ್ರಭೇದಗಳು ಉತ್ಪಾದಿಸುವ ವಿಷದಲ್ಲಿನ ಸಾಮಾನ್ಯ ವಿಷಕಾರಿ ಅಂಶಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುವಂತೆ ಆ್ಯಂಟಿಬಾಡಿಗಳನ್ನು ಎಂಜಿನಿಯರ್ ಮಾಡಲಾಗಿದೆ.
ಸಾಮಾನ್ಯವಾಗಿ ಪ್ರಸ್ತುತ ಬಳಕೆಯಲ್ಲಿರುವ ಆ್ಯಂಟಿವೆನಮ್‌ಗಳನ್ನು ಕುದುರೆಗಳಂತಹ ಪ್ರಾಣಿಗಳಿಗೆ ವಿಷವನ್ನು ನೀಡಿ, ಅವುಗಳ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ಸಂಗ್ರಹಿಸುವ ಮೂಲಕ ತಯಾರಿಸಲಾಗುತ್ತದೆ. ಈ ವಿಧಾನದಲ್ಲಿ ಬ್ಯಾಚ್‌ಗಳಿಂದ ಬ್ಯಾಚ್‌ಗೆ ಗುಣಮಟ್ಟದಲ್ಲಿ ವ್ಯತ್ಯಾಸ, ಅಡ್ಡ ಪರಿಣಾಮಗಳು, ಹೆಚ್ಚಿನ ಉತ್ಪಾದನಾ ವೆಚ್ಚ ಹಾಗೂ ನಿರ್ದಿಷ್ಟ ಹಾವುಗಳ ವಿರುದ್ಧ ಮಾತ್ರ ಸೀಮಿತ ರಕ್ಷಣೆ ದೊರೆಯುವಂತಹ ಸಮಸ್ಯೆಗಳಿವೆ.
ಇದಕ್ಕೆ ಪರ್ಯಾಯವಾಗಿ ಹೊಸ ಪುನರ್‌ಸಂಯೋಜಿತ ಆ್ಯಂಟಿವೆನಮ್ ಅನ್ನು ಪ್ರಾಣಿಗಳಿಗೆ ಪದೇಪದೇ ವಿಷ ನೀಡಿ ಪ್ರತಿಕಾಯ ಉತ್ಪಾದಿಸುವ ಅಗತ್ಯವಿಲ್ಲದೆ ಸೂಕ್ಷ್ಮಜೀವಿ ಮತ್ತು ಮಾನವೀಕೃತ ಅಭಿವ್ಯಕ್ತಿ ವ್ಯವಸ್ಥೆಗಳ ಮೂಲಕ ಉತ್ಪಾದಿಸಬಹುದಾಗಿದೆ.
ಐದು ನ್ಯಾನೋಬಾಡಿಗಳ ಸಂಯೋಜನೆ
ಸಂಶೋಧಕರು ಕೋಬ್ರಾ ವಿಷದಲ್ಲಿನ ವಿವಿಧ ವಿಷಕಾರಿ ಅಂಶಗಳಿಗೆ ಬಂಧಿಸುವ ಸಾಮರ್ಥ್ಯ ಹೊಂದಿರುವ ಐದು ಆ್ಯಂಟಿಬಾಡಿ ತುಣುಕುಗಳನ್ನು ಆಯ್ಕೆ ಮಾಡಿಕೊಂಡು ‘ನ್ಯಾನೋಬಾಡಿ’ಗಳ ಸಂಯೋಜನೆಯನ್ನು ರೂಪಿಸಿದ್ದಾರೆ. ಈ ನ್ಯಾನೋಬಾಡಿಗಳು ವಿಷವು ತನ್ನ ಗುರಿ ಗ್ರಾಹಕಕ್ಕೆ ಬಂಧಿಸುವುದನ್ನು ತಡೆದು, ವಿಷದ ಪರಿಣಾಮವನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿವೆ.
ಭಾರತದ ವಿವಿಧ ಭಾಗಗಳಿಂದ ಪಡೆದ ಕನ್ನಡಕ ಕೋಬ್ರಾ, ಮೊನೋಕಲ್ ಕೋಬ್ರಾ ಹಾಗೂ ಭಾರತದ ಎರಡೂ ಕಾಳಿಂಗ ಸರ್ಪ ಪ್ರಭೇದಗಳ ವಿಷದ ವಿರುದ್ಧ ಈ ಸಂಯೋಜನೆಯನ್ನು ಪರೀಕ್ಷಿಸಲಾಗಿದೆ.
ವಿಷದ 30 ನಿಮಿಷಗಳ ಬಳಿಕವೂ ರಕ್ಷಣೆ
ವಿಷವನ್ನು ಚುಚ್ಚಲಾದ ಇಲಿಗಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ ಹೊಸ ಆ್ಯಂಟಿಬಾಡಿ ಸಂಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ವಿಷ ಚುಚ್ಚಿದ 30 ನಿಮಿಷಗಳ ನಂತರವೂ ಇಲಿಗಳನ್ನು ಸಾವಿನಿಂದ ರಕ್ಷಿಸಲು ಸಾಧ್ಯವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವಿಷದ ಪರಿಣಾಮದಿಂದ ಪಾರ್ಶ್ವವಾಯು ಅಥವಾ ನರಮಂಡಲಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿದ್ದ ಕೆಲವು ಇಲಿಗಳು ಕೂಡ ಚಿಕಿತ್ಸೆ ಬಳಿಕ ಸಂಪೂರ್ಣ ಲಕ್ಷಣರಹಿತ ಸ್ಥಿತಿಗೆ ಮರಳಿದ್ದವು ಎಂದು ಕಾರ್ತಿಕ್ ಸುನಗರ್ ಹೇಳಿದ್ದಾರೆ.
ಕಡಿಮೆ ಪ್ರಮಾಣದಲ್ಲೇ ಪರಿಣಾಮ
ಹಾವು ವಿಷವನ್ನು ನಿಷ್ಕ್ರಿಯಗೊಳಿಸಲು ಈ ಹಿಂದೆ ದೊಡ್ಡ ಪ್ರಮಾಣದ ಏಕತಳಿ ಆ್ಯಂಟಿಬಾಡಿಗಳನ್ನು ಬಳಸಬೇಕಾಗುತ್ತಿತ್ತು. ಇದರಿಂದ ಮನುಷ್ಯರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅಗತ್ಯವಿರುವ ಪ್ರಮಾಣ, ವೆಚ್ಚ ಮತ್ತು ಸುರಕ್ಷತೆ ಕುರಿತು ಆತಂಕಗಳಿದ್ದವು.
ಆದರೆ ಹೊಸ ಅಧ್ಯಯನದಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿ ಎಂಜಿನಿಯರ್ ಮಾಡಲಾದ ಕಡಿಮೆ ಪ್ರಮಾಣದ ಆ್ಯಂಟಿಬಾಡಿಗಳಿಂದಲೂ ವಿಷವನ್ನು ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಸಂಶೋಧಕರು ತೋರಿಸಿದ್ದಾರೆ. ಇದು ಭವಿಷ್ಯದಲ್ಲಿ ಆ್ಯಂಟಿವೆನಮ್ ಚಿಕಿತ್ಸೆಯ ವೆಚ್ಚ ಹಾಗೂ ಹೆಚ್ಚಿನ ಪ್ರಮಾಣದ ಆ್ಯಂಟಿಬಾಡಿಗಳನ್ನು ನೀಡುವುದರಿಂದ ಉಂಟಾಗಬಹುದಾದ ಸುರಕ್ಷತಾ ಸಮಸ್ಯೆಗಳನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಆ್ಯಂಟಿವೆನಮ್
ಈ ತಂತ್ರಜ್ಞಾನದ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ವಿವಿಧ ಪ್ರದೇಶಗಳಲ್ಲಿ ಕಂಡುಬರುವ ವೈದ್ಯಕೀಯವಾಗಿ ಪ್ರಮುಖ ಹಾವುಗಳ ವಿಷಕಾರಿ ಅಂಶಗಳನ್ನು ಗುರಿಯಾಗಿಸಿಕೊಂಡು ಆ್ಯಂಟಿವೆನಮ್ ಅನ್ನು ಪ್ರತ್ಯೇಕವಾಗಿ ರೂಪಿಸಬಹುದಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಆ್ಯಂಟಿಬಾಡಿ ಘಟಕಗಳನ್ನು ಸೇರಿಸುವ ಮೂಲಕ ಇತರ ಹಾವುಗಳ ವಿರುದ್ಧವೂ ರಕ್ಷಣೆಯನ್ನು ವಿಸ್ತರಿಸಬಹುದು.
“ಹಾವು ಕಡಿತದ ಆ್ಯಂಟಿವೆನಮ್ ಚಿಕಿತ್ಸೆಯಲ್ಲಿ ಸುಮಾರು 100 ವರ್ಷಗಳಿಂದ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ಭಾರತದ ಹಾವು ಕಡಿತದ ಸಮಸ್ಯೆಯನ್ನು ಎದುರಿಸಲು ಇದು ಹೊಸ ತಲೆಮಾರಿನ ಆ್ಯಂಟಿವೆನಮ್ ಆಗುವ ಸಾಧ್ಯತೆಯಿದೆ,” ಎಂದು ಕಾರ್ತಿಕ್ ಸುನಗರ್ ಹೇಳಿದ್ದಾರೆ.
ಡಿಟಿಯು ಹಿರಿಯ ಸಂಶೋಧಕಿ ಆ್ಯನ್ ಲುಂಗಾರ್ಸ್, ವಿಷಶಾಸ್ತ್ರ, ಆ್ಯಂಟಿಬಾಡಿ ಎಂಜಿನಿಯರಿಂಗ್ ಮತ್ತು ಪ್ರೋಟೀನ್ ವಿಜ್ಞಾನದ ಪರಿಣತಿಯನ್ನು ವಿವಿಧ ದೇಶಗಳ ಸಂಶೋಧಕರು ಒಟ್ಟುಗೂಡಿಸಿರುವುದು ಈ ಯೋಜನೆಯ ವಿಶೇಷತೆ ಎಂದು ಹೇಳಿದ್ದಾರೆ. ಜಾಗತಿಕ ಆರೋಗ್ಯ ಸಮಸ್ಯೆಯಾದ ಹಾವು ಕಡಿತವನ್ನು ಎದುರಿಸಲು ಇಂತಹ ಬಹುಶಿಸ್ತೀಯ ಸಂಶೋಧನಾ ಸಹಕಾರ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.