ಬೆಂಗಳೂರು: ರಾಜ್ಯ ಸರ್ಕಾರವು ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸದ ನಿರ್ಧಾರಕ್ಕೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು. ಹಲವು ವರ್ಷಗಳ ಹೋರಾಟದ ಫಲವಾಗಿ ಈ ನಿರ್ಧಾರ ಜಾರಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಧಾರವನ್ನು ಸಂಘಟನೆ ಪ್ರಶಂಸಿಸಿತು.
ಈ ಕ್ರಮದಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿರಾಳತೆ ಸಿಕ್ಕಿದ್ದು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ಸರ್ಕಾರದ ನಿಲುವನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಲಾಯಿತು.
ಬಿಜೆಪಿ ನಾಯಕರ ವಿರುದ್ಧ ಆಕ್ರೋಶ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಂಸದ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಹಿಂದಿ ಪರ ನಿಲುವು ತಾಳಿರುವುದು ಖಂಡನೀಯ ಎಂದು ಹೇಳಿದರು.
ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಬದಲು ಹಿಂದಿ ಹೇರಿಕೆಗೆ ಬೆಂಬಲ ನೀಡುವುದು ರಾಜ್ಯದ ಹಿತಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಕೇಂದ್ರದ ನೀತಿಗಳ ವಿರುದ್ಧ ಟೀಕೆ
ಕೇಂದ್ರ ಸರ್ಕಾರದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವುದರಿಂದ ಕರ್ನಾಟಕದ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಯಿತು.
ರೇಲ್ವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕನ್ನಡ ಬಳಕೆ ಇಲ್ಲದಿರುವುದು ರಾಜ್ಯದ ಅಭ್ಯರ್ಥಿಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿತು.
ತ್ರಿಭಾಷಾ ನೀತಿಗೆ ತೀವ್ರ ವಿರೋಧ
ಬಿಜೆಪಿ ತ್ರಿಭಾಷಾ ನೀತಿಯನ್ನು ಜಾರಿಗೊಳಿಸುವ ಸೂಚನೆ ನೀಡಿರುವುದನ್ನು ಸಂಘಟನೆ ತೀವ್ರವಾಗಿ ವಿರೋಧಿಸಿತು. ಕರ್ನಾಟಕದಲ್ಲಿ ದ್ವಿಭಾಷಾ ನೀತಿಯೇ ಸೂಕ್ತವಾಗಿದ್ದು, ಹಿಂದಿಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
2026-27ರಿಂದ ದ್ವಿಭಾಷಾ ನೀತಿ ಜಾರಿಗೆ ಆಗ್ರಹ
ಮುಂದಿನ 2026-27ನೇ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಕನ್ನಡ ಭಾಷೆ ಹಾಗೂ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.




