ಅಕ್ಟೋಬರ್ 31 ರಿಂದ ಜಿಬಿಎ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ‘ಇ-ಖಾತಾ ಮೇಳ’ ಪುನರಾರಂಭ
ಐದು ನಗರ ಪಾಲಿಕೆಗಳ ಎಆರ್‌ಒ ಕಚೇರಿಗಳು ಹಾಗೂ ಆಯ್ದ ಸ್ಥಳಗಳಲ್ಲಿ ಮೇಳ; ಇ-ಖಾತಾ, ಹೊಸ ಖಾತಾ ಮತ್ತು ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ನಾಗರಿಕರಿಗೆ ನೆರವು
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಅಕ್ಟೋಬರ್ 31, 2026ರಿಂದ ಪ್ರತಿ ಶನಿವಾರ ‘ಇ-ಖಾತಾ ಮೇಳ’ವನ್ನು ಪುನರಾರಂಭಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಐದು ನಗರ ಪಾಲಿಕೆಗಳ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳು ಸೇರಿದಂತೆ ಆಯಾ ನಗರ ಪಾಲಿಕೆಗಳ ಆಯುಕ್ತರು ಹಾಗೂ ಜಂಟಿ ಆಯುಕ್ತರು ಗುರುತಿಸುವ ಸ್ಥಳಗಳಲ್ಲಿ ಮೇಳ ನಡೆಯಲಿದೆ.
ಮುಖ್ಯಮಂತ್ರಿ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ನಿರ್ದೇಶನದಂತೆ ಮೇಳವನ್ನು ಪುನರಾರಂಭಿಸಲಾಗುತ್ತಿದ್ದು, ನಾಗರಿಕರು ಇ-ಖಾತಾಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಜಿಬಿಎ ತಿಳಿಸಿದೆ.
ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಆಯಾ ನಗರ ಪಾಲಿಕೆಗಳ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ. ಮೇಳ ನಡೆಯುವ ಸ್ಥಳಗಳ ವಿವರಗಳನ್ನು ಜಿಬಿಎ ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು.
ನಾಗರಿಕರೇ ಸ್ವತಃ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು
ಇ-ಖಾತಾ ಸೇವೆಗಳನ್ನು ಪಡೆಯುವ ವಿಧಾನ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ನೀಡುವ ವಿಡಿಯೋಗಳನ್ನು ಜಿಬಿಎ ಕಂದಾಯ ವಿಭಾಗದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಯೂಟ್ಯೂಬ್ ಚಾನೆಲ್:
https://youtube.com/@revenuebmp?si=8Jh4AVM18g-stdgf
ನಾಗರಿಕರು ಈ ವಿಡಿಯೋಗಳನ್ನು ವೀಕ್ಷಿಸಿ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಂಡು, ಜಿಬಿಎ ಇ-ಆಸ್ತಿ ಪೋರ್ಟಲ್ ಮೂಲಕ ಸ್ವತಃ ಅರ್ಜಿ ಸಲ್ಲಿಸಬಹುದು.
ಇ-ಆಸ್ತಿ ಪೋರ್ಟಲ್:
https://GBAeAasthi.Karnataka.gov.in
ಮನೆ ಬಾಗಿಲಿಗೇ ಜನಸೇವಕ ನೆರವು
ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು, ಹೊಸ ಖಾತಾ ಮಾಡಿಸಿಕೊಳ್ಳಲು ಅಥವಾ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತಿಸಿಕೊಳ್ಳಲು ತೊಂದರೆಯಾಗುತ್ತಿದ್ದರೆ ನಾಗರಿಕರು ಜನಸೇವಕ ಸೇವೆಯನ್ನು ಬಳಸಿಕೊಳ್ಳಬಹುದು.
ಜನಸೇವಕರು ಮನೆ ಬಾಗಿಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೆರವು ನೀಡಲಿದ್ದಾರೆ. ಈ ಸೇವೆಗೆ ಆನ್‌ಲೈನ್ ಮೂಲಕ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು.
ಜನಸೇವಕ ಸ್ಲಾಟ್ ಬುಕ್ಕಿಂಗ್ ವೆಬ್‌ಸೈಟ್:
https://www.janasevaka.karnataka.gov.in/SlotBooking
ದೂರವಾಣಿ ಸಂಖ್ಯೆಗಳು:
080-42474411 / 8904085030
140 ಬೆಂಗಳೂರು ಒನ್ ಕೇಂದ್ರಗಳಲ್ಲೂ ಅರ್ಜಿ ಸೌಲಭ್ಯ
ಜಿಬಿಎ ವ್ಯಾಪ್ತಿಯ 140 ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇ-ಖಾತಾಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ನಾಗರಿಕರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ₹45 ಶುಲ್ಕ ಪಾವತಿಸಿ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು.
ಇ-ಖಾತಾ ಮೇಳ ಸೇರಿದಂತೆ ಲಭ್ಯವಿರುವ ವಿವಿಧ ಸೇವೆಗಳನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳುವಂತೆ ಜಿಬಿಎ ಮನವಿ ಮಾಡಿದೆ.