ವರ್ಷಗಳ ಸೇವೆ, ಇನ್ನೂ ಗುತ್ತಿಗೆ ಬದುಕು: ಖಾಯಂ ಉದ್ಯೋಗ, ಸೌಲಭ್ಯಕ್ಕೆ ಕೆಎಸ್‌ಟಿಡಿಸಿ ಕಾರ್ಮಿಕರ ಆಗ್ರಹ
ಪ್ರವಾಸಿಗರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಾವಿರಾರು ಕೆಎಸ್‌ಟಿಡಿಸಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೆಎಸ್‌ಟಿಡಿಸಿ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಹೋಟೆಲ್‌ಗಳು, ಸಾರಿಗೆ ಸೇವೆಗಳು ಹಾಗೂ ವಿವಿಧ ವಿಭಾಗಗಳಲ್ಲಿ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕೆಎಸ್‌ಟಿಡಿಸಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಬಿ.ಆರ್. ಶಿವಶಂಕರ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಟಿಡಿಸಿ ರಾಜ್ಯದ ಪ್ರಮುಖ ಸಾರ್ವಜನಿಕ ಸಂಸ್ಥೆಯಾಗಿದ್ದು, ಇದರ ಯಶಸ್ಸಿನ ಹಿಂದೆ ಸಾವಿರಾರು ಕಾರ್ಮಿಕರ ಪರಿಶ್ರಮವಿದೆ. ಆದರೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಇನ್ನೂ ಉದ್ಯೋಗ ಭದ್ರತೆ ದೊರೆತಿಲ್ಲ ಎಂದು ಹೇಳಿದರು.
ಕೆಎಸ್‌ಟಿಡಿಸಿ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಸಾರಿಗೆ ಸೇವೆ, ಪ್ರವಾಸಿ ತಾಣಗಳಿಗೆ ಬಸ್‌ಗಳ ಸಂಚಾರ ಹಾಗೂ ರಾಜ್ಯಾದ್ಯಂತ ಹೋಟೆಲ್‌ಗಳ ನಿರ್ವಹಣೆ ನಡೆಯುತ್ತಿದೆ. ಈ ಎಲ್ಲಾ ಸೇವೆಗಳ ಹಿಂದೆ ಕಾರ್ಮಿಕರ ನಿರಂತರ ಶ್ರಮವಿದೆ ಎಂದು ಶಿವಶಂಕರ್ ಹೇಳಿದರು.
ಸಂಸ್ಥೆಯಲ್ಲಿ ಖಾಯಂ ನೌಕರರ ಸಂಖ್ಯೆ ಕಡಿಮೆ ಇದ್ದು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರೇ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಎಸ್‌ಟಿಡಿಸಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಅಗತ್ಯ ಸೌಲಭ್ಯಗಳು ಮತ್ತು ಭದ್ರತೆ ಸಿಗುತ್ತಿಲ್ಲ ಎಂದು ಅವರು ಹೇಳಿದರು.
“ಹಲವು ವರ್ಷಗಳಿಂದ ಸಂಸ್ಥೆಗೆ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಅವರ ಅನುಭವ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ಕಾಯಂಗೊಳಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ನ್ಯಾಯಯುತ ಸೌಲಭ್ಯಗಳನ್ನು ನೀಡಬೇಕು” ಎಂದು ಶಿವಶಂಕರ್ ಆಗ್ರಹಿಸಿದರು.
ಕಾರ್ಮಿಕರಿಗೆ ಬೋನಸ್ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮ ಸೇವೆಗಳಲ್ಲಿ ಹಗಲು-ರಾತ್ರಿ ದುಡಿಯುವ ಕಾರ್ಮಿಕರ ಹಿತಾಸಕ್ತಿಯನ್ನು ಸಂಸ್ಥೆ ಕಾಪಾಡಬೇಕು ಎಂದು ಹೇಳಿದರು.
ಕೆಎಸ್‌ಟಿಡಿಸಿ ಕೇವಲ ಒಂದು ಸಂಸ್ಥೆಯಲ್ಲ, ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಆದ್ದರಿಂದ ಸಂಸ್ಥೆಯ ಅಭಿವೃದ್ಧಿಯ ಜೊತೆಗೆ ಇಲ್ಲಿ ದುಡಿಯುವ ಕಾರ್ಮಿಕರ ಬದುಕಿನ ಭದ್ರತೆಯೂ ಸರ್ಕಾರದ ಆದ್ಯತೆಯಾಗಬೇಕು ಎಂದು ಅವರು ಮನವಿ ಮಾಡಿದರು.
ಯೂನಿಯನ್‌ನ ಪ್ರಮುಖ ಬೇಡಿಕೆಗಳು
- ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು
- ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಮತ್ತು ಉದ್ಯೋಗ ಭದ್ರತೆ ನೀಡಬೇಕು
- ಹೋಟೆಲ್ ಮತ್ತು ಸಾರಿಗೆ ವಿಭಾಗಗಳಿಗೆ ಅನುಭವ ಹೊಂದಿರುವ ಅಧಿಕಾರಿಗಳನ್ನು ನೇಮಿಸಬೇಕು
- ಕೆಎಸ್‌ಟಿಡಿಸಿಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕು
“ಪ್ರವಾಸಿಗರಿಗೆ ಸೇವೆ ನೀಡುವ ಕೈಗಳಿಗೆ ಭದ್ರತೆ ಮತ್ತು ಗೌರವ ಸಿಗಬೇಕು” ಎಂಬುದು ಕಾರ್ಮಿಕ ಸಂಘದ ಪ್ರಮುಖ ಬೇಡಿಕೆಯಾಗಿದೆ.