Full site
Tourism

ಹಂಪಿ ಸಂರಕ್ಷಣಾ ಕ್ರಮಗಳಿಗೆ ಯುನೆಸ್ಕೋ ತಜ್ಞರ ಮೆಚ್ಚುಗೆ; ಡಿಸೆಂಬರ್ ಮಧ್ಯಭಾಗದಲ್ಲಿ ಅಂತಿಮ ವರದಿ

ಸ್ಥಳೀಯ ಸಮುದಾಯದ ಹೆಚ್ಚಿನ ಭಾಗವಹಿಸುವಿಕೆ, HWHAMA ಬಲವರ್ಧನೆ ಮತ್ತು ಆಡಳಿತಾತ್ಮಕ ನಿರಂತರತೆಗೆ ಒತ್ತು; ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಕಡ್ಡಾಯಗೊಳಿಸಲು ಸೂಚನೆ

By Anukshana News Desk2 min read

ಬೆಂಗಳೂರು: ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಹಂಪಿಯಲ್ಲಿ ಪರಿಶೀಲನೆ ನಡೆಸಿದ ಯುನೆಸ್ಕೋ ತಜ್ಞರ ತಂಡವು ಸ್ಮಾರಕಗಳ ಒಟ್ಟಾರೆ ಸಂರಕ್ಷಣಾ ಸ್ಥಿತಿ ಹಾಗೂ ರಾಜ್ಯ ಸರ್ಕಾರ, ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಸಂಬಂಧಿತ ಸಂಸ್ಥೆಗಳ ನಡುವಿನ ಸಮನ್ವಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪರಿಶೀಲನಾ ಮಿಷನ್‌ನ ಅಂತಿಮ ವರದಿ ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

ಹಂಪಿಯಲ್ಲಿ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ಯುನೆಸ್ಕೋ ತಜ್ಞರು ತಮ್ಮ ಪ್ರಾಥಮಿಕ ಅಭಿಪ್ರಾಯಗಳು ಮತ್ತು ಶಿಫಾರಸುಗಳನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡರು.

ಹಂಪಿಯಲ್ಲಿ ಕೈಗೊಳ್ಳಲಾಗುತ್ತಿರುವ ಸಂರಕ್ಷಣಾ ಕ್ರಮಗಳನ್ನು ಶ್ಲಾಘಿಸಿದ ತಂಡವು, ವಿಶ್ವ ಪರಂಪರೆ ತಾಣದ ದೀರ್ಘಕಾಲೀನ ಮತ್ತು ಸುಸ್ಥಿರ ನಿರ್ವಹಣೆಗೆ ಸ್ಥಳೀಯ ಸಮುದಾಯದ ಹೆಚ್ಚಿನ ಭಾಗವಹಿಸುವಿಕೆ ಅಗತ್ಯವೆಂದು ಅಭಿಪ್ರಾಯಪಟ್ಟಿತು. ಜೊತೆಗೆ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವನ್ನು (HWHAMA) ತಜ್ಞ ಮಾನವ ಸಂಪನ್ಮೂಲ ಹಾಗೂ ಸಮರ್ಪಕ ಹಣಕಾಸಿನ ಮೂಲಕ ಮತ್ತಷ್ಟು ಬಲಪಡಿಸುವುದು, ಪರಂಪರೆ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರಂತರತೆ ಕಾಯ್ದುಕೊಳ್ಳುವುದು ಮತ್ತು ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ನಡೆಸುವುದು ಅಗತ್ಯವೆಂದು ಸೂಚಿಸಿತು.

ಕೀನ್ಯಾದ ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಅವರು ಹಂಪಿಯನ್ನು ಜಾಗತಿಕ ಮಹತ್ವ ಹೊಂದಿರುವ ಅಪೂರ್ವ ಪರಂಪರೆ ತಾಣವೆಂದು ಬಣ್ಣಿಸಿದರು. ಸ್ಮಾರಕಗಳ ಪ್ರಸ್ತುತ ಸ್ಥಿತಿ ಮತ್ತು ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಯುನೆಸ್ಕೋ ತಂಡದ ಭೇಟಿ ತನಿಖೆಯ ಉದ್ದೇಶದ್ದಲ್ಲ, ಬದಲಾಗಿ ಹಂಪಿಯ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆಗೆ ಸಹಭಾಗಿತ್ವ ನೀಡುವ ಉದ್ದೇಶದ್ದಾಗಿದೆ ಎಂದು ತಿಳಿಸಿದರು.

“ನಾವು ತನಿಖಾಧಿಕಾರಿಗಳಾಗಿ ಅಲ್ಲ, ಸ್ನೇಹಿತರಾಗಿ ಮತ್ತು ಈ ಪರಂಪರೆ ತಾಣದ ಅಭಿವೃದ್ಧಿಯ ಪಾಲುದಾರರಾಗಿ ಬಂದಿದ್ದೇವೆ,” ಎಂದು ಹೇಳಿದ ಅವರು, ಹಂಪಿಯ ಭವಿಷ್ಯದ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯವೇ ಕೇಂದ್ರಬಿಂದುವಾಗಿರಬೇಕು ಎಂದು ಒತ್ತಿ ಹೇಳಿದರು.

“ನನ್ನನ್ನು ಹೊರತುಪಡಿಸಿ ನನಗಾಗಿ ಏನನ್ನಾದರೂ ಮಾಡಿದರೆ, ಅದು ನನ್ನ ವಿರುದ್ಧ ಮಾಡಿದಂತೆಯೇ,” ಎಂಬ ಮಾತನ್ನು ಉಲ್ಲೇಖಿಸಿದ ಅವರು, ಸ್ಥಳೀಯ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಸುಸ್ಥಿರ ಪರಂಪರೆ ಸಂರಕ್ಷಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಜಪಾನ್‌ನ ಯುನೆಸ್ಕೋ ತಜ್ಞ ಪ್ರೊ. ಇಚಿತಾ ಶಿಮೋಡಾ ಮಾತನಾಡಿ, ಹಂಪಿಯನ್ನು ಕೇವಲ ಸ್ಮಾರಕಗಳ ಸಮೂಹವಾಗಿ ನೋಡುವುದಕ್ಕಿಂತ, ಜೀವಂತ ಸಾಂಸ್ಕೃತಿಕ ಪರಂಪರೆ ಹಾಗೂ ಜಾಗತಿಕ ಪ್ರವಾಸೋದ್ಯಮ ತಾಣವಾಗಿ ಪರಿಗಣಿಸಬೇಕು ಎಂದರು. ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸ್ಥಳೀಯರ ದೈನಂದಿನ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, “ಹಂಪಿಯ Outstanding Universal Value ಅನ್ನು ಯಾವುದೇ ರಾಜಿಯಿಲ್ಲದೆ ಕಾಪಾಡುವುದು ರಾಜ್ಯ ಸರ್ಕಾರದ ಬದ್ಧತೆಯಾಗಿದೆ. ಸಂರಕ್ಷಣೆಯ ಜೊತೆಗೆ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ, ತಜ್ಞರ ಮಾರ್ಗದರ್ಶನ ಮತ್ತು ಬಲಿಷ್ಠ ಸಂಸ್ಥಾತ್ಮಕ ವ್ಯವಸ್ಥೆ ಅಗತ್ಯ,” ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಯು ಪರಂಪರೆ ಸಂರಕ್ಷಣೆಗೆ ಅಥವಾ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆಯಬೇಕು ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ. ಮುಂದಿನ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅವಿಭಾಜ್ಯ ಅಂಗವಾಗಲಿದೆ,” ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ASI ವಿಶ್ವ ಪರಂಪರೆ ತಾಣಗಳ ಹೆಚ್ಚುವರಿ ಮಹಾನಿರ್ದೇಶಕಿ ಜಾಹ್ನವಿ ಶರ್ಮಾ, ವಿಜಯನಗರ ಜಿಲ್ಲಾಧಿಕಾರಿ ಹಾಗೂ HWHAMA ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ, ಪ್ರವಾಸೋದ್ಯಮ ಆಯುಕ್ತ ಶಿವಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ಪುರಾತತ್ವ ಸಮೀಕ್ಷೆ, ಕೊಪ್ಪಳ ಜಿಲ್ಲಾಡಳಿತ, HWHAMA ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.

Read the full story on Anukshana