Full site
Day Special

ವೈಚಾರಿಕತೆ, ಶಿಕ್ಷಣದ ಧ್ವನಿಗಾಗಿ ಯುವ ನಾಯಕ ಬೇಕು: ಶಶಿ ಹುಲಿಕುಂಟೆಮಠ ಬೆಂಬಲಕ್ಕೆ ಸಾಹಿತಿಗಳ ಮನವಿ

By Anukshana News Desk3 min read

ಗಾಂಧೀಜಿಯ ಬಾಲ್ಯದಿಂದ ಅಂತಿಮ ಯಾತ್ರೆಯವರೆಗಿನ ಬದುಕಿಗೆ ಡಿಜಿಟಲ್ ಸ್ಪರ್ಶ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಉದ್ಘಾಟನೆ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಜೀವನ, ಹೋರಾಟ, ಚಿಂತನೆ ಹಾಗೂ ಅಹಿಂಸೆಯ ಸಂದೇಶವನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ‘ಗಾಂಧಿ ಮ್ಯೂಸಿಯಂ’ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಅಂಗವಾಗಿ ಲೋಕಾರ್ಪಣೆಗೊಳ್ಳಲಿದೆ.

ಗಾಂಧಿ ಜಯಂತಿ ಹಾಗೂ ವಿಶ್ವ ಅಹಿಂಸಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಬೆಳಗ್ಗೆ 11 ಗಂಟೆಗೆ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಾಂಧಿ ಮ್ಯೂಸಿಯಂ ಲೋಕಾರ್ಪಣೆ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಗಾಂಧಿ ಚಿಂತನೆಗೆ ಸಂಬಂಧಿಸಿದ ವಿವಿಧ ಪುಸ್ತಕಗಳ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ನೂತನ ಮ್ಯೂಸಿಯಂನ ವಿಶೇಷತೆಗಳು ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

‘ಮಹಾತ್ಮನ ಪಯಣ’ಕ್ಕೆ ಡಿಜಿಟಲ್ ಸ್ಪರ್ಶ

‘ಮಹಾತ್ಮನ ಪಯಣ’ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಗಾಂಧಿ ಮ್ಯೂಸಿಯಂನಲ್ಲಿ ಮಹಾತ್ಮ ಗಾಂಧೀಜಿಯ ಬಾಲ್ಯದಿಂದ ಹಿಡಿದು ಅವರ ಅಂತಿಮ ಯಾತ್ರೆಯವರೆಗಿನ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರ, ಧ್ವನಿ, ದಾಖಲೆ ಹಾಗೂ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಅನಾವರಣಗೊಳಿಸಲಾಗುತ್ತದೆ.

ಗಾಂಧೀಜಿಯ ಜೀವನಕ್ಕೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರಗಳು, ಐತಿಹಾಸಿಕ ದಾಖಲೆಗಳು, ಪತ್ರಗಳು ಹಾಗೂ ವೈಯಕ್ತಿಕ ದಾಖಲೆಗಳ ಸಂಗ್ರಹ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿವೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಒದಗಿಸಲಾಗಿದ್ದು, ಗಾಂಧೀಜಿಯ ಜೀವನ ಮತ್ತು ಚಿಂತನೆಗಳನ್ನು ಸಂದರ್ಶಕರು ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಮ್ಯೂಸಿಯಂ ರೂಪಿಸಲಾಗಿದೆ.

‘ಇತಿಹಾಸವನ್ನು ನೋಡುವುದಷ್ಟೇ ಅಲ್ಲ... ಅನುಭವಿಸುವ ಅವಕಾಶ’ ಎಂಬ ಪರಿಕಲ್ಪನೆಯಡಿ, ಇತಿಹಾಸದ ಪುಟಗಳಲ್ಲಿರುವ ಗಾಂಧೀಜಿಯ ಬದುಕನ್ನು ಡಿಜಿಟಲ್ ಪರದೆ ಮತ್ತು ಧ್ವನಿ-ದೃಶ್ಯ ತಂತ್ರಜ್ಞಾನದ ಮೂಲಕ ಹೊಸ ತಲೆಮಾರಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ.

ಬೆಳಗ್ಗೆ 9ಕ್ಕೆ ಸದ್ಭಾವನಾ ಯಾತ್ರೆ

ಗಾಂಧಿ ಜಯಂತಿಯ ಅಂಗವಾಗಿ ಅಕ್ಟೋಬರ್ 2ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆಯಿಂದ ಗಾಂಧಿ ಭವನದವರೆಗೆ ‘ಸದ್ಭಾವನಾ ಯಾತ್ರೆ’ ನಡೆಯಲಿದೆ.

ರಾಜ್ಯ ಮಾಹಿತಿ ಆಯೋಗದ ಮಾಹಿತಿ ಆಯುಕ್ತರಾದ ಡಾ. ಬಿ.ಆರ್. ಮಮತ, ಐಎಎಸ್ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಬಳಿಕ ಬೆಳಗ್ಗೆ 10 ಗಂಟೆಗೆ ಗಾಂಧಿ ಭವನದಲ್ಲಿ ಗಾಂಧೀಜಿಯವರ ಪ್ರಿಯ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಮಲ್ಲೇಶ್ವರಂನ ಬಿ.ಇ.ಎಸ್. ಶಿಕ್ಷಣ ಸಂಸ್ಥೆಯ ಶಿಕ್ಷಕವೃಂದ ಗೀತೆಗಳನ್ನು ಪ್ರಸ್ತುತಪಡಿಸಲಿದೆ.

ಗಾಂಧಿ ಮ್ಯೂಸಿಯಂ, ಪುಸ್ತಕಗಳ ಲೋಕಾರ್ಪಣೆ

ಬೆಳಗ್ಗೆ 11 ಗಂಟೆಗೆ ಮಹದೇವ ದೇಸಾಯಿ ಸಭಾಂಗಣದಲ್ಲಿ ಗಾಂಧಿ ಜಯಂತಿ ಮತ್ತು ವಿಶ್ವ ಅಹಿಂಸಾ ದಿನಾಚರಣೆಯ ಮುಖ್ಯ ಸಮಾರಂಭ ನಡೆಯಲಿದೆ.

ನೂತನ ಗಾಂಧಿ ಮ್ಯೂಸಿಯಂ ಲೋಕಾರ್ಪಣೆಯೊಂದಿಗೆ ಗಾಂಧೀಜಿ, ಗಾಂಧಿ ಚಿಂತನೆ ಹಾಗೂ ಸಮಾಜಮುಖಿ ವಿಚಾರಗಳಿಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ.

‘ಮಹಾತ್ಮನ ಮಗಳು’, ‘ಮರೆಯಲಾಗದ ಮಾಣಿಕ್ಯ ಟಿ.ಎಸ್. ಸುಬ್ಬಣ್ಣ’, ‘ನನ್ನ ಕನಸಿನ ಭಾರತ’, ‘ಮೋಹನ ಮಾಲೆ’, ‘ಗಾಂಧೀ ಸಂಕಥನ – ಬಹುಮುಖ ನೋಟ’ ಹಾಗೂ ‘ಆಸುಪಾಸಿನಲ್ಲಿ ಗಾಂಧಿ’ ಸೇರಿದಂತೆ ಹಲವು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

‘ಮಹಾತ್ಮನ ಮಗಳು’ ಹಾಗೂ ‘ಮರೆಯಲಾಗದ ಮಾಣಿಕ್ಯ ಟಿ.ಎಸ್. ಸುಬ್ಬಣ್ಣ’ ಕೃತಿಗಳನ್ನು ರಮೇಶ್ ಬಿಳಿಕೆರೆ ರಚಿಸಿದ್ದಾರೆ. ‘ಮೋಹನ ಮಾಲೆ’ ಕೃತಿಯ ಅನುವಾದವನ್ನು ಕೆ.ಎಸ್. ನರಸಿಂಹಸ್ವಾಮಿ ಮಾಡಿದ್ದು, ‘ಆಸುಪಾಸಿನಲ್ಲಿ ಗಾಂಧಿ’ ಕೃತಿಯನ್ನು ಅರವಿಂದ ಚೊಕ್ಕಾಡಿ ರಚಿಸಿದ್ದಾರೆ.

ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ

ಸಮಾರಂಭದಲ್ಲಿ ಶ್ರೀಮತಿ ಜಯಲಕ್ಷ್ಮೀ–ಡಾ. ಹೊ. ಶ್ರೀನಿವಾಸಯ್ಯ ದತ್ತಿ ಪ್ರಶಸ್ತಿ, ಪ್ರೊ. ಜಿ.ಬಿ. ಶಿವರಾಜು ಎನ್‌ಎಸ್‌ಎಸ್ ಶ್ರೇಷ್ಠ ಸೇವಾ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ಸ್ವಯಂಸೇವಕರಿಗೂ ರಾಜ್ಯಮಟ್ಟದ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಇದರೊಂದಿಗೆ ಕೊಪ್ಪಳ ಜಿಲ್ಲೆಯ ವ್ಯಸನಮುಕ್ತ ಗ್ರಾಮಗಳಿಗೆ ‘ಗಾಂಧಿ ಪುರಸ್ಕಾರ’ ನೀಡಿ ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ.

ಡಾ. ವೂಡೇ ಪಿ. ಕೃಷ್ಣ ಅಧ್ಯಕ್ಷತೆ

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಂಧಿ ಚಿಂತಕರು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿನಿಧಿಗಳು, ವಿವಿಧ ಗಾಂಧಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಎಂ.ಸಿ. ನರೇಂದ್ರ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿರಲಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ರಾಷ್ಟ್ರೀಯ ಸೇವಾ ಯೋಜನೆ, ಶೇಷಾದ್ರಿಪುರಂ ಕಾಲೇಜು ಹಾಗೂ ವಿವಿಧ ಗಾಂಧಿ ಸಂಘ-ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಲಿವೆ.

ಗಾಂಧೀಜಿಯ ಸತ್ಯ, ಅಹಿಂಸೆ, ಸರಳತೆ, ಸದ್ಭಾವನೆ ಮತ್ತು ಮಾನವೀಯತೆಯ ಸಂದೇಶವನ್ನು ಹೊಸ ತಲೆಮಾರಿಗೆ ತಲುಪಿಸುವುದರೊಂದಿಗೆ, ಅವರ ಜೀವನದ ಮಹತ್ವದ ಘಟ್ಟಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪರಿಚಯಿಸುವ ‘ಗಾಂಧಿ ಮ್ಯೂಸಿಯಂ’ ಈ ಬಾರಿಯ ಗಾಂಧಿ ಜಯಂತಿಯ ಪ್ರಮುಖ ಆಕರ್ಷಣೆಯಾಗಲಿದೆ.

Read the full story on Anukshana