Full site
Beauty & Pageants

ಮಿಸೆಸ್ ಟೂರಿಸಂ-2026ಕ್ಕೆ ತೀರ್ಪುಗಾರರಾಗಿ ಡಾ. ಶಿಲ್ಪಾ

19 ದೇಶಗಳ ಸ್ಪರ್ಧಿಗಳಿದ್ದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮಾಜಿ ಮಿಸ್ ಗ್ರ್ಯಾಂಡ್ ಯುನಿವರ್ಸ್ ಇಂಡಿಯಾ

By Anukshana News Desk1 min read

ಬೆಂಗಳೂರು: ಮಾಜಿ ಮಸ್ ಗ್ರ್ಯಾಂಡ್ ಯುನಿವರ್ಸ್ ಇಂಡಿಯಾ ಹಾಗೂ ನಮ್ಮ ರಾಜ್ಯದವರೇ ಆದ ಡಾ. ಶಿಲ್ಪಾ ಅವರು ಫಿಲಿಪೈನ್ಸ್‌ನಲ್ಲಿ ನಡೆದ ಮಿಸೆಸ್ ಟೂರಿಸಂ-2026 ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸುವ ಮೂಲಕ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಅಕ್ಟೋಬರ್ 2ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 19 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ತೀರ್ಪುಗಾರರ ತಂಡದ ಸದಸ್ಯೆಯಾಗಿ ಡಾ. ಶಿಲ್ಪಾ ಅವರು ಸ್ಪರ್ಧಿಗಳ ಪ್ರತಿಭೆ, ವ್ಯಕ್ತಿತ್ವ, ಆತ್ಮವಿಶ್ವಾಸ, ವೇದಿಕೆ ಪ್ರದರ್ಶನ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮೌಲ್ಯಮಾಪನ ಮಾಡಿದರು.

ಈ ಹಿಂದೆ ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲಿ ಸ್ಪರ್ಧಿಯಾಗಿ ಭಾರತವನ್ನು ಪ್ರತಿನಿಧಿಸಿ ಮಿಸ್ ಗ್ರ್ಯಾಂಡ್ ಯುನಿವರ್ಸ್ ಇಂಡಿಯಾ ಗೌರವ ಪಡೆದಿದ್ದ ಡಾ. ಶಿಲ್ಪಾ, ಇದೀಗ ಅದೇ ಕ್ಷೇತ್ರದಲ್ಲಿ ತೀರ್ಪುಗಾರರಾಗಿ ಅಂತಾರಾಷ್ಟ್ರೀಯ ಜವಾಬ್ದಾರಿ ನಿರ್ವಹಿಸಿರುವುದು ಅವರ ವೃತ್ತಿಜೀವನದ ವಿಶೇಷ ಸಾಧನೆಯಾಗಿದೆ.

‘ಬ್ಯೂಟಿ ವಿತ್ ಪರ್ಪಸ್’ ಎಂಬ ಧ್ಯೇಯವಾಕ್ಯದಡಿ ನಡೆದ ಮಿಸೆಸ್ ಟೂರಿಸಂ-2026 ಸ್ಪರ್ಧೆ ಕೇವಲ ಸೌಂದರ್ಯಕ್ಕೆ ಸೀಮಿತವಾಗಿರದೆ, ಸಾಮಾಜಿಕ ಬದ್ಧತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿತು. ಬಡತನ ನಿರ್ಮೂಲನೆ ಹಾಗೂ ‘ಸೇವ್ ಮದರ್’ ಸೇರಿದಂತೆ ಸಮಾಜಮುಖಿ ಉದ್ದೇಶಗಳಿಗೆ ಕಾರ್ಯಕ್ರಮದಲ್ಲಿ ವಿಶೇಷ ಒತ್ತು ನೀಡಲಾಗಿತ್ತು.

ವಿವಿಧ ಹಂತಗಳ ಸ್ಪರ್ಧೆಯ ಬಳಿಕ ಫಿಲಿಪೈನ್ಸ್, ಶ್ರೀಲಂಕಾ, ಥಾಯ್ಲೆಂಡ್, ತೈವಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕ ದೇಶಗಳ ಪ್ರತಿನಿಧಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ಹೊರಹೊಮ್ಮಿದರು.

ಸ್ಪರ್ಧಿಯಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದ ಡಾ. ಶಿಲ್ಪಾ ಅವರು ಈಗ ತೀರ್ಪುಗಾರರ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಅವರ ಅನುಭವ ಮತ್ತು ಸಾಧನೆಗೆ ದೊರೆತ ಮತ್ತೊಂದು ಮನ್ನಣೆ ಎಂಬಂತಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ನಮ್ಮ ರಾಜ್ಯದ ಡಾ. ಶಿಲ್ಪಾ ಅವರು ತೀರ್ಪುಗಾರರ ತಂಡದಲ್ಲಿ ಸ್ಥಾನ ಪಡೆದಿರುವುದು ಕರ್ನಾಟಕಕ್ಕೂ ಹೆಮ್ಮೆಯ ಸಂಗತಿಯಾಗಿದೆ.

Read the full story on Anukshana