ಮಲ್ಲೇಶ್ವರ 'ಹಸಿರು ಸಂತೆ': ಸಾವಯವ ಉತ್ಪನ್ನಗಳು, ಕೈಮಗ್ಗ ಮತ್ತು ಸ್ಥಳೀಯ ಕಲೆಗಳಿಗೆ ಒಂದೇ ವೇದಿಕೆ
ಮಲ್ಲೇಶ್ವರದ ದಿ ಗ್ರೀನ್ ಪಾತ್ ಆವರಣದಲ್ಲಿ ಆಯೋಜಿಸಿರುವ “ಮಲ್ಲೇಶ್ವರ ಹಸಿರು ಸಂತೇ”ಯಲ್ಲಿ ಸಾವಯವ ಉತ್ಪನ್ನಗಳು, ಕೈಮಗ್ಗ ವಸ್ತ್ರಗಳು, ನೈಸರ್ಗಿಕ ಜೀವನಶೈಲಿ ಉತ್ಪನ್ನಗಳು ಹಾಗೂ ಸ್ಥಳೀಯ ಕಲಾಕೃತಿಗಳಿಗೆ ಒಂದೇ ವೇದಿಕೆ ಕಲ್ಪಿಸಲಾಗಿದೆ. ಗ್ರೀನ್ ಪಾತ್ ಸಂಸ್ಥಾಪಕ ಜಯರಾಮ್ ಅವರ ಪರಿಕಲ್ಪನೆಯ ಈ ಮೇಳವು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಬೆಂಗಳೂರು: ಮಲ್ಲೇಶ್ವರದ ದಿ ಗ್ರೀನ್ ಪಾತ್ ಆವರಣದಲ್ಲಿ “ಮಲ್ಲೇಶ್ವರ ಹಸಿರು ಸಂತೇ” ವಿಶೇಷ ಪ್ರದರ್ಶನ ಹಾಗೂ ಮೇಳ ನಡೆಯುತ್ತಿದೆ. ಸ್ಥಳೀಯವಾಗಿ ತಯಾರಿಸಲಾದ ಸಾವಯವ ಉತ್ಪನ್ನಗಳು, ಕೈಮಗ್ಗ ಬಟ್ಟೆಗಳು, ನೈಸರ್ಗಿಕ ವಸ್ತುಗಳು, ಆಭರಣಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವು ವಿಶೇಷ ವಸ್ತುಗಳು ಈ ಸಂತೆಯಲ್ಲಿ ಜನರ ಗಮನ ಸೆಳೆಯುತ್ತಿವೆ.
ಆಂಕರ್ ಪ್ರವೀಣಾ ಮಾತನಾಡಿ, ಈ ಹಸಿರು ಸಂತೆಯಲ್ಲಿ ಹಲವು ವಿಭಿನ್ನ ಸ್ಟಾಲ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಫ್ಯಾಷನ್ ಶೋಗಳಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕೈಮಗ್ಗ ಸೀರೆಗಳು, ಕಾಟನ್ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ದಿ ಗ್ರೀನ್ ಪಾತ್ ಸಂಸ್ಥಾಪಕ ಜಯರಾಮ್ ಮಾತನಾಡಿ, “ಹಸಿರು ಸಂತೆಯ ಮುಖ್ಯ ಉದ್ದೇಶ ಗ್ರೀನ್ ಪ್ರಾಡಕ್ಟ್ಸ್‌ಗಳಿಗೆ ಉತ್ತೇಜನ ನೀಡುವುದು. ಬಟ್ಟೆ, ಕಾಸ್ಮೆಟಿಕ್ಸ್, ಜುವೆಲರಿ, ಆಹಾರ ಪದಾರ್ಥಗಳು ಸೇರಿದಂತೆ ಸ್ಥಳೀಯವಾಗಿ ತಯಾರಿಸಲಾದ ನೈಸರ್ಗಿಕ ಉತ್ಪನ್ನಗಳನ್ನು ಜನರಿಗೆ ತಲುಪಿಸುವುದು ನಮ್ಮ ಉದ್ದೇಶ” ಎಂದು ಹೇಳಿದರು.
“ಇಲ್ಲಿ ನೈಸರ್ಗಿಕ ಸೀರೆಗಳು, ಕಾಟನ್ ಬಟ್ಟೆಗಳು, ಆಯುರ್ವೇದಿಕ್ ಉತ್ಪನ್ನಗಳು, ಕಾಸ್ಮೆಟಿಕ್ಸ್ ಸೇರಿದಂತೆ ಹಲವು ವಸ್ತುಗಳು ಲಭ್ಯವಿವೆ. ಜನರು ಸ್ಥಳೀಯ ಹಾಗೂ ಹಸಿರು ಉತ್ಪನ್ನಗಳನ್ನು ಬಳಸುವ ಸಂಸ್ಕೃತಿ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಸಂತೆಯನ್ನು ಆಯೋಜಿಸಲಾಗಿದೆ” ಎಂದು ಜಯರಾಮ್ ಹೇಳಿದರು.
ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೀರೆ ಫ್ಯಾಷನ್ ಶೋ, ಆರ್ಟ್ ಪೇಂಟಿಂಗ್ ಸ್ಪರ್ಧೆ ಹಾಗೂ ಡ್ಯಾನ್ಸ್ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಸಂಸ್ಕೃತಿ, ಸಾವಯವ ಆಹಾರ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದು ಜಯರಾಮ್ ತಿಳಿಸಿದರು.
ಜಯರಾಮ್ ಅವರು ಸುಮಾರು 15 ವರ್ಷಗಳ ಹಿಂದೆ ಸಾವಯವ ಕ್ಷೇತ್ರದ ಪ್ರಯಾಣ ಆರಂಭಿಸಿದ್ದು, ರೈತರಿಂದ ನೇರವಾಗಿ ಉತ್ಪನ್ನಗಳನ್ನು ಪಡೆದು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
“ಮಲ್ಲೇಶ್ವರ ಮೆಟ್ರೋ ನಿಲ್ದಾಣದ ಎದುರು ಇರುವ ದಿ ಗ್ರೀನ್ ಪಾತ್ ಆವರಣದಲ್ಲಿ ಈ ಹಸಿರು ಸಂತೆಯನ್ನು ಆಯೋಜಿಸಲಾಗಿದೆ. ಮೆಟ್ರೋ ಮೂಲಕವೂ ಸುಲಭವಾಗಿ ಆಗಮಿಸಬಹುದು” ಎಂದು ಅವರು ಮಾಹಿತಿ ನೀಡಿದರು.
26 ಮತ್ತು 27 ಸೆಪ್ಟೆಂಬರ್ 2026 ರಂದು ನಡೆಯುತ್ತಿರುವ ಈ ಹಸಿರು ಸಂತೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಭೇಟಿ ನೀಡಬಹುದು.