ವಿಶಾಖಪಟ್ಟಣ: ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಿಂದ ತುರ್ತುವಾಗಿ ವಿಶಾಖಪಟ್ಟಣಕ್ಕೆ ಪ್ರಯಾಣ ಬೆಳೆಸಿದರು.
ಘಟನೆಯ ಮಾಹಿತಿ ಪಡೆದ ಕೂಡಲೇ ರಾತ್ರಿ ವೇಳೆ ವೈಜಾಗ್‌ಗೆ ತೆರಳಿದ ಸಚಿವರು, ರಾತ್ರಿ ಸುಮಾರು 10:30 ಗಂಟೆಗೆ ವಿಶಾಖಪಟ್ಟಣ ತಲುಪಿದರು. ಬಳಿಕ ನೇರವಾಗಿ ವೈಜಾಗ್ ಸ್ಟೀಲ್ ಸ್ಥಾವರಕ್ಕೆ ಭೇಟಿ ನೀಡಿ ಅವಘಡ ನಡೆದ ಸ್ಥಳವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ ಮೋಹನ್ ನಾಯ್ಡು ಹಾಗೂ ಸಂಸದ ಶ್ರೀಭರತ್ ಅವರು ಸಚಿವ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು. ಘಟನಾ ಸ್ಥಳವನ್ನು ವಿಸ್ತೃತವಾಗಿ ವೀಕ್ಷಿಸಿದ ಸಚಿವರು, ಅಧಿಕಾರಿಗಳಿಂದ ಅವಘಡದ ಕುರಿತು ಸಂಪೂರ್ಣ ಮಾಹಿತಿ ಪಡೆದರು.
ಕಾರ್ಮಿಕರ ದುರ್ಮರಣದ ಬಗ್ಗೆ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಘಟನೆಗೆ ಕಾರಣವಾದ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.




