ಬೆಂಗಳೂರು ಮತದಾರರ ಪಟ್ಟಿಗೆ ಬೃಹತ್ ಶುದ್ಧೀಕರಣ ಕಾರ್ಯ: ಜೂನ್ 30ರಿಂದ ಮನೆ-ಮನೆಗೆ 8,000ಕ್ಕೂ ಹೆಚ್ಚು ಬಿ.ಎಲ್.ಒಗಳ ಭೇಟಿ
ಬೆಂಗಳೂರು: : ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರುಗಳು ತಪ್ಪದೇ ಸೇರಬೇಕು ಹಾಗೂ ಅನರ್ಹ ಹೆಸರುಗಳು ಉಳಿಯಬಾರದು ಎಂಬ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಕಾರ್ಯಕ್ರಮದ ಸುಗಮ ಅನುಷ್ಠಾನಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚುರುಕುಗೊಂಡಿದ್ದು, ಈಗಾಗಲೇ 72 ಶೇಕಡಾ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜೂನ್ 30ರಿಂದ ಜುಲೈ 29ರವರೆಗೆ ಒಂದು ತಿಂಗಳ ಕಾಲ 8,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒಗಳು) ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಸಂಗ್ರಹಿಸಲಿದ್ದಾರೆ. ಪ್ರತಿ ಕುಟುಂಬಕ್ಕೂ ನಿಗದಿತ ನಮೂನೆಗಳನ್ನು ವಿತರಿಸಿ, ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಿ, ಕರಡು ಮತದಾರರ ಪಟ್ಟಿ ಪ್ರಕಟಿಸುವ ಮುನ್ನ ಮರುಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
“ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಮಹತ್ವದ ಪ್ರಕ್ರಿಯೆಯಲ್ಲಿ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು” ಎಂದು ಮಹೇಶ್ವರ ರಾವ್ ಮನವಿ ಮಾಡಿದರು.
16ರಂದು ಇ-ರೋಲ್ ಫ್ರೀಜ್
ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಜಗದೀಶ್ ಮಾತನಾಡಿ, ವಿಶೇಷ ಸಮಗ್ರ ಪರಿಷ್ಕರಣೆ-2026ರ ಪೂರ್ವಭಾವಿ ಚಟುವಟಿಕೆಯಾಗಿ 2025ರ ಮತದಾರರ ಪಟ್ಟಿಯನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜೂನ್ 16ರಂದು ಇ-ರೋಲ್ ಫ್ರೀಜ್ ಆಗಲಿದ್ದು, ಅದರೊಳಗೆ ಬಾಕಿ ಇರುವ ನಮೂನೆ-6, 6ಎ, 7 ಹಾಗೂ 8 ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರು ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸಲ್ಲಿಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಎಲ್‌ಎಗಳೊಂದಿಗೆ ಸಭೆ
ಮನೆ-ಮನೆ ಸಮೀಕ್ಷೆ ಆರಂಭಿಸುವ ಮೊದಲು ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒಗಳು), ಬಿ.ಎಲ್.ಒಗಳು ಹಾಗೂ ಬೂತ್ ಮಟ್ಟದ ಏಜೆಂಟರ (ಬಿಎಲ್‌ಎಗಳು)ೊಂದಿಗೆ ಸಭೆ ನಡೆಸಿ ಎಸ್‌ಐಆರ್ ವೇಳಾಪಟ್ಟಿ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಜಗದೀಶ್ ತಿಳಿಸಿದರು.
ರಾಜಕೀಯ ಪಕ್ಷಗಳ ಸಕ್ರಿಯ ಪಾಲ್ಗೊಳ್ಳುವಿಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಪ್ರತಿದಿನ ಗರಿಷ್ಠ 50 ಅರ್ಜಿಗಳನ್ನು ಹಾಗೂ ಕರಡು ಪಟ್ಟಿ ಪ್ರಕಟವಾದ ನಂತರ ಗರಿಷ್ಠ 10 ಅರ್ಜಿಗಳನ್ನು ಬಿ.ಎಲ್.ಒಗಳಿಗೆ ಸಲ್ಲಿಸಬಹುದಾಗಿದೆ ಎಂದರು.
ಬೂತ್ ಮಟ್ಟದ ಏಜೆಂಟರ ಪಟ್ಟಿ ಸಲ್ಲಿಸಲು ಮನವಿ
ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬ ಬೂತ್ ಮಟ್ಟದ ಏಜೆಂಟ್‌ರನ್ನು ನೇಮಿಸಿ ಅವರ ಪಟ್ಟಿಯನ್ನು ತಕ್ಷಣ ಸಲ್ಲಿಸುವಂತೆ ಕೋರಲಾಗಿದೆ. ಅಲ್ಲದೆ, ಅರ್ಹ ಮತದಾರರ ನೋಂದಣಿಗೆ ಚುನಾವಣಾ ಸಿಬ್ಬಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಜಾಗೃತಿ ಅಭಿಯಾನಕ್ಕೆ ಚಾಲನೆ
ಎಸ್‌ಐಆರ್ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರದ ಎಲ್ಲ ಪಾಲಿಕೆಗಳಿಗೆ ಐಇಸಿ ಹಾಗೂ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ) ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು. ಆಟೋ ಟಿಪ್ಪರ್‌ಗಳ ಮೂಲಕವೂ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಬೆಂಗಳೂರು ನಗರದಲ್ಲಿ ಮ್ಯಾಪಿಂಗ್ ಪ್ರಗತಿ
• ಬೆಂಗಳೂರು ಜಿಲ್ಲೆ – 78.93%
• ಬೆಂಗಳೂರು ಕೇಂದ್ರ ಜಿಲ್ಲೆ – 67.53%
• ಬೆಂಗಳೂರು ದಕ್ಷಿಣ ಜಿಲ್ಲೆ – 67.93%
• ಬೆಂಗಳೂರು ಉತ್ತರ ಜಿಲ್ಲೆ – 69.23%
ಒಟ್ಟಾರೆ ಮ್ಯಾಪಿಂಗ್ ಪೂರ್ಣಗೊಂಡಿರುವ ಪ್ರಮಾಣ: 72%
ಎಸ್‌ಐಆರ್-2026 ಪ್ರಮುಖ ವೇಳಾಪಟ್ಟಿ
• ಅರ್ಹತಾ ದಿನಾಂಕ – 01.10.2026
• ಸಿದ್ಧತೆ, ತರಬೇತಿ ಮತ್ತು ಮುದ್ರಣ – ಜೂನ್ 20ರಿಂದ 29
• ಮನೆ-ಮನೆ ಸಮೀಕ್ಷೆ – ಜೂನ್ 30ರಿಂದ ಜುಲೈ 29
• ಮತಗಟ್ಟೆಗಳ ಮರುಹೊಂದಾಣಿಕೆ – ಜುಲೈ 29
• ಕರಡು ಮತದಾರರ ಪಟ್ಟಿ ಪ್ರಕಟಣೆ – ಆಗಸ್ಟ್ 5
• ಹಕ್ಕು ಮಂಡನೆ ಮತ್ತು ಆಕ್ಷೇಪಣೆ ಸಲ್ಲಿಕೆ – ಆಗಸ್ಟ್ 5ರಿಂದ ಸೆಪ್ಟೆಂಬರ್ 4
• ವಿಚಾರಣೆ ಮತ್ತು ವಿಲೇವಾರಿ – ಆಗಸ್ಟ್ 5ರಿಂದ ಅಕ್ಟೋಬರ್ 3
• ಅಂತಿಮ ಮತದಾರರ ಪಟ್ಟಿ ಪ್ರಕಟಣೆ – ಅಕ್ಟೋಬರ್ 7
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಸುಷ್ಮಾ ಗೋಡ್ಬೋಲೆ, ಸಹಾಯಕ ಆಯುಕ್ತ ಎಂ. ಶ್ರೀನಿವಾಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.




