ಬೆಂಗಳೂರು: ಹೊಸ ತಲೆಮಾರದ ಪ್ರೇಕ್ಷಕರಿಗೆ ವಿಭಿನ್ನ ಕಥಾಹಂದರ ನೀಡುವ ಉದ್ದೇಶದೊಂದಿಗೆ ತಯಾರಾಗಿರುವ ‘ಲೂಪ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.
ಕಾಲ ಬದಲಾಗುತ್ತಿದ್ದಂತೆ ಆಟ ಆಡುವ ವಿಧಾನ ಬದಲಾಗಬಹುದು, ಆದರೆ ಆಟಗಾರನ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂಬ ಅರ್ಥಪೂರ್ಣ ಸಂದೇಶವನ್ನು ಚಿತ್ರದ ಟ್ರೈಲರ್ ಹೊತ್ತು ತಂದಿದೆ. ಲವ್ ಹಾಗೂ ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ, ಒಂದು ಆಟದ ಸುತ್ತ ತಿರುಗುತ್ತಾ ಪ್ರೇಕ್ಷಕರಿಗೆ ರೋಚಕ ಅನುಭವ ನೀಡುವ ಭರವಸೆ ನೀಡುತ್ತಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್ ಭಾಗದಲ್ಲಿ ಹೊಸ ತಿರುವುಗಳು ಇರಲಿವೆ ಎಂಬ ಸೂಚನೆಯನ್ನು ಟ್ರೈಲರ್ ನೀಡಿದೆ.
‘ಸ್ಟಾಪ್ ಬೆಟ್ಟಿಂಗ್ಸ್’ (Stop Betting) ಮತ್ತು ‘ನೋ ಡ್ರಗ್ಸ್’ (No Drugs) ಎಂಬ ಸಾಮಾಜಿಕ ಸಂದೇಶಗಳನ್ನು ಚಿತ್ರದಲ್ಲಿ ಒಳಗೊಂಡಿರುವುದು ಗಮನಾರ್ಹವಾಗಿದೆ.
ಬೆಂಗಳೂರು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಪ್ರಥಮ್ ಭಾಗವಹಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಚಿತ್ರಕ್ಕೆ ಯಶವಂತ್ ನಿರ್ದೇಶನ ನೀಡಿದ್ದು, ಎಸ್.ಕೆ. ಎಲ್ಲಪ್ಪ ಹಾಗೂ ಯುವಿ ಪ್ರಮೋಷನ್ಸ್‌ನ ಉಮೇಶ್ ಕೆ.ಎನ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಶಶಿಕಿರಣ್ ಹಾಗೂ ಶೋಭಿತ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಮಿಮಿಕ್ರಿ ಗೋಪಿ, ಅಪ್ಪುರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್ ಮತ್ತು ಜೀವನ್ ಗೌಡ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಜೀವನ್ ಗೌಡ ನಿರ್ವಹಿಸಿದ್ದು, ಸಂಗೀತವನ್ನು ಸಂತೋಷ್ ಜೋಶ್ವ ಒದಗಿಸಿದ್ದಾರೆ. ಸಂಕಲನವನ್ನು ಅನಿಲ್ ಆಚಾರ್ ಕೈಗೊಂಡಿದ್ದು, ಚಿತ್ರಕ್ಕೆ ಇನ್ನಷ್ಟು ವೇಗ ಮತ್ತು ರೋಚಕತೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರಚಾರ ಕಾರ್ಯಗಳನ್ನು ಶ್ರೀಧರ್ ನೋಡಿಕೊಳ್ಳುತ್ತಿದ್ದು, ‘ಲೂಪ್’ ಚಿತ್ರದ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.




