Full site
Recruitment

ಭಾರತೀಯ ಸೇನೆ ಸೇರುವ ಅವಕಾಶ: ಅ.31ರಿಂದ ಚಿತ್ರದುರ್ಗದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ

14 ಜಿಲ್ಲೆಗಳ 957 ಅಭ್ಯರ್ಥಿಗಳು ಭಾಗಿ; ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ಹಾಗೂ ಮೂಲ ದಾಖಲೆಗಳ ಪರಿಶೀಲನೆ

By Anukshana News Desk2 min read

ಚಿತ್ರದುರ್ಗ: ಭಾರತೀಯ ಸೇನೆ ಸೇರಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವ ಕನಸು ಕಾಣುತ್ತಿರುವ ಯುವಕರಿಗೆ ಮಹತ್ವದ ಅವಕಾಶ ಒದಗಿದ್ದು, ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 3ರವರೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ ನಡೆಯಲಿದೆ.

ಅಗ್ನಿವೀರ್ ಸಾಮಾನ್ಯ ಕರ್ತವ್ಯ (General Duty), ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗಗಳ ನೇಮಕಾತಿಗಾಗಿ ರ‍್ಯಾಲಿ ಆಯೋಜಿಸಲಾಗಿದ್ದು, ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳು ಹಾಗೂ ಸೂಚನೆಗಳ ಕುರಿತು ನೇಮಕಾತಿ ರ‍್ಯಾಲಿಯ ಹೊಣೆ ಹೊತ್ತಿರುವ ಕರ್ನಲ್ ಪುಷ್ಪರಾಜ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು, ವಿಜಯನಗರ ಹಾಗೂ ಚಿತ್ರದುರ್ಗ ಸೇರಿದಂತೆ 14 ಜಿಲ್ಲೆಗಳ ಒಟ್ಟು 957 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 31ರಂದು 543 ಅಭ್ಯರ್ಥಿಗಳು ಹಾಗೂ ನವೆಂಬರ್ 1ರಂದು 414 ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಮೂಲ ದಾಖಲೆಗಳ ಪರಿಶೀಲನೆಗೆ ಒಳಗಾಗಲಿದ್ದಾರೆ.

ಪ್ರವೇಶ ಪತ್ರದಲ್ಲಿರುವ ಸಮಯಕ್ಕೆ ಹಾಜರಾಗಿ

ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ (Admit Card) ನಮೂದಿಸಿರುವ ದಿನಾಂಕ ಮತ್ತು ಸಮಯಕ್ಕೆ ಅನುಗುಣವಾಗಿ ಒನಕೆ ಓಬವ್ವ ಕ್ರೀಡಾಂಗಣದಲ್ಲಿರುವ ಮಾರ್ಷಲಿಂಗ್ ಪ್ರದೇಶಕ್ಕೆ ಕಡ್ಡಾಯವಾಗಿ ವರದಿ ಮಾಡಿಕೊಳ್ಳಬೇಕು.

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಎಲ್ಲ ಮೂಲ ದಾಖಲೆಗಳು ಹಾಗೂ ಅವುಗಳ ಜೆರಾಕ್ಸ್ ಪ್ರತಿಗಳನ್ನು ಅಭ್ಯರ್ಥಿಗಳು ತರಬೇಕು. ಅಗತ್ಯ ದಾಖಲೆಗಳನ್ನು ತರದಿದ್ದಲ್ಲಿ ಅಥವಾ ತಪ್ಪು ದಾಖಲೆಗಳನ್ನು ಸಲ್ಲಿಸಿದಲ್ಲಿ ಅಭ್ಯರ್ಥಿಯ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸೇನೆ ತಿಳಿಸಿದೆ.

ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗಬೇಡಿ

ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆ ಮಾಡಿಸಿಕೊಡುವುದಾಗಿ ಹೇಳಿ ಹಣ ಕೇಳುವ ಮಧ್ಯವರ್ತಿಗಳು ಅಥವಾ ಏಜೆಂಟರ ಮಾತಿಗೆ ಅಭ್ಯರ್ಥಿಗಳು ಮರುಳಾಗಬಾರದು. ಯಾವುದೇ ವ್ಯಕ್ತಿಗೆ ಹಣ ನೀಡಬಾರದು. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಅಭ್ಯರ್ಥಿಯ ಅರ್ಹತೆ ಮತ್ತು ಪಾರದರ್ಶಕ ನೇಮಕಾತಿ ವಿಧಾನವನ್ನು ಆಧರಿಸಿರುತ್ತದೆ ಎಂದು ಕರ್ನಲ್ ಪುಷ್ಪರಾಜ್ ಸ್ಪಷ್ಟಪಡಿಸಿದ್ದಾರೆ.

ಮಾದಕ ವಸ್ತುಗಳಿಗೆ ಕಟ್ಟುನಿಟ್ಟಿನ ನಿಷೇಧ

ನೇಮಕಾತಿ ಸ್ಥಳದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ನಶೆ ಉಂಟುಮಾಡುವ ವಸ್ತುಗಳ ಸೇವನೆ ಹಾಗೂ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಅಭ್ಯರ್ಥಿಗಳಿಗೆ ಡ್ರಗ್ ಸೇವನೆ ಪತ್ತೆ ಪರೀಕ್ಷೆಯನ್ನೂ ಸ್ಥಳದಲ್ಲಿಯೇ ನಡೆಸಲಾಗುತ್ತದೆ.

ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗುವುದರೊಂದಿಗೆ ನೇಮಕಾತಿ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು. ದೈಹಿಕ ಪರೀಕ್ಷೆಗೆ ಅನುಕೂಲವಾಗುವ ಸೂಕ್ತ ಕ್ರೀಡಾ ಉಡುಪು ಹಾಗೂ ಪಾದರಕ್ಷೆಗಳನ್ನು ಧರಿಸಿ ಬರಬೇಕು ಎಂದು ಸೂಚಿಸಲಾಗಿದೆ.

ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಭಾರತೀಯ ಸೇನೆಯ joinindianarmy.nic.in ವೆಬ್‌ಸೈಟ್‌ ಅನ್ನು ಪರಿಶೀಲಿಸುವಂತೆ ಹಾಗೂ “INDIAN ARMY RECRUITMENT INFO @ KARNATAKA” ವಾಟ್ಸಾಪ್ ಚಾನೆಲ್ ಅನ್ನು ಅನುಸರಿಸುವಂತೆ ಕರ್ನಲ್ ಪುಷ್ಪರಾಜ್ ತಿಳಿಸಿದ್ದಾರೆ.

Read the full story on Anukshana