- Home
- Karnataka
- Bengaluru Urban
- Protest
ಅ.8ರಂದು ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’
SIR ಅಕ್ರಮಗಳ ವಿರುದ್ಧ ವಿನೂತನ ಪ್ರತಿಭಟನೆ; ಸಂತ್ರಸ್ತರ ಸಮಸ್ಯೆ, ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಮಂಡಿಸಲು ವೇದಿಕೆ
2min read
ಬೆಂಗಳೂರು, ಅ.6: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಹಾಗೂ SIRನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಕ್ಟೋಬರ್ 8ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ‘ಜನತಾ ನ್ಯಾಯಾಲಯ’ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು SIR ವಿರೋಧಿ ಒಕ್ಕೂಟದ ಮುಖಂಡ ಕೆ.ಎಲ್. ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, SIR ಪ್ರಕ್ರಿಯೆಯ ಮೂಲಕ ಲಕ್ಷಾಂತರ ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾರರ ಹಕ್ಕನ್ನು ಕಸಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಪ್ರಕ್ರಿಯೆಯ ವಿರುದ್ಧ ಜನಜಾಗೃತಿ ಮೂಡಿಸುವುದು, ಅದರ ಪರಿಣಾಮಗಳನ್ನು ಸಾರ್ವಜನಿಕರ ಮುಂದಿಡುವುದು ಹಾಗೂ ಸಂತ್ರಸ್ತರಿಗೆ ತಮ್ಮ ಅಳಲು ಹೇಳಿಕೊಳ್ಳಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಜನತಾ ನ್ಯಾಯಾಲಯ ಆಯೋಜಿಸಲಾಗಿದೆ ಎಂದರು.
ಒಕ್ಕೂಟದ ಪ್ರಕಾರ, ಆದಿವಾಸಿ, ಅಲೆಮಾರಿ, ದಲಿತ, ಮಹಿಳೆ, ಅಲ್ಪಸಂಖ್ಯಾತರು ಹಾಗೂ ಹೊಸ ಮತದಾರರು ಸೇರಿದಂತೆ ಹಲವು ವರ್ಗಗಳ ಮತದಾರರು SIR ಪ್ರಕ್ರಿಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಿಕೆ, ಫಾರಂ-6 ಮತ್ತು ಫಾರಂ-7 ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಗ್ರಹಿಸಿರುವ ಅರ್ಜಿಗಳು, ದಾಖಲೆಗಳು, ಛಾಯಾಚಿತ್ರಗಳು ಹಾಗೂ ವಿಡಿಯೊ ಸಾಕ್ಷ್ಯಗಳನ್ನು ಜನತಾ ನ್ಯಾಯಾಲಯದಲ್ಲಿ ಮಂಡಿಸಲಾಗುವುದು ಎಂದು ತಿಳಿಸಲಾಯಿತು.
ಈ ಜನತಾ ನ್ಯಾಯಾಲಯದಲ್ಲಿ SIR ಪ್ರಕ್ರಿಯೆಯ ಹಿನ್ನೆಲೆ ಹಾಗೂ ಅದರಿಂದ ಆಗಿರುವ ಅನ್ಯಾಯಗಳನ್ನು ತೆರೆದಿಡುವ ಮಹತ್ವದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಾಜರುಪಡಿಸಲಾಗುವುದು. ದೇಶದ ಹಿರಿಯ ಮತ್ತು ಗಣ್ಯ ನ್ಯಾಯಮೂರ್ತಿಗಳು ಆರೋಪಗಳನ್ನು ಆಲಿಸಿ ತಮ್ಮ ತೀರ್ಪು ಅಥವಾ ಅಭಿಪ್ರಾಯ ಪ್ರಕಟಿಸಲಿದ್ದಾರೆ ಎಂದು ಅಶೋಕ್ ಹೇಳಿದರು. ನಟರಾದ ಪ್ರಕಾಶ್ ರಾಜ್, ಕಿಶೋರ್, CJP ಪ್ರಮುಖರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ಸೌರವ್ ದಾಸ್, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಸೇರಿದಂತೆ ರಾಜ್ಯದ ಪ್ರಮುಖ ಸಾಹಿತಿಗಳು, ಚಿಂತಕರು ಹಾಗೂ ವಿದ್ಯಾರ್ಥಿ-ಯುವಜನ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸೆಪ್ಟೆಂಬರ್ 22ರಿಂದ 30ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ SIR ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಬಿಡುಗಡೆ ಮಾಡಿದ್ದು, ಅದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಸಲ್ಲಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದರು. ವಿಶೇಷವಾಗಿ ಫಾರಂ-7 ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.
SIR ಪ್ರಕ್ರಿಯೆ ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆ ಎಂದು ಮುಖಂಡರು ತಿಳಿಸಿದರು. ಕೇವಲ ಅಧಿಕಾರಿಯ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ; ಮತದಾರರ ಹಕ್ಕಿನ ರಕ್ಷಣೆಗಾಗಿ ಸಂಪೂರ್ಣ ಪ್ರಕ್ರಿಯೆಯನ್ನೇ ಮರುಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ಅಕ್ಟೋಬರ್ 8ರಂದು ಬೆಳಿಗ್ಗೆ 10 ಗಂಟೆಯಿಂದ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಜನತಾ ನ್ಯಾಯಾಲಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ SIRನಿಂದ ಅನ್ಯಾಯಕ್ಕೊಳಗಾಗಿರುವವರು ತಮ್ಮ ಸಮಸ್ಯೆ ಮತ್ತು ಅನುಭವಗಳನ್ನು ನೇರವಾಗಿ ಮಂಡಿಸಬಹುದು. ಸಂತ್ರಸ್ತರು ಅಥವಾ ಅವರ ಸಂಪರ್ಕದಲ್ಲಿರುವ ಸಾಮಾಜಿಕ ಕಾರ್ಯಕರ್ತರು 96060 87560 ಸಂಖ್ಯೆಗೆ ಕರೆ ಮಾಡಿ ಅಥವಾ ಸಂದೇಶ ಕಳುಹಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಯಿತು.
ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ವಿಶೇಷ ಪ್ರತಿಭಟನೆಯಲ್ಲಿ ರಾಜ್ಯದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಶೋಕ್ ಕರೆ ನೀಡಿದರು. ವಿದ್ಯಾರ್ಥಿ-ಯುವಜನ ಸಂಘಟನೆಗಳ ಜೊತೆಗೆ ರೈತ, ಕಾರ್ಮಿಕ, ದಲಿತ ಮತ್ತು ಮಹಿಳಾ ಸಂಘಟನೆಗಳೂ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಸೀತಾರಾಂ ಗುಂಡಪ್ಪ, ಫಾದರ್ ಅರಣ್ ಲೂಯಿಸ್, ನೂರ್ ಶ್ರೀಧರ್, ಅಮ್ಜದ್ ಪಾಷಾ, ಜೆ.ಎಂ. ವೀರಸಂಗಯ್ಯ, ಡಾ. ಮನೋಹರ ಚಂದ್ರ ಪ್ರಸಾದ್, ಕುಮಾರ್ ಸಮತಳ, ಮುಹಮ್ಮದ್ ಯೂಸುಫ್ ಕನ್ನಿ, ಸುಹೇಲ್ ಅಹ್ಮದ್, ಅಡ್ವೊಕೇಟ್ ನೈನಾ, ನಾಗೇಶ್ ಅರಳಕುಪ್ಪೆ, ರಾಜೇಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
Read this:ಎಸ್ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ
No ratings yet





