ಬೆಂಗಳೂರು: ದಳಿತ ಹಾಗೂ ಎಸ್ಸಿ/ಎಸ್ಟಿ ಸಮುದಾಯಗಳ ಬದುಕು, ಹಕ್ಕುಗಳು, ಸಾಮಾಜಿಕ ಅನ್ಯಾಯ ಮತ್ತು ಸಮಸ್ಯೆಗಳನ್ನು ಮುಖ್ಯವಾಹಿನಿಯ ಚರ್ಚೆಗೆ ತರುವಲ್ಲಿ ದಳಿತ ಪತ್ರಿಕೋದ್ಯಮದ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಎಸ್ಸಿ/ಎಸ್ಟಿ ಸಂಪಾದಕರ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ದೀರ್ಘಕಾಲದಿಂದ ಮುಂದುವರಿದಿರುವ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯವನ್ನು ಸರಿಪಡಿಸಿ, ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶವೇ ಮೀಸಲಾತಿಯಾಗಿದೆ. ಅದು ಯಾರೋ ನೀಡುವ ಭಿಕ್ಷೆಯಲ್ಲ ಎಂದು ಹೇಳಿದರು.
ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಎಸ್ಸಿ, ಎಸ್ಟಿ ಸೇರಿದಂತೆ ಅಂಚಿನ ಸಮುದಾಯಗಳ ಧ್ವನಿಯನ್ನು ದಾಖಲಿಸುವುದು ಪತ್ರಿಕೋದ್ಯಮದ ಪ್ರಮುಖ ಜವಾಬ್ದಾರಿಯಾಗಿದೆ. ಈ ಸಮುದಾಯಗಳ ಸಮಸ್ಯೆಗಳು ಕೇವಲ ಸಮುದಾಯದೊಳಗಿನ ವಿಚಾರಗಳಾಗಿ ಉಳಿಯದೆ, ಸಮಾಜದ ಒಟ್ಟಾರೆ ಚರ್ಚೆಯ ಭಾಗವಾಗಬೇಕು ಎಂದು ಅವರು ಹೇಳಿದರು.
ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಮಾಧ್ಯಮದ ಗಮನ ಅಗತ್ಯ
ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆ ಕೇಂದ್ರದಲ್ಲಿಯೂ ಜಾರಿಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ತಮ್ಮ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರಿಗೆ ಕಾಯ್ದೆ ರೂಪಿಸುವಂತೆ ಸೂಚಿಸಲಾಗಿತ್ತು. ಬಳಿಕ ಕಾಯ್ದೆಯನ್ನು ರೂಪಿಸಿ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಯಿತು ಎಂದು ವಿವರಿಸಿದರು.
ಕರ್ನಾಟಕದಲ್ಲಿ ಪ್ರಸ್ತುತ ಎಸ್ಸಿಎಸ್ಪಿ/ಟಿಎಸ್ಪಿ ಅಡಿಯಲ್ಲಿ ಸುಮಾರು ₹44 ಸಾವಿರ ಕೋಟಿ ಅನುದಾನ ಮೀಸಲಿಡಲಾಗುತ್ತಿದ್ದು, ರಾಜ್ಯ ಬಜೆಟ್ನ ಶೇ.24.1ರಷ್ಟು ಅನುದಾನ ಮೀಸಲಿಡಬೇಕೆಂಬ ನಿಯಮದಂತೆ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದರು.
ಪತ್ರಿಕೋದ್ಯಮದ ವ್ಯಾಪ್ತಿ ವಿಸ್ತರಿಸಲಿ
ಎಂಎಲ್ಸಿ ಸತೀಶ್ ಮಾತನಾಡಿ, ಪತ್ರಿಕೋದ್ಯಮ ಮುದ್ರಣ ಮಾಧ್ಯಮಕ್ಕೆ ಮಾತ್ರ ಸೀಮಿತವಾಗದೆ ಡಿಜಿಟಲ್, ದೃಶ್ಯ ಮತ್ತು ಇತರ ಮಾಧ್ಯಮಗಳಲ್ಲೂ ವಿಸ್ತರಿಸಬೇಕು. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಪತ್ರಕರ್ತರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಲು ತಲಾ ₹1 ಲಕ್ಷ ನೀಡುವುದಾಗಿ ಘೋಷಿಸಿದರು.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರಿಗೆ ಉಚಿತ ಬಸ್ಪಾಸ್, ಆರೋಗ್ಯ ಸಂಜೀವಿನಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದ್ದನ್ನು ಸ್ಮರಿಸಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಂ ಮಾತನಾಡಿ, ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಎಐ ತರಬೇತಿ, ವಿಚಾರ ಸಂಕಿರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕೊಳ್ಳೆಗಾಲ ಶಾಸಕ ಕೃಷ್ಣಮೂರ್ತಿ ಮಾತನಾಡಿ, ತಮ್ಮ ತಂದೆಯ ಹೆಸರಿನಲ್ಲಿ ದತ್ತಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಂಬೇಡ್ಕರ್ ದೃಷ್ಟಿಕೋನದ ಕಿರುಹೊತ್ತಿಗೆ ಬಿಡುಗಡೆ
ಸಮಾರಂಭದಲ್ಲಿ ಎನ್. ರವಿಕುಮಾರ್ ಟೆಲೆಕ್ಸ್ ಅವರ ‘ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.
ಸಚಿವ ಕೆ.ಹೆಚ್. ಮುನಿಯಪ್ಪ ಅವರ ಸಂದೇಶದಲ್ಲಿ, ಅಂಬೇಡ್ಕರ್ ಚಿಂತನೆಗಳು ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಅಂಚಿನಲ್ಲಿರುವವರ ನೋವು, ಅನ್ಯಾಯ ಮತ್ತು ಹಕ್ಕುಗಳಿಗೆ ಧ್ವನಿಯಾಗುವುದು ಪತ್ರಿಕೋದ್ಯಮದ ಪ್ರಮುಖ ಸಾಮಾಜಿಕ ಜವಾಬ್ದಾರಿ ಎಂದು ತಿಳಿಸಿದರು.
ಸಾಧಕರಿಗೆ ದತ್ತಿ ಪ್ರಶಸ್ತಿ
ಡಾ. ಅಂಬೇಡ್ಕರ್ ದತ್ತಿ ಪ್ರಶಸ್ತಿ – ಕೆ. ದೀಪಕ್
ಬಿ. ರಾಚಯ್ಯ ದತ್ತಿ ಪ್ರಶಸ್ತಿ – ಬದ್ರುದ್ದೀನ್ ಕೆ.
ಪ್ರೊ. ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ – ಗುರುಪ್ರಸಾದ್ ಕೆರೆಗೋಡು
ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ – ಯತಿರಾಜ್ ಬ್ಯಾಲಹಳ್ಳಿ
ಸಂಪಾದಕರಿಗೆ ಪ್ರಶಸ್ತಿ ಹಾಗೂ ಸನ್ಮಾನ ನೀಡಿ ಚಂದ್ರಣ್ಣ, ದೇವೇಂದ್ರಪ್ಪ ಕವ್ವನೂರು, ಬಿ.ಓ. ಕರಿಯಮ್ಮ, ಸುಭಾಷ್ ಹೊದ್ದೂರು ಹಾಗೂ ವಿ. ಅನೂಪ್ ಕುಮಾರ್ ಅವರನ್ನು ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಚಲುವರಾಜು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವೆಂಕಟೇಶ್, ಕೆಯುಡಬ್ಲ್ಯೂಜೆ ಉಪಾಧ್ಯಕ್ಷ ಮದನಗೌಡ, ಮುಡಾ ಅಧ್ಯಕ್ಷ ಪ್ರಕಾಶ್, ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ., ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರವಿ ಟೆಲೆಕ್ಸ್ ಸ್ವಾಗತಿಸಿದರು.
No ratings yet



