ಪ್ರಶ್ನೆ: ಪ್ರತಿವರ್ಷವೂ ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯುತ್ತೀರಾ. ಈ ದಿನ ನಿಮಗೆ ಎಷ್ಟು ವಿಶೇಷ?
ರಾಧಿಕಾ ಪಂಡಿತ್:
ತುಂಬಾ ಖುಷಿಯಾಗುತ್ತದೆ. ನನ್ನ ಮೇಲೆ ಇಷ್ಟು ಪ್ರೀತಿ ಇಟ್ಟು, ವಿಶ್ವಾಸ ಇಟ್ಟು ಕರ್ನಾಟಕದ ನಾನಾ ಭಾಗಗಳಿಂದ ಜನ ಬಂದು ನನ್ನನ್ನು ಭೇಟಿ ಮಾಡುತ್ತಾರೆ. ನನ್ನ ಜೊತೆ ಮಾತನಾಡಬೇಕು, ನನ್ನನ್ನು ನೋಡಬೇಕು ಎಂಬ ಆಸೆಯಿಂದ ಬರುತ್ತಾರೆ. ಇದು ನನಗೆ ದೊರೆತ ದೊಡ್ಡ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ.
ಪ್ರಶ್ನೆ: ಅಭಿಮಾನಿಗಳು ಕೊಡುವ ಗಿಫ್ಟ್‌ಗಳನ್ನು ನೀವು ಯಾವಾಗಲೂ ಖುಷಿಯಿಂದ ಸ್ವೀಕರಿಸುತ್ತೀರಿ. ನಿಮಗೆ ಗಿಫ್ಟ್ ಎಂದರೆ ಏನು?
ರಾಧಿಕಾ ಪಂಡಿತ್:
ಗಿಫ್ಟ್ ಅಂದ್ರೆ ಚಿಕ್ಕದು–ದೊಡ್ಡದು ಎಂಬುದೇ ಇಲ್ಲ. ಅಭಿಮಾನಿಗಳು ಇಲ್ಲಿ ಬಂದು ನನ್ನನ್ನು ಭೇಟಿ ಮಾಡೋದೇ ನನಗೆ ದೊಡ್ಡ ಗಿಫ್ಟ್. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸವೇ ನಿಜವಾದ ಗಿಫ್ಟ್. ಅದನ್ನ ನಾನು ಆಶೀರ್ವಾದ ಎಂದು ನೋಡುತ್ತೇನೆ.
ಪ್ರಶ್ನೆ: ಈ ಬಾರಿ ಯಶ್ ಅವರಿಂದ ಯಾವುದಾದರೂ ವಿಶೇಷ ಗಿಫ್ಟ್ ಬಂದಿದೆಯೇ?
ರಾಧಿಕಾ ಪಂಡಿತ್:
ನಾವು ಸಾಮಾನ್ಯವಾಗಿ ಮೆಟೀರಿಯಲ್ ಗಿಫ್ಟ್‌ಗಳನ್ನು ಕೊಡೋದಿಲ್ಲ. ನಮಗೆ ಸಮಯ ಕೊಡುವುದು, ಪ್ರೀತಿ ತೋರಿಸುವುದು, ಈ ಸಣ್ಣ ಸಣ್ಣ ವಿಚಾರಗಳೇ ಹೆಚ್ಚು ಮುಖ್ಯ.
ಪ್ರಶ್ನೆ: ಯಶ್ ಅವರು ಕೊಟ್ಟ ಮೊದಲ ಗಿಫ್ಟ್ ಯಾವುದು?
ರಾಧಿಕಾ ಪಂಡಿತ್:
ಒಮ್ಮೆ ನಾನು ಒಂದು ಸಂದರ್ಶನದಲ್ಲೂ ಹೇಳಿದ್ದೆ. ಅವರು ನನಗೆ ಕೊತ್ತಂಬರಿ ಸೊಪ್ಪಿನ ಕಟ್ಟು ಕೊಟ್ಟಿದ್ದರು. ಎಲ್ಲರೂ ಹೂವು ಕೊಡ್ತಾರೆ ಅಲ್ವಾ, ಅದಕ್ಕೆ ವಿಭಿನ್ನವಾಗಿ ಕೊಡಬೇಕು ಎಂದು ಕೊತ್ತಂಬರಿ ಸೊಪ್ಪು ಕೊಟ್ಟಿದ್ದರು. ಅದು ನನಗೆ ಇಂದಿಗೂ ನೆನಪಾಗುವ ವಿಶೇಷ ಗಿಫ್ಟ್.
ಪ್ರಶ್ನೆ: ನಿಮ್ಮ ವ್ಯಕ್ತಿತ್ವ ಮತ್ತು ಜೀವನ ಶೈಲಿ ಅಭಿಮಾನಿಗಳಿಗೆ ಸ್ಪೂರ್ತಿ ಎಂದು ಹೇಳುತ್ತಾರೆ. ಅದನ್ನು ಹೇಗೆ ನೋಡುತ್ತೀರಿ?
ರಾಧಿಕಾ ಪಂಡಿತ್:
ಅದು ನನಗೆ ಸಿಕ್ಕ ದೊಡ್ಡ ಕಾಂಪ್ಲಿಮೆಂಟ್. ನನ್ನ ನಟನೆ ಇಷ್ಟ ಎಂದು ಹೇಳುವುದಕ್ಕಿಂತ “ನೀವು ನಮಗೆ ಸ್ಪೂರ್ತಿ” ಎಂದು ಹೇಳಿದಾಗ ತುಂಬಾ ಸಂತೋಷವಾಗುತ್ತದೆ. ಅದು ಹೆಮ್ಮೆಯ ಸಂಗತಿ.
ಪ್ರಶ್ನೆ: ಮತ್ತೆ ಸಿನಿಮಾಗಳಲ್ಲಿ ನಿಮ್ಮನ್ನು ನೋಡಬಹುದೇ?
ರಾಧಿಕಾ ಪಂಡಿತ್:
ಈಗ ಅದ ಬಗ್ಗೆ ನಾನು ವಿಶೇಷವಾಗಿ ಯೋಚನೆ ಮಾಡುತ್ತಿಲ್ಲ. ಒಳ್ಳೆಯ ವಿಷಯ ಬಂದರೆ ನೋಡೋಣ. ಆದರೆ ಅಭಿಮಾನಿಗಳು ಯಾವಾಗ ಮತ್ತೆ ಸಿನಿಮಾಗೆ ಬರ್ತೀರಾ ಎಂದು ಕೇಳುವುದೇ ನನಗೆ ಸಂತೋಷ ಕೊಡುತ್ತದೆ.
ಪ್ರಶ್ನೆ: ಯಶ್ ಅವರ ಅಭಿಮಾನಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಾಧಿಕಾ ಪಂಡಿತ್:
ಅದು ನಮ್ಮ ಪುಣ್ಯ. ಎಲ್ಲರಿಗೂ ಅಂಥ ಪ್ರೀತಿ ಸಿಗೋದಿಲ್ಲ. ನನಗೆ ಅದು ಒಂದು ದೊಡ್ಡ ಆಶೀರ್ವಾದ.
ಪ್ರಶ್ನೆ: ಕನ್ನಡ ಚಿತ್ರರಂಗದ ಬಗ್ಗೆ ನಿಮ್ಮ ಭಾವನೆ ಏನು?
ರಾಧಿಕಾ ಪಂಡಿತ್:
ಕನ್ನಡ ಚಿತ್ರರಂಗವೇ ನನ್ನ ಮನೆ. ನಾನು ಇಲ್ಲಿ ಆರಂಭಿಸಿದ್ದೇನೆ, ನನ್ನ ಸಿನಿಮಾಗಳು ಇಲ್ಲಿಂದಲೇ ಬಂದಿವೆ. ಅದನ್ನು ನಾನು ಎಂದಿಗೂ ಮರೆಯಲಾರೆ.




