Full site

ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಬರಲಿದೆ ಕೇಂದ್ರದ ತಂಡ: ಕಂಗೆಟ್ಟ ಜನರಿಗೆ ಸಿಗಲಿದೆಯೇ ಪರಿಹಾರ? ಸಚಿವರು ಹೇಳಿದ್ದೇನು

ಕರ್ನಾಟಕದ ಬರ ಪರಿಸ್ಥಿತಿ ಅಧ್ಯಯನಕ್ಕೆ ಅಕ್ಟೋಬರ್ 3ರಂದು ಕೇಂದ್ರದ ತಂಡ ಭೇಟಿ ನೀಡಲಿದೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಎಲ್ ನಿನೋ ಆತಂಕದ ನಡುವೆಯೂ ಬಿತ್ತನೆ ಗುರಿ ಸಾಧಿಸಲಾಗಿದ್ದು, ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಮಣ್ಣಿನ ಆರೋಗ್ಯ ರಕ್ಷಣೆಗೆ 'ಖೇತ್ ಬಚಾವೋ ಅಭಿಯಾನ' ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

2 min read

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿನ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಆಯಾ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇಂದು ದೆಹಲಿಯಲ್ಲಿ ಹೇಳಿದ್ದಾರೆ.

ಹಿಂಗಾರು ಅಭಿಯಾನ 2026ರ ಕೃಷಿ ಕುರಿತ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ತಮ್ಮ ರಾಜ್ಯಗಳ ಬಹುಭಾಗದಲ್ಲಿ ಬರಗಾಲವನ್ನು ಘೋಷಿಸಿವೆ. ಈ ಹಿನ್ನೆಲೆಯಲ್ಲಿ, ಬರ ಪರಿಸ್ಥಿತಿಯನ್ನು ಅಂದಾಜಿಸಲು ಅಕ್ಟೋಬರ್ 3 ರಂದು ಕೇಂದ್ರ ತಂಡವನ್ನು ಕಳುಹಿಸಲಾಗುವುದು. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ದೃಢವಾಗಿ ನಿಂತಿದೆ ಎಂದರು.

ಕರ್ನಾಟಕ ಸರ್ಕಾರವು ಈ ಮೊದಲು ವೈಜ್ಞಾನಿಕ ಮೌಲ್ಯಮಾಪನದ ನಂತರ ಹಂತ-ಹಂತವಾಗಿ ರಾಜ್ಯದ ಒಟ್ಟು 240 ತಾಲ್ಲೂಕುಗಳ ಪೈಕಿ 177 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿತ್ತು. ತದನಂತರ ಮತ್ತೊಂದಿಷ್ಟು ತಾಲೂಕುಗಳನ್ನು ಸೇರಿಸಿತು. ರಾಜ್ಯದಲ್ಲಿ ಮಾನ್ಸೂನ್ ಮಳೆ ಕೊರತೆಯಿಂದಾಗಿ (ಸುಮಾರು ಶೇ. 36 ರಷ್ಟು ಮಳೆ ಅಭಾವ) ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ಅದರಲ್ಲೂ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.

'ಎಲ್ ನಿನೋ' ಪರಿಣಾಮ

'ಎಲ್ ನಿನೋ' ಪರಿಣಾಮದಿಂದಾಗಿ ಬಿತ್ತನೆ ಪ್ರದೇಶ ಕಡಿಮೆಯಾಗಬಹುದು ಮತ್ತು ಗಂಭೀರ ಸವಾಲುಗಳು ಎದುರಾಗಬಹುದು ಎಂಬ ಆರಂಭಿಕ ಆತಂಕಗಳಿದ್ದವು. ಆದಾಗ್ಯೂ, ದೇಶವು ತನ್ನ ಮುಂಗಾರು ಬಿತ್ತನೆ ಗುರಿಗಳನ್ನು ಬಹುತೇಕ ಪೂರೈಸಿದೆ ಎಂದು ಸಚಿವರು ತಿಳಿಸಿದರು.

ದೇಶಾದ್ಯಂತ ರಸಗೊಬ್ಬರಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆವಾಗಿದೆ ಎಂದ ಅವರು, ಸವಾಲಿನ ಸಂದರ್ಭಗಳ ಹೊರತಾಗಿಯೂ ರಸಗೊಬ್ಬರದ ಸಮರ್ಪಕ ಲಭ್ಯತೆಯನ್ನು ಖಾತ್ರಿಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಮಣ್ಣಿನ ಆರೋಗ್ಯ

ಮಣ್ಣಿನ ಆರೋಗ್ಯವನ್ನು ರಕ್ಷಿಸಲು ರಸಗೊಬ್ಬರದ ಸಮತೋಲಿತ ಬಳಕೆಯ ಮಹತ್ವದ ಬಗ್ಗೆ ಇದೇ ವೇಳೆ ಮಾಹಿತಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ ನೀಡಿದರು. ಮಣ್ಣಿನ ಪೋಷಕಾಂಶಗಳ ಕೊರತೆ ನಿವಾರಿಸುವ ನಿಟ್ಟಿನಲ್ಲಿ, 'ಮಣ್ಣಿನ ಆರೋಗ್ಯ ಕಾರ್ಡ್' ಶಿಫಾರಸುಗಳ ಆಧಾರದ ಮೇಲೆ ರಸಗೊಬ್ಬರ ಬಳಕೆಯನ್ನು ಖಚಿತಪಡಿಸಿಕೊಳ್ಳಲು 'ಖೇತ್ ಬಚಾವೋ ಅಭಿಯಾನ' ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರದ ಅಧಿಕಾರ

ಇನ್ನು ಬರಗಾಲದ ಕುರಿತು ಹೇಳುವುದಾದರೆ, ಭಾರತದ ಒಕ್ಕೂಟ ವ್ಯವಸ್ಥೆಯ ಪ್ರಕಾರ, ಯಾವುದೇ ರಾಜ್ಯದಲ್ಲಿ ಅಥವಾ ಪ್ರದೇಶದಲ್ಲಿ ಬರಗಾಲವನ್ನು ಘೋಷಿಸುವ ಪ್ರಾಥಮಿಕ ಅಧಿಕಾರ ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕಿರುತ್ತದೆ. ಕೇಂದ್ರ ಸರ್ಕಾರವು ಸ್ವತಃ ಯಾವುದೇ ರಾಜ್ಯದಲ್ಲಿ ನೇರವಾಗಿ ಬರಗಾಲವನ್ನು ಸಾರುವುದಿಲ್ಲ. ಕರ್ನಾಟಕ ಸರ್ಕಾರವು ಒಮ್ಮೆ ಅಧಿಕೃತ ನಿಯಮಾವಳಿಗಳಂತೆ ಬರಗಾಲ ಘೋಷಿಸಿದರೆ, ಆ ಆದೇಶವು ಆರು ತಿಂಗಳ ಕಾಲ ಮಾನ್ಯವಾಗಿರುತ್ತದೆ. ತದನಂತರ ಪರಿಸ್ಥಿತಿಯನ್ನು ಮರು ಪರಿಶೀಲಿಸಲಾಗುತ್ತದೆ.

Source: Asianet Suvarna News

Read the full story on Anukshana