ಬೆಂಗಳೂರು: ಬಸವ ವೇದಿಕೆ(ರಿ) ವತಿಯಿಂದ ಏಪ್ರಿಲ್ 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ‘ಬಸವ ಜಯಂತಿ’ ಹಾಗೂ ಪ್ರತಿಷ್ಠಿತ ‘ಬಸವಶ್ರೀ’ ಮತ್ತು ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬಸವ ವೇದಿಕೆಯ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಐಎಎಸ್ (ನಿ) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ವೇದಿಕೆ ಸಂಸ್ಥೆ ಕಳೆದ 35 ವರ್ಷಗಳಿಂದ ಜಗಜ್ಯೋತಿ ಬಸವಣ್ಣ ಹಾಗೂ ಶರಣರ ತತ್ವ-ಸಿದ್ಧಾಂತಗಳನ್ನು ದೇಶದಾದ್ಯಂತ ಯಶಸ್ವಿಯಾಗಿ ಪ್ರಸಾರ ಮಾಡುತ್ತಾ ಬಂದಿದೆ ಎಂದು ಹೇಳಿದರು. ಪ್ರತಿವರ್ಷವೂ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ, ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಗಣ್ಯರಿಗೆ ‘ಬಸವಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ ರಾಜ್ಯಮಟ್ಟದಲ್ಲಿ ಅತ್ಯಂತ ಪ್ರತಿಷ್ಠಿತ ಸ್ಥಾನಮಾನ ಹೊಂದಿದೆ ಎಂದರು.
ಈವರೆಗೆ ಡಾ. ಬಿ.ಡಿ. ಜತ್ತಿ, ಎಸ್. ನಿಜಲಿಂಗಪ್ಪ, ಎಂ.ಸಿ. ಮೋದಿ, ಕೆ.ಎಂ. ನಂಜಪ್ಪ, ದೇ. ಜವರೇಗೌಡ, ಹೆಚ್. ನರಸಿಂಹಯ್ಯ, ಚಂದ್ರಶೇಖರ ಕಂಬಾರ, ಡಿ.ಎಂ. ನಂಜುಂಡಪ್ಪ, ಪಾಟೀಲ ಪುಟ್ಟಪ್ಪ, ವಿ.ಎಸ್. ಮಳೀಮಠ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಿ.ಎಸ್. ಶಿವರುದ್ರಪ್ಪ, ಸುಧಾ ಮೂರ್ತಿ, ವೀರೇಂದ್ರ ಹೆಗ್ಗಡೆ, ಏಣಗಿ ಬಾಳಪ್ಪ, ಚನ್ನವೀರ ಕಣವಿ, ಕಲ್ಬುರ್ಗಿ, ಸಿ.ಎನ್.ಆರ್. ರಾವ್, ವಿಜಯ ಸಂಕೇಶ್ವರ, ರವೀಶಂಕರ್ ಗುರೂಜಿ, ಪ್ರಭಾಕರ ಕೋರೆ, ಎ.ಎಸ್. ಕಿರಣ್ ಕುಮಾರ್, ಹೆಚ್.ಆರ್. ನಾಗೇಂದ್ರ, ಜಿ.ಎಸ್. ಜಯದೇವ್ ಸೇರಿದಂತೆ ಹಲವಾರು ಗಣ್ಯರಿಗೆ ‘ಬಸವಶ್ರೀ’ ಹಾಗೂ ಶರಣ ಸಾಹಿತ್ಯ ಸಾಧಕರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ ಎಂದು ವಿವರಿಸಿದರು.
ಈ ವರ್ಷದ ಸಮಾರಂಭವು ಏಪ್ರಿಲ್ 27ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಎಸ್. ಬೊಮ್ಮಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ‘ಬಸವಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಬಸವಜ್ಯೋತಿ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಈ ವರ್ಷದ ‘ಬಸವಶ್ರೀ’ ಪ್ರಶಸ್ತಿಯನ್ನು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರಿಗೆ ಹಾಗೂ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಡಾ. ಸೋಮಶೇಖರ ತಿಳಿಸಿದರು.
ಸಮಾರಂಭದ ಅಂಗವಾಗಿ ಸಂಜೆ 4.30ಕ್ಕೆ ಪ್ರಖ್ಯಾತ ಗಾಯಕಿ ಪಾವನಿ ಅವರಿಂದ ವಚನ ಗಾಯನ ಕಾರ್ಯಕ್ರಮವೂ ಏರ್ಪಡಿಸಲಾಗಿದೆ. ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ನಿರೂಪಕಿ ದಿವ್ಯಾ ಆಲೂರು ರವರು ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೊಶಾಧ್ಯಕ್ಷರಾದ ಎಂ. ರುದ್ರಯ್ಯ, ಕಾರ್ಯದರ್ಶಿಗಳಾದ ನಾ. ಮಲ್ಲಿಕಾರ್ಜುನ, ಎಂ.ಡಿ. ಮಹಾಬಲೇಶ್ವರ. ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ವಿಜಯಕುಮಾರ್, ಚಂದ್ರಮೌಳಿ, ಎಂ.ಸಿದ್ದಲಿಂಗಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.




