ಪಿಡಿಒ ನೇಮಕಾತಿ ಅಕ್ರಮ ಆರೋಪ: ಸಿಬಿಐ ತನಿಖೆಗೆ ಆಗ್ರಹ
ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1 ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅಭ್ಯರ್ಥಿ ಮೀನಾಕ್ಷಿ ಎ. ಹಾಗೂ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಆಗ್ರಹಿಸಿವೆ.
2min read
ಬೆಂಗಳೂರು: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1 ಹುದ್ದೆಗಳ ನೇಮಕಾತಿಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನೊಂದ ಅಭ್ಯರ್ಥಿ ಮೀನಾಕ್ಷಿ ಎ. ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.
2015–16ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನಿಸಲಾಗಿದ್ದು, 2017ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ನಂತರ ಪ್ರಕಟವಾದ ಆಯ್ಕೆಪಟ್ಟಿ ಹಾಗೂ ಶೇ.25ರ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ತಮ್ಮ ಹೆಸರು ಸೇರಿದ್ದರೂ ನೇಮಕಾತಿ ಆದೇಶ ನೀಡಲಾಗಿಲ್ಲ ಎಂದು ಮೀನಾಕ್ಷಿ ದೂರಿನಲ್ಲಿ ತಿಳಿಸಿದ್ದಾರೆ.
ತಾವು 266 ಅಂಕ ಪಡೆದು ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿಯಡಿ ಆಯ್ಕೆಯಾಗಿದ್ದರೂ, ಸಂಬಂಧಿತ ಅಧಿಕಾರಿಗಳು ನೇಮಕಾತಿ ಆದೇಶ ನೀಡದೆ ಅನ್ಯಾಯ ಮಾಡಿದ್ದಾರೆ ಎಂಬುದು ಅವರ ಆರೋಪ. ಇದೇ ವೇಳೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಹುದ್ದೆ ನೀಡಲಾಗಿದೆ ಮತ್ತು ತಮ್ಮ ಹೆಸರಿನ ನೇಮಕಾತಿ ಅವಕಾಶವನ್ನು ಮತ್ತೊಬ್ಬರಿಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ನೇಮಕಾತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಿಂದಿನ ಕೆಪಿಎಸ್ಸಿ ಆಯ್ಕೆಪಟ್ಟಿಗಳನ್ನು ದುರ್ಬಳಕೆ ಮಾಡಿಕೊಂಡು 1,353 ಪಿಡಿಒ ಹುದ್ದೆಗಳಿಗೆ ಸಂಬಂಧಿಸಿದ ನಕಲಿ ಆಯ್ಕೆಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ ಎಂಬ ಆರೋಪವನ್ನು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಸ್ಪಷ್ಟ ಉತ್ತರ ದೊರೆತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಲೋಕಾಯುಕ್ತ, ರಾಜ್ಯ ಮಹಿಳಾ ಆಯೋಗ, ಸಮಾಜ ಕಲ್ಯಾಣ ಇಲಾಖೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ರಾಜ್ಯ ಎಸ್ಸಿ/ಎಸ್ಟಿ ಆಯೋಗ ಸೇರಿದಂತೆ ಹಲವು ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೀನಾಕ್ಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲೂ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ನ್ಯಾಯಕ್ಕಾಗಿ ವರ್ಷಗಳಿಂದ ಹೋರಾಟ ನಡೆಸುತ್ತಿರುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಎದುರಿಸುತ್ತಿದ್ದೇನೆ. ನೇಮಕಾತಿ ದಾಖಲೆಗಳ ಕುರಿತು ಮಾಹಿತಿ ಕೇಳಿದ ಸಂದರ್ಭದಲ್ಲಿ ಬೆದರಿಕೆ ಎದುರಿಸಿದ್ದೇನೆ ಎಂದೂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಟಿ. ಚಂದ್ರಶೇಖರ ಭೋವಿ, ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ನೇಮಕಾತಿಯಲ್ಲಿ ನಕಲಿ ದಾಖಲೆಗಳ ಸೃಷ್ಟಿ, ಹುದ್ದೆಗಳ ಅಕ್ರಮ ಹಂಚಿಕೆ ಮತ್ತು ಆಯ್ಕೆಪಟ್ಟಿ ಸಂಬಂಧಿತ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಕ್ರಮವಾಗಿ ನೇಮಕಗೊಂಡಿದ್ದಾರೆ ಎಂದು ಆರೋಪಿಸಲಾದವರ ನೇಮಕಾತಿಯನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯಯುತವಾಗಿ ನೇಮಕಾತಿ ನೀಡಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆ ನಡೆಸುವುದು ಅಗತ್ಯ ಎಂದು ಮೀನಾಕ್ಷಿ ತಮ್ಮ ಮನವಿಯಲ್ಲಿ ಕೋರಿದ್ದಾರೆ.
Read this:ಮುಸ್ಲಿಂ ಯುವಜನರ ಉದ್ಯಮಶೀಲತೆಗೆ ಹೊಸ ರೆಕ್ಕೆ: ಅಕ್ಟೋಬರ್ 31ರಂದು ‘ಉಡಾನ್–2026’ ಸಮಾವೇಶ
No ratings yet

