ಬೆಂಗಳೂರು: 2026ನೇ ಸಾಲಿನ ಪ್ರತಿಷ್ಠಿತ ವಿ.ಪಿ.ಸಿಂಗ್ ಹಾಗೂ ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘ ಪ್ರಕಟಿಸಿದೆ. ಸಮಾಜ ಸೇವೆ, ಆರೋಗ್ಯ, ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಗಣ್ಯರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಈ ಬಾರಿ ಒಟ್ಟು 7 ಮಂದಿ ವಿ.ಪಿ.ಸಿಂಗ್ ಪ್ರಶಸ್ತಿಗೆ ಹಾಗೂ 7 ಮಂದಿ ಕರ್ಪೂರಿ ಠಾಕೂರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿ.ಪಿ.ಸಿಂಗ್ ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ದಿನೇಶ್, ಸ್ಪರ್ಶ ಆಸ್ಪತ್ರೆಯ ತಜ್ಞ ವೈದ್ಯ ಡಾ. ನಾಗೇಶ್ ಬಸವರಾಜ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಶಶಿಭೂಷಣ್, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಹಿರಿಯ ಪತ್ರಕರ್ತರಾದ ರಾಜು ಕಂಬಾರ, ಕೆ.ಎಸ್. ಸೋಮಣ್ಣ ಹಾಗೂ ಸಮಾಜಸೇವಕ ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದಾರೆ.
ಇದೇ ವೇಳೆ, ಕರ್ಪೂರಿ ಠಾಕೂರ್ ಪ್ರಶಸ್ತಿಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಸಿದ್ದರಾಜು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಕೆ. ರವಿ, ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆ, ಗಂಗಾಧರ ಮೊದಲಿಯಾರ್, ಐ.ಎಚ್. ಸಂಗಮದೇವ ಹಾಗೂ ರವಿ ಬಿದನೂರ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ದೇವಮ್ಮ ಪ್ರಶಸ್ತಿಗೆ ಪತ್ರಕರ್ತೆ ಮಿನಿ ತೇಜಸ್ವಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




