ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ ಇದೇ ಮಾರ್ಚ್ 11ರಂದು ರಾಜ್ಯದೆಲ್ಲೆಡೆ ನಡೆಯಲಿದ್ದು, ಸ್ಪರ್ಧಾಳು ವಕೀಲರ ಪ್ರಚಾರ ಕಾರ್ಯ ಜೋರಾಗಿದೆ. ವಿವಿಧ ನ್ಯಾಯಾಲಯಗಳ ಆವರಣದಲ್ಲಿ ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದು, ವಕೀಲರ ಬೆಂಬಲ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಬೆಂಗಳೂರು ಸಿವಿಲ್ ಕೋರ್ಟ್, ಹೈಕೋರ್ಟ್, ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಮೆಯೋ ಹಾಲ್ ನ್ಯಾಯಾಲಯಗಳ ಆವರಣದಲ್ಲಿ ವಕೀಲ ಅಭ್ಯರ್ಥಿಗಳು ಪ್ರಚಾರ ನಡೆಸಿ ಮತದಾರರ ಸಂಪರ್ಕ ಸಾಧಿಸುತ್ತಿದ್ದಾರೆ.
ಈ ನಡುವೆ ಹೈಕೋರ್ಟ್‌ನ ಖ್ಯಾತ ವಕೀಲರಾದ ಬಿ.ವಿ. ರಾಮಮೂರ್ತಿ ಅವರು ಕೂಡ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇವರ ಪರವಾಗಿ ಹಲವು ವಕೀಲರು ನ್ಯಾಯಾಲಯಗಳ ಆವರಣದಲ್ಲಿ ಸಕ್ರಿಯವಾಗಿ ಮತಯಾಚನೆ ನಡೆಸುತ್ತಿದ್ದಾರೆ.
ವಕೀಲರ ಕಲ್ಯಾಣಕ್ಕೆ ಹಲವು ಭರವಸೆ
ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವಿ. ರಾಮಮೂರ್ತಿ ಅವರು, ವಕೀಲರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
- ವಕೀಲರು ನಿಧನರಾದರೆ 22 ಲಕ್ಷ ರೂಪಾಯಿವರೆಗೆ ಪರಿಹಾರ ನೀಡುವ ಕ್ರಮ
- ಬಾರ್ ಕೌನ್ಸಿಲ್ ಮೂಲಕ ವಕೀಲರಿಗೆ ನಿವೃತ್ತಿ ವೇತನ ವ್ಯವಸ್ಥೆ
- ಮೂರು ವರ್ಷ ಪ್ರಾಕ್ಟೀಸ್ ಪೂರ್ಣಗೊಳಿಸಿರುವ ಯುವ ವಕೀಲರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಸ್ಟೈಪೆಂಡ್
- ವಕೀಲರಿಗಾಗಿ ಪ್ರತ್ಯೇಕ ಅತಿಥಿ ಗೃಹಗಳ ನಿರ್ಮಾಣ
- ಹೂಡಾ, ಮೂಡಾ, ಬಿಡಿಎ ಸಂಸ್ಥೆಗಳ ಮೂಲಕ ವಕೀಲರಿಗೆ 15 ಶೇಕಡಾ ನಿವೇಶನ ಮೀಸಲು
- ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಫ್ರೀ ಸೌಲಭ್ಯ
- ವಕೀಲರ ಸಂರಕ್ಷಣಾ ಕಾನೂನು ಜಾರಿಗೆ ಕ್ರಮ
ಯೋಗಕ್ಷೇಮ ನಿಧಿಗೆ ಸಹಾಯ
ಇದಲ್ಲದೆ, ಸುಮಾರು ನೂರು ಮಂದಿ ವಕೀಲರಿಗೆ ಸ್ವಂತ ಖರ್ಚಿನಿಂದ ಯೋಗಕ್ಷೇಮ ನಿಧಿ ನೀಡಲಾಗುವುದು ಎಂದು ಅವರು ಹೇಳಿದರು. ವಕೀಲರು ಮರಣ ಹೊಂದಿದಲ್ಲಿ 50 ಸಾವಿರ ರೂಪಾಯಿವರೆಗೆ ತುರ್ತು ಪರಿಹಾರ ನೀಡುವ ವ್ಯವಸ್ಥೆಯನ್ನೂ ರೂಪಿಸಲಾಗುವುದು ಎಂದು ತಿಳಿಸಿದರು.
ವಕೀಲರ ಹಿತಾಸಕ್ತಿಯನ್ನು ಮುಂದಿರಿಸಿಕೊಂಡು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಂಕಲ್ಪದೊಂದಿಗೆ ಪ್ರಚಾರ ನಡೆಸುತ್ತಿರುವ ಬಿ.ವಿ. ರಾಮಮೂರ್ತಿ ಅವರಿಗೆ ವಕೀಲ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.




