ಕೌಟುಂಬಿಕ ಕಲಹ ಹಾಗೂ ಆರೋಗ್ಯ ಸಮಸ್ಯೆ ಹಿನ್ನೆಲೆ ಶಂಕೆ; ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾರುಣ ಘಟನೆ
ಬೆಂಗಳೂರು: ನಗರದಲ್ಲಿ ದಂಪತಿಯ ಆತ್ಮಹತ್ಯೆ ಪ್ರಕರಣವು ಆತಂಕ ಮೂಡಿಸಿದೆ. ಬಾಬು ಚಂದಿರ್ ರೆಡ್ಡಿ ಮತ್ತು ಶಾಜಿಯಾ ಎಂಬ ದಂಪತಿ ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಮೊದಲಿಗೆ ಪತಿ ಬಾಬು ಚಂದಿರ್ ರೆಡ್ಡಿ ತಮ್ಮ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಮೃತದೇಹವನ್ನು ಕಂಡ ಪತ್ನಿ ಶಾಜಿಯಾ, ಆಘಾತದಿಂದ ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರೀತಿಸಿ ಮದುವೆಯಾದ ದಂಪತಿ
ತೆಲಂಗಾಣ ಮೂಲದ ಬಾಬು ಚಂದಿರ್ ರೆಡ್ಡಿ ಮತ್ತು ಶಾಜಿಯಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಮುನ್ನ ಲಿವ್-ಇನ್ ಸಂಬಂಧದಲ್ಲಿದ್ದ ಈ ದಂಪತಿ, ಕಳೆದ ಐದು ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು.
ಮನಸ್ತಾಪ, ಆರೋಗ್ಯ ಸಮಸ್ಯೆ ಹಿನ್ನೆಲೆ
ವೈವಾಹಿಕ ಜೀವನದಲ್ಲಿ ಕೆಲವು ಕಾಲದಿಂದ ಮನಸ್ತಾಪ ಇದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಗೆ, ಪತಿ ಬಾಬು ಚಂದಿರ್ ರೆಡ್ಡಿಗೆ ಆರೋಗ್ಯ ಸಮಸ್ಯೆಯೂ ಇದ್ದುದಾಗಿ ತಿಳಿದುಬಂದಿದೆ.
ತನಿಖೆ ಮುಂದುವರಿಕೆ
ಘಟನೆ ಸಂಬಂಧ ಕೊತ್ತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.




