Full site
Land Acquisition

PRR-2ಗೆ ಅನುಮೋದಿತ ಬಡಾವಣೆ ಬಲಿ ಬೇಡ: ‘ದಿ ಗಾರ್ಡನ್ಸ್’ ನಿವಾಸಿಗಳ ಆಗ್ರಹ

1,427 ಎಕರೆ ಭೂಸ್ವಾಧೀನಕ್ಕೆ BDA ಸಿದ್ಧತೆ ವರದಿ ಬೆನ್ನಲ್ಲೇ ನಿವಾಸಿಗಳ ಆತಂಕ; 21 ವರ್ಷಗಳ ಬಳಿಕ ಅಧಿಸೂಚನೆ ಏಕೆ? ಸರ್ಕಾರದ ವಿವಿಧ ಪ್ರಾಧಿಕಾರಗಳ ಅನುಮೋದನೆ ನಂಬಿ ಜೀವನಪೂರ್ತಿ ಉಳಿತಾಯ ಹೂಡಿಕೆ ಮಾಡಿ ನಿವೇಶನ ಖರೀದಿಸಿರುವ ಕುಟುಂಬಗಳಿಗೆ PRR-2 ಭೂಸ್ವಾಧೀನದಿಂದ ಅನ್ಯಾಯವಾಗಬಾರದು; ಈಗಾಗಲೇ ಅಭಿವೃದ್ಧಿಗೊಂಡ ಅನುಮೋದಿತ ಬಡಾವಣೆಗಳನ್ನು ಯೋಜನೆಯಿಂದ ಹೊರಗಿಡುವಂತೆ ‘ದಿ ಗಾರ್ಡನ್ಸ್’ ನಿವಾಸಿಗಳು ಸರ್ಕಾರ ಮತ್ತು BDAಗೆ ಆಗ್ರಹಿಸಿದರು.

By Anukshana News Desk3 min read

ಬೆಂಗಳೂರು, ಅ. 9: NICE ರಸ್ತೆಗೆ ಸಮಾನಾಂತರವಾಗಿ ನಿರ್ಮಿಸಲು ಉದ್ದೇಶಿಸಿರುವ ಪರಿಫೆರಲ್ ರಿಂಗ್ ರೋಡ್-2 (PRR-2) ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 1,427 ಎಕರೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದರಿಂದ 1,126 ಭೂಮಾಲೀಕರು ಆಸ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ ಗುಲಕಮಲೆ ಗ್ರಾಮದ ‘ದಿ ಗಾರ್ಡನ್ಸ್’ ಸೇರಿದಂತೆ ಯೋಜನೆಯಿಂದ ಬಾಧಿತವಾಗುವ ಬಡಾವಣೆಗಳ ನಿವೇಶನ ಮಾಲೀಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಭೂಮಾಲೀಕರು ಹಾಗೂ ಹಾಲಿ ನಿವಾಸಿಗಳು, ಈಗಾಗಲೇ ಸರ್ಕಾರದ ವಿವಿಧ ಪ್ರಾಧಿಕಾರಗಳಿಂದ ಕಾನೂನುಬದ್ಧ ಅನುಮೋದನೆ ಪಡೆದು ಅಭಿವೃದ್ಧಿಗೊಂಡಿರುವ ವಸತಿ ಬಡಾವಣೆಗಳನ್ನು PRR-2 ಭೂಸ್ವಾಧೀನದಿಂದ ಕೈಬಿಟ್ಟು ನಿವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ನಿವೇಶನ ಮಾಲೀಕರ ಪರವಾಗಿ ಮಾತನಾಡಿದ ಅರುಣ್, “ಸರ್ಕಾರದ ಪ್ರಾಧಿಕಾರಗಳ ಅನುಮೋದನೆ ಇದೆ ಎಂಬ ನಂಬಿಕೆಯಿಂದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ಜೀವನಪೂರ್ತಿ ದುಡಿದ ಹಣವನ್ನು ಹೂಡಿಕೆ ಮಾಡಿ ನಿವೇಶನಗಳನ್ನು ಖರೀದಿಸಿವೆ. ಈಗ ಅದೇ ಸರ್ಕಾರ ರಸ್ತೆ ಯೋಜನೆ ಹೆಸರಿನಲ್ಲಿ ಅದೇ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದರೆ ಜನರು ಯಾರನ್ನು ನಂಬಬೇಕು?” ಎಂದು ಪ್ರಶ್ನಿಸಿದರು.

PRR-2ಗೆ ಸಂಬಂಧಿಸಿದ ಪ್ರಾಥಮಿಕ ಅಧಿಸೂಚನೆ 2005ರಲ್ಲೇ ಹೊರಬಿದ್ದಿದ್ದರೆ, ಸುಮಾರು 21 ವರ್ಷಗಳ ಬಳಿಕ ಮತ್ತೆ ಭೂಸ್ವಾಧೀನ ಕ್ರಮ ಕೈಗೊಳ್ಳಲಾಗುತ್ತಿರುವುದೇಕೆ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಅವಧಿಯಲ್ಲಿ ಸಂಬಂಧಪಟ್ಟ ಪ್ರದೇಶಗಳಿಗೆ ಡಿಸಿ ಪರಿವರ್ತನೆ, ಯೋಜನಾ ಪ್ರಾಧಿಕಾರದ ಅನುಮೋದನೆ, ವಿದ್ಯುತ್ ಸಂಪರ್ಕ, ನೋಂದಣಿ, ಖಾತೆ ಸೇರಿದಂತೆ ಹಲವು ಸರ್ಕಾರಿ ಅನುಮತಿಗಳು ದೊರೆತಿವೆ. ಕೆಲವು ಕುಟುಂಬಗಳು ಮನೆಗಳನ್ನೂ ನಿರ್ಮಿಸಿಕೊಂಡಿವೆ. “ಈ ಎಲ್ಲ ಅನುಮತಿಗಳನ್ನು ಸರ್ಕಾರವೇ ನೀಡಿದ ಬಳಿಕ ಈಗ ಏಕಾಏಕಿ ಭೂಸ್ವಾಧೀನಕ್ಕೆ ಮುಂದಾಗಿರುವುದು ಆಡಳಿತಾತ್ಮಕ ಸಮನ್ವಯದ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟಿಸುತ್ತದೆ” ಎಂದು ನಿವಾಸಿಗಳು ಆರೋಪಿಸಿದರು.

“ನಾವು ಯಾವುದೇ ಅನಧಿಕೃತ ಅಥವಾ ಸಾಮಾನ್ಯ ರೆವಿನ್ಯೂ ನಿವೇಶನಗಳನ್ನು ಖರೀದಿಸಿಲ್ಲ. ದಾಖಲೆಗಳನ್ನು ಪರಿಶೀಲಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು, ಸರ್ಕಾರದ ಪ್ರಾಧಿಕಾರಗಳ ಅನುಮೋದನೆ ಇರುವುದನ್ನು ಖಚಿತಪಡಿಸಿಕೊಂಡೇ ಹಣ ಹೂಡಿಕೆ ಮಾಡಿದ್ದೇವೆ. ಸರ್ಕಾರದ ಸಂಸ್ಥೆಗಳ ಪ್ರಮಾಣೀಕರಣಕ್ಕೂ ಮೌಲ್ಯ ಇಲ್ಲ ಎಂದಾದರೆ ಬೆಂಗಳೂರಿನಲ್ಲಿ ಸಾಮಾನ್ಯ ನಾಗರಿಕರು ಯಾವ ಜಮೀನನ್ನು ನಂಬಿ ಖರೀದಿಸಬೇಕು?” ಎಂದು ಅರುಣ್ ಪ್ರಶ್ನಿಸಿದರು.

ಬಡಾವಣೆಗಳು BMRDA, KPA ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳ ಅನುಮೋದನೆ ಪಡೆದಿದ್ದು, BESCOM ಅನುಮತಿ, ನೋಂದಣಿ ಹಾಗೂ ಖಾತೆ ಪ್ರಕ್ರಿಯೆಗಳೂ ನಡೆದಿವೆ ಎಂದು ನಿವಾಸಿಗಳು ತಿಳಿಸಿದರು. ಹಲವರು ಬ್ಯಾಂಕ್ ಸಾಲ ಪಡೆದು ನಿವೇಶನ ಖರೀದಿಸಿದ್ದು, ಇನ್ನೂ ಸಾಲದ ಕಂತುಗಳನ್ನು ಪಾವತಿಸುತ್ತಿದ್ದಾರೆ.

“ನಗರದ ಅಭಿವೃದ್ಧಿಗೆ ಅಥವಾ ರಸ್ತೆ ನಿರ್ಮಾಣಕ್ಕೆ ನಾವು ವಿರೋಧಿಸುತ್ತಿಲ್ಲ. ಆದರೆ ಸರ್ಕಾರವೇ ಅನುಮೋದಿಸಿ ಅಭಿವೃದ್ಧಿಗೆ ಅವಕಾಶ ನೀಡಿರುವ ಬಡಾವಣೆಗಳನ್ನು ಈಗ ಅದೇ ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ನ್ಯಾಯಸಮ್ಮತವಲ್ಲ. ಈಗಾಗಲೇ ಮನೆಗಳು ಮತ್ತು ಬಡಾವಣೆಗಳು ನಿರ್ಮಾಣವಾಗಿರುವ ಪ್ರದೇಶಗಳನ್ನು ಉಳಿಸುವಂತೆ PRR-2 ಮಾರ್ಗವನ್ನು ಮರುಪರಿಶೀಲಿಸಬೇಕು” ಎಂದು ಅರುಣ್ ಒತ್ತಾಯಿಸಿದರು.

60 ನಿವೇಶನಗಳ ‘ದಿ ಗಾರ್ಡನ್ಸ್’, ಕೃಷ್ಣ ಗಾರ್ಡನ್ಸ್‌ಗೂ ಆತಂಕ

ನಿವಾಸಿಗಳ ಪ್ರಕಾರ, ಗುಲಕಮಲೆ ಗ್ರಾಮದ ‘ದಿ ಗಾರ್ಡನ್ಸ್-4’ ಬಡಾವಣೆಯಲ್ಲಿ ಸುಮಾರು 60 ನಿವೇಶನಗಳಿದ್ದು, ಸಮೀಪದ ಕೃಷ್ಣ ಗಾರ್ಡನ್ಸ್ ಪ್ರದೇಶದಲ್ಲಿಯೂ ನೂರಾರು ನಿವೇಶನಗಳು ಯೋಜನೆಯ ಪರಿಣಾಮಕ್ಕೆ ಒಳಗಾಗುವ ಆತಂಕವಿದೆ.

ಇವು ಅನಧಿಕೃತ ಬಡಾವಣೆಗಳಲ್ಲ. BMRDA, KPA, BESCOM ಹಾಗೂ RERA ಸೇರಿದಂತೆ ವಿವಿಧ ಹಂತಗಳಲ್ಲಿ ಅನುಮೋದನೆ ಮತ್ತು ದಾಖಲೆಗಳನ್ನು ಪಡೆದ ನಂತರವೇ ಜನರು ನಿವೇಶನ ಖರೀದಿಸಿದ್ದಾರೆ ಎಂದು ಅವರು ಹೇಳಿದರು.

‘ಜೀವನಪೂರ್ತಿ ಉಳಿತಾಯವೇ ಈ ನಿವೇಶನ’

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಲವು ನಿವೇಶನ ಮಾಲೀಕರು, “ನಮ್ಮಲ್ಲಿ ಬಹುತೇಕರು ಮಧ್ಯಮ ವರ್ಗದವರು. ಮಕ್ಕಳ ಭವಿಷ್ಯ, ನಿವೃತ್ತಿಯ ನಂತರ ಮನೆ ನಿರ್ಮಿಸಿಕೊಳ್ಳುವ ಕನಸು ಹಾಗೂ ಕುಟುಂಬದ ಭದ್ರತೆಗಾಗಿ ಹಲವು ವರ್ಷಗಳ ಉಳಿತಾಯದ ಹಣವನ್ನು ಇಲ್ಲಿ ಹೂಡಿಕೆ ಮಾಡಿದ್ದೇವೆ” ಎಂದು ನೋವು ತೋಡಿಕೊಂಡರು.

ಕೆಲವರು ಬ್ಯಾಂಕ್ ಸಾಲ ಪಡೆದು ನಿವೇಶನ ಖರೀದಿಸಿದ್ದು, ಇನ್ನೂ ಸಾಲ ತೀರಿಸುತ್ತಿರುವುದಾಗಿ ತಿಳಿಸಿದರು. ಒಂದು ಕುಟುಂಬ ತನ್ನ ಮಗಳ ಭವಿಷ್ಯಕ್ಕಾಗಿ ಜೀವನಪೂರ್ತಿ ಉಳಿತಾಯದ ಹಣವನ್ನು ನಿವೇಶನದಲ್ಲಿ ಹೂಡಿಕೆ ಮಾಡಿರುವುದಾಗಿಯೂ ಹೇಳಿಕೊಂಡಿತು.

“ಸರ್ಕಾರದ ಅನುಮೋದಿತ ದಾಖಲೆಗಳನ್ನು ನಂಬಿ ಖರೀದಿಸಿದ ಆಸ್ತಿಯೇ ಈಗ ಅಪಾಯದಲ್ಲಿದೆ ಎಂದರೆ ಸಾಮಾನ್ಯ ನಾಗರಿಕರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ” ಎಂದು ನಿವಾಸಿಗಳು ಹೇಳಿದರು.

ಹಳೆಯ ಭೂಮಾಲೀಕರ ಹೆಸರಿನಲ್ಲಿ ಅಧಿಸೂಚನೆ?

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪ್ರಸ್ತುತ ನಿವೇಶನ ಮಾಲೀಕರ ಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ ಎಂಬುದೂ ನಿವಾಸಿಗಳ ಪ್ರಮುಖ ಆರೋಪವಾಗಿದೆ.

21 ವರ್ಷಗಳ ಹಿಂದಿನ ಭೂಮಾಲೀಕರ ಹೆಸರಿನ ಆಧಾರದಲ್ಲೇ ಅಧಿಸೂಚನೆ ಮಾಡಲಾಗಿದೆ. ಆದರೆ ಮಧ್ಯಂತರದಲ್ಲಿ ಜಮೀನು ಪರಿವರ್ತನೆಗೊಂಡು, ಬಡಾವಣೆ ಅಭಿವೃದ್ಧಿಯಾಗಿ, ನಿವೇಶನಗಳು ಮಾರಾಟವಾಗಿದ್ದು, ಮನೆಗಳೂ ನಿರ್ಮಾಣಗೊಂಡಿವೆ. ಇಂತಹ ಬದಲಾವಣೆಗಳನ್ನು ಪರಿಶೀಲಿಸದೆ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸುವುದು ಸರಿಯಲ್ಲ ಎಂದು ಅವರು ವಾದಿಸಿದರು.

PRR-2 ಯೋಜನೆಯನ್ನೇ ಕೈಬಿಡಬೇಕು ಎಂಬುದು ತಮ್ಮ ಬೇಡಿಕೆಯಲ್ಲ ಎಂದು ಸ್ಪಷ್ಟಪಡಿಸಿದ ನಿವಾಸಿಗಳು, “ಅಭಿವೃದ್ಧಿ ನಡೆಯಲಿ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವೇ ಅನುಮೋದಿಸಿದ ಬಡಾವಣೆಗಳಲ್ಲಿ ವಾಸಿಸುವ ಸಾಮಾನ್ಯ ಜನರ ಮನೆ, ನಿವೇಶನ ಮತ್ತು ಜೀವನಪೂರ್ತಿ ಉಳಿತಾಯ ಬಲಿಯಾಗಬಾರದು” ಎಂದು ಒತ್ತಾಯಿಸಿದರು.

ಸರ್ಕಾರ ಮತ್ತು BDA ಬಾಧಿತ ಪ್ರದೇಶಗಳಲ್ಲಿ ಈಗಿರುವ ವಾಸ್ತವ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅಭಿವೃದ್ಧಿಗೊಂಡ ಮತ್ತು ಅನುಮೋದಿತ ಬಡಾವಣೆಗಳನ್ನು ಸಾಧ್ಯವಾದಷ್ಟು ಭೂಸ್ವಾಧೀನದಿಂದ ಹೊರಗಿಡಬೇಕು. ಪರ್ಯಾಯ ಮಾರ್ಗ ಸಾಧ್ಯವೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಸಂಬಂಧಪಟ್ಟ BDA ಅಧಿಕಾರಿಗಳು, ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದ ನಿವಾಸಿಗಳು, ನ್ಯಾಯ ದೊರೆಯದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದರು.

Read the full story on Anukshana