ಗಣನೀಯ ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಣೆ
ಅಕ್ಟೋಬರ್ 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಾಲ್ಮೀಕಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ; 10 ಸಾಧಕರಿಗೆ ತಲಾ ₹5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕ.
2min read
ಬೆಂಗಳೂರು, ಅಕ್ಟೋಬರ್ 25: ರಾಜ್ಯ ಸರ್ಕಾರದ ವತಿಯಿಂದ ಅಕ್ಟೋಬರ್ 26ರಂದು ಆಚರಿಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 10 ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಲು ಜಲಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಸಮಿತಿಯು ಸ್ವೀಕರಿಸಿದ ಒಟ್ಟು 137 ಅರ್ಜಿಗಳನ್ನು ಪರಿಶೀಲಿಸಿ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರು
- ತೇಜಸ್ವಿ ಕಟ್ಟಿಮನಿ — ಶೈಕ್ಷಣಿಕ ಕ್ಷೇತ್ರ, ಅಂಬಿಕೊಪ್ಪ, ಧಾರವಾಡ ಜಿಲ್ಲೆ
- ತಿಪ್ಪಣ್ಣ ಮರಿಕುಂಟೆ — ಸಾಹಿತ್ಯ ಕ್ಷೇತ್ರ, ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
- ಆರ್.ಎಂ. ಮುನಿರಾಜು — ಸಾಂಸ್ಕೃತಿಕ ಸೇವೆ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಡಾ. ಚಂದ್ರನಾಯಕ್ ಎಸ್. — ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರ, ಸರಸ್ವತಿಪುರಂ, ಮೈಸೂರು
- ಜೆ.ಪಿ. ರಾಜು — ಸಾಮಾಜಿಕ ಸೇವೆ, ಕುಶಾಲನಗರ ತಾಲೂಕು, ಕೊಡಗು ಜಿಲ್ಲೆ
- ಶಿವನಗೌಡ ಹೊನ್ನನಗೌಡ ಪಾಟೀಲ — ಸಾಮಾಜಿಕ ಸೇವೆ, ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ
- ನಂದಕುಮಾರ ಮಾಲಿ ಪಾಟೀಲ — ಸಾಮಾಜಿಕ ಸೇವೆ, ಪಂಚಶೀಲ ನಗರ, ಕಲಬುರಗಿ
- ಕೇತಮ್ಮ — ಸಾಮಾಜಿಕ ಸೇವೆ, ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ
- ಬಿ.ಜಿ. ಕೃಷ್ಣಪ್ಪ — ಸಾಮಾಜಿಕ ಸೇವೆ, ಗೋಕುಲ ಬಡಾವಣೆ, ತುಮಕೂರು
- ವೆಂಕಟರಾಮ್ — ಸಾಮಾಜಿಕ ಸೇವೆ, ಮಾಲೂರು ಪಟ್ಟಣ, ಕೋಲಾರ ಜಿಲ್ಲೆ
ತಲಾ ₹5 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ
ಪ್ರಶಸ್ತಿಗೆ ಆಯ್ಕೆಯಾದ ಪ್ರತಿಯೊಬ್ಬ ಸಾಧಕರಿಗೆ ₹5 ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ಶ್ರಮಿಸಿದ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ.
ವಾಲ್ಮೀಕಿ ಜ್ಯೋತಿ ಮೆರವಣಿಗೆ
ವಾಲ್ಮೀಕಿ ಜಯಂತಿಯ ಅಂಗವಾಗಿ ಬೆಂಗಳೂರಿನ ಬಸವನಗುಡಿಯ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಆದಿಗುರು ಪೀಠದ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ವಾಲ್ಮೀಕಿ ಜ್ಯೋತಿ ಮೆರವಣಿಗೆ ಆರಂಭವಾಗಲಿದೆ.
ಬಸವೇಶ್ವರ ವೃತ್ತದಿಂದ ವಿವಿಧ ಸಾಂಸ್ಕೃತಿಕ ಮತ್ತು ಬುಡಕಟ್ಟು ಕಲಾತಂಡಗಳ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಲಿದೆ. ಬಳಿಕ ಶಾಸಕರ ಭವನದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿನ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ.
ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.




