ಬೆಂಗಳೂರು, ಏಪ್ರಿಲ್ 22: ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಧ್ರುವ ಸರ್ಜಾ ಅಭಿನಯದ ‘ಕೆಡಿ’ (KD The Devil) ಚಿತ್ರದ ಟ್ರೇಲರ್ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಏಪ್ರಿಲ್ 30ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಸಿನಿಮಾದ ಟ್ರೇಲರ್‌ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆದಿವೆ. ಧ್ರುವ ಸರ್ಜಾ ಜೊತೆಗೆ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್‌ಗೆ ಹೆಚ್ಚಿನ ಮೆರುಗು ತಂದಿದ್ದಾರೆ.
ನಗರದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಟ್ರೇಲರ್ ಅನಾವರಣಗೊಂಡಿದ್ದು, ಚಿತ್ರಕ್ಕೆ ಭಾರೀ ತಾರಾಗಣವೇ ಬಲವಾಗಿದೆ. ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಪಿ. ರವಿಶಂಕರ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.
ಬಿಡುಗಡೆಗೂ ಮುನ್ನವೇ ‘ಕೆಡಿ’ ಸಿನಿಮಾ ಹಲವು ಕಾರಣಗಳಿಂದ ಚರ್ಚೆಗೆ ಗ್ರಾಸವಾಗಿದೆ. ‘ಸರ್ಸೆ ನಿನ್ನ ಸೆರಗ’ ಹಾಡು ದೇಶಾದ್ಯಂತ ಜನಪ್ರಿಯವಾಗಿದ್ದು, ಚಿತ್ರದ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಕುರಿತಾಗಿ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿದ್ದೂ ಸುದ್ದಿಯಲ್ಲಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
‘ಆನಂದ್ ಆಡಿಯೋ’ ಮೂಲಕ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ರೆಟ್ರೋ ಕಾಲಘಟ್ಟದ ಕಥೆಯನ್ನು ಹೇಳಲಾಗಿದೆ ಎಂಬುದು ಟ್ರೇಲರ್‌ನಿಂದ ಸ್ಪಷ್ಟವಾಗಿದೆ. ಆ ಕಾಲಘಟ್ಟವನ್ನು ಪ್ರತಿಬಿಂಬಿಸುವಂತೆ ಅದ್ದೂರಿ ಸೆಟ್‌ಗಳನ್ನು ನಿರ್ಮಿಸಿ, ವಿಶಾಲ ಪ್ರಮಾಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ದೃಶ್ಯ ವೈಭವದ ಜೊತೆಗೆ ಆ್ಯಕ್ಷನ್‌ಗೂ ಹೆಚ್ಚಿನ ಒತ್ತು ನೀಡಲಾಗಿದೆ.
ವೆಂಕಟ್ ಕೆ. ನಾರಾಯಣ್ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಿನಿಮಾದ ಮೇಲೆ ಹೈಪ್ ಹೆಚ್ಚಿಸಿವೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿವೆ.
ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಧ್ರುವ ಸರ್ಜಾ, “ನಮಗೆ 2 ಗಂಟೆ 20 ನಿಮಿಷ ಸಮಯ ಕೊಡಿ. ಇದು ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾ, ಆದರೆ ಸ್ವಲ್ಪ ಕ್ರೌರ್ಯವೂ ಇದೆ. ಏಪ್ರಿಲ್ 30ರಂದು ನಿಮ್ಮನ್ನು ನಂಬಿಕೊಂಡೇ ಬರುತ್ತಿದ್ದೇವೆ. ಈ ಚಿತ್ರದ ನಿಜವಾದ ಹೀರೋ ನಾನು ಅಲ್ಲ, ನಮ್ಮ ನಿರ್ದೇಶಕರು. ಅವರು ಹಾಕಿದ ಶ್ರಮವನ್ನು ಸಿನಿಮಾ ನೋಡಿದಾಗ ನೀವು ಅರಿಯುತ್ತೀರಿ” ಎಂದು ಹೇಳಿದರು.




