Full site
Social Justice

ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ವಿಫಲ: ಕಠಿಣ ಕ್ರಮಕ್ಕೆ ಒತ್ತಾಯ

2 min read

ಬೆಂಗಳೂರು: ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಅಸ್ಪೃಶ್ಯತೆ ಆಚರಣೆ, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಜಾತಿ ಆಧಾರಿತ ಹಿಂಸೆ ಮತ್ತು ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.

ವಿಶೇಷವಾಗಿ ಕೊಪ್ಪಳ, ರಾಯಚೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪ್ರಕರಣಗಳಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿಲ್ಲ ಎಂದು ದೂರಿದರು.

ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಒತ್ತಾಯ

ಜಾತಿ ಆಧಾರಿತ ಹಿಂಸೆ ಮತ್ತು ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಾಮಾಣಿಕ ತನಿಖೆ ನಡೆಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಎಲ್ಲ ಸಮುದಾಯಗಳ ಸಾಮಾಜಿಕ ಸ್ಥಿತಿ ಒಂದೇ ರೀತಿಯಾಗಿಲ್ಲ. ಅಸ್ಪೃಶ್ಯ ಸಮುದಾಯಗಳ ಮೇಲೆ ಇತರ ಪ್ರಬಲ ಸಮುದಾಯಗಳಿಂದ ನಡೆಯುತ್ತಿರುವ ಜಾತಿ ಆಧಾರಿತ ದೌರ್ಜನ್ಯಗಳನ್ನು ತಡೆಯಲು ಕಾನೂನಿನಲ್ಲಿ ಅಗತ್ಯ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ಪ್ರಕರಣಗಳ ಉಲ್ಲೇಖ

ಕಳೆದ ಎರಡು ತಿಂಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಹಲವು ಪ್ರಕರಣಗಳನ್ನು ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಲಾಯಿತು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಭೂಮಾನಂದ ಅವರ ಹತ್ಯೆ ಪ್ರಕರಣ, ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಲಿಂಗಸೂರು ತಾಲೂಕಿನ ರಾಣಿಯಮ್ಮ ಅವರ ಕೊಲೆ ಪ್ರಕರಣ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಸಿಂಹಾದ್ರಿ ಅವರ ಹತ್ಯೆ ಪ್ರಕರಣ, ವೋಲೆನಹಳ್ಳಿಯ ಆನಂದ ಅವರ ಕೊಲೆ ಪ್ರಕರಣ ಹಾಗೂ ಮಧುಗಿರಿ ತಾಲೂಕಿನ ಐ.ಡಿ. ಹಳ್ಳಿಯ ಪುರುಷೋತ್ತಮ್ ಅವರ ಕೊಲೆ ಪ್ರಕರಣಗಳ ಕುರಿತು ಪ್ರಸ್ತಾಪಿಸಿದರು.

ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ದಲಿತ ಸಮುದಾಯದಲ್ಲಿ ಭದ್ರತೆಯ ಬಗ್ಗೆ ಆತಂಕ ಮೂಡಿದೆ ಎಂದು ಮುಖಂಡರು ಹೇಳಿದರು.

ಸರ್ಕಾರಕ್ಕೆ ಹಲವು ಬೇಡಿಕೆಗಳು

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟರು.

  • ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಮರ್ಪಕ ತನಿಖೆ ನಡೆಸಬೇಕು.
  • ಜಾತಿ ಕಾರಣಕ್ಕಾಗಿ ಹಲ್ಲೆ, ಅತ್ಯಾಚಾರ ಮತ್ತು ಕೊಲೆಗೆ ಒಳಗಾದ ಕುಟುಂಬಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು.
  • ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ಮತ್ತು ಐದು ಎಕರೆ ಭೂಮಿ ನೀಡಬೇಕು.
  • ಕೊಪ್ಪಳ, ರಾಯಚೂರು, ತುಮಕೂರು ಸೇರಿದಂತೆ ದೌರ್ಜನ್ಯ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳನ್ನು ಅತಿಸೂಕ್ಷ್ಮ ಜಿಲ್ಲೆಗಳೆಂದು ಘೋಷಿಸಿ ವಿಶೇಷ ಕ್ರಮ ಕೈಗೊಳ್ಳಬೇಕು.
  • ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ಜಿಲ್ಲಾಡಳಿತದಿಂದ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  • ಅಸ್ಪೃಶ್ಯ ಸಮುದಾಯಗಳ ರಕ್ಷಣೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು.
  • ದೌರ್ಜನ್ಯ ಪ್ರಕರಣಗಳು ನಡೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿ ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು

ಪತ್ರಿಕಾಗೋಷ್ಠಿಯಲ್ಲಿ ಒಳ ಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಳ್ ಮತ್ತು ಅಂಬಣ್ಣ ಅರೋಲಿಕರ್,

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಮೋಹನ್ ರಾಜ್,

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್,

ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ವೇಣುಗೋಪಾಲ್ ಮೌರ್ಯ,

PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ (ರಿ) ರಾಜ್ಯಾಧ್ಯಕ್ಷೆ ಮಂಜುಸಾರ,

PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ (ರಿ) ಗೌರವ ಅಧ್ಯಕ್ಷ ಬಿ.ಎಂ. ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read the full story on Anukshana