ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು ರಾಷ್ಟ್ರೀಯ ಜನಗಣತಿ-2027 ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಂದು ತಂಡವಾಗಿ ಸಮನ್ವಯದಿಂದ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಎಂ.ಜಿ. ರಸ್ತೆಯಲ್ಲಿರುವ ಪಿ.ಯು.ಬಿ. ಕಟ್ಟಡದ ಕೆನೋಪಿ ಹಾಲ್‌ನಲ್ಲಿ ಜನಗಣತಿ-2027 ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಚಾರ್ಜ್ ಆಫೀಸರ್ಸ್, ಹೆಚ್ಚುವರಿ ಚಾರ್ಜ್ ಆಫೀಸರ್ಸ್, ಟೆಕ್ನಿಕಲ್ ಅಸಿಸ್ಟಂಟ್‌ಗಳು, ಕಾರ್ಯಪಾಲಕ ಇಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ನಿರೀಕ್ಷಕರು, ಕಂದಾಯ ಪರಿವೀಕ್ಷಕರು, ಗಣಕಯಂತ್ರ ನಿರ್ವಾಹಕರು ಸೇರಿದಂತೆ ಜನಗಣತಿ ಕಾರ್ಯಕ್ಕೆ ನೇಮಿಸಲಾದ ಎಲ್ಲಾ ಸಿಬ್ಬಂದಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ತರಬೇತಿ ಕಾರ್ಯಕ್ಕೆ ಸಜ್ಜು: ಕೇಂದ್ರಗಳಿಗೆ ಅಧಿಕಾರಿಗಳ ನೇಮಕ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ-2027 ಕಾರ್ಯಕ್ಕಾಗಿ ಗಣತಿದಾರರಿಗೆ ತರಬೇತಿ ನೀಡಲು 6 ವಿಧಾನಸಭಾ ಕ್ಷೇತ್ರಗಳಲ್ಲಿ 6 ತರಬೇತಿ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳಲ್ಲಿ ತರಬೇತಿ ಸುಗಮವಾಗಿ ನಡೆಯುವಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ತರಬೇತಿ ಕೇಂದ್ರಕ್ಕೂ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ 10 ಜನ ಉಸ್ತುವಾರಿ ಅಧಿಕಾರಿಗಳ ತಂಡವನ್ನು ರಚಿಸಿ ಆದೇಶಿಸಲಾಗಿದೆ.
6 ತರಬೇತಿ ಕೇಂದ್ರಗಳ ವಿವರ
- ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ:
ಸೆಂಟ್ ಅಲೊಸಿಯಸ್ ಪದವಿ ಪೂರ್ವ ಹಾಗೂ ಪದವಿ ಕಾಲೇಜು, ಆಸ್ಸೆಯ ರಸ್ತೆ, ಕಾಕ್ಸ್ ಟೌನ್, ಬೆಂಗಳೂರು-55 - ಶಿವಾಜಿನಗರ ಕ್ಷೇತ್ರದಲ್ಲಿ:
ಎಸ್.ಕೆ.ಇ.ಐ. ಶ್ರೀಮತಿ ಕಮಲಾಬಾಯಿ ಎಜುಕೇಷನಲ್ ಇನ್ಸಿಟ್ಯೂಷನ್, ಎಡ್ವರ್ಡ್ ರಸ್ತೆ ಎದುರುಗಡೆ, ಕ್ವೀನ್ಸ್ ರಸ್ತೆ, ವಸಂತನಗರ, ಬೆಂಗಳೂರು-560002 - ಶಾಂತಿನಗರ ಕ್ಷೇತ್ರದಲ್ಲಿ:
ಬಾಲ್ಡ್ ವಿನ್ ಬಾಯ್ಸ್ ಹೈಸ್ಕೂಲ್ (ಬ್ಯಾಕ್ ಗೇಟ್), ಶಾಂತಿನಗರ, ಬೆಂಗಳೂರು-560025 - ಗಾಂಧಿನಗರ ಕ್ಷೇತ್ರದಲ್ಲಿ:
ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು-560020 - ಚಾಮರಾಜಪೇಟೆ ಕ್ಷೇತ್ರದಲ್ಲಿ:
ಆದರ್ಶ ವಿದ್ಯಾ ಸಂಘ, 5ನೇ ಮುಖ್ಯ ರಸ್ತೆ, ದೇವನಾಥಾಚಾರ್ ಬೀದಿ, ಚಾಮರಾಜಪೇಟೆ, ಬೆಂಗಳೂರು-560018 - ಚಿಕ್ಕಪೇಟೆ ಕ್ಷೇತ್ರದಲ್ಲಿ:
ದಿ ಪ್ರಿನ್ಸಿಪಾಲ್ / ಅಡ್ಮಿನಿಸ್ಟ್ರೇಟಿವ್ ಕಮ್ಯೂನಿಟಿ ಸೆಂಟರ್ ಎಜುಕೇಷನ್ ಇನ್ಸಿಟಿಟ್ಯೂಷನ್, ಜಯನಗರ, 2ನೇ ಬ್ಲಾಕ್, ಬೆಂಗಳೂರು-560011
ಜನಗಣತಿ ಕಾರ್ಯಕ್ಕೆ ಗೈರಾಗುವವರಿಗೆ ಕಠಿಣ ಕ್ರಮ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027ರ ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಏಪ್ರಿಲ್ 16, 2026 ರಿಂದ ಮೇ 15, 2026ರವರೆಗೆ ನಡೆಯಲಿದೆ. ಈ ಕಾರ್ಯಕ್ಕೆ ಗಣತಿದಾರರು ಮತ್ತು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ಜನಗಣತಿ ಸಿಬ್ಬಂದಿಗೆ ಏಪ್ರಿಲ್ 06, 2026 ರಿಂದ ಏಪ್ರಿಲ್ 08, 2026ರವರೆಗೆ ಒಟ್ಟು 6 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ತರಬೇತಿ ಸ್ಥಳ ಮತ್ತು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ತರಬೇತಿಗೆ ಹಾಜರಾಗುವುದು ಕಡ್ಡಾಯವಾಗಿದ್ದು, ಗೈರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಕ್ರಮಗಳು ಹೀಗಿವೆ:
- ಜನಗಣತಿ ಕಾಯ್ದೆ, 1948ರ ಸೆಕ್ಷನ್ 11 ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು
- ಆದೇಶ ಉಲ್ಲಂಘನೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023ರ ಕಲಂ 223 ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (FIR) ದಾಖಲಿಸಲಾಗುವುದು
- ದುರ್ನಡತೆ ಮತ್ತು ಅವಿಧೇಯತೆಗಾಗಿ ಅಮಾನತ್ತು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು
- ಅನಧಿಕೃತ ಗೈರುಹಾಜರಿಯನ್ನು Dies-non (ಕೆಲಸ ಮಾಡದ ದಿನ) ಎಂದು ಪರಿಗಣಿಸಲಾಗುವುದು
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತ ಕೆ. ರಂಗನಾಥ್, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.




