ವಕೀಲರ ಜೀವಕ್ಕೆ ಕಾನೂನು ಕವಚ ಯಾವಾಗ? ಸರ್ಕಾರಕ್ಕೆ ನಾಲ್ಕು ಬೇಡಿಕೆಗಳ ಅಸ್ತ್ರ
ವಕೀಲರ ಮೇಲೆ ಕೈ ಮಾಡಿದರೆ 10 ವರ್ಷ ಜೈಲು! ರಕ್ಷಣಾ ಕಾಯ್ದೆ ತಿದ್ದುಪಡಿಗೆ ಆಗ್ರಹ | ವಕೀಲರ ಮೇಲಿನ ದಾಳಿ ಖಂಡಿಸಿ ರಾಜ್ಯಾದ್ಯಂತ ನ್ಯಾಯಾಲಯ ಕಲಾಪ ಬಹಿಷ್ಕಾರ; ರಕ್ಷಣಾ ಕಾಯ್ದೆ ಬಲಪಡಿಸಲು ಆಗ್ರಹ
4min read
ಬೆಂಗಳೂರು: ನ್ಯಾಯಕ್ಕಾಗಿ ಹೋರಾಡುವ ವಕೀಲರಿಗೇ ಜೀವದ ಭದ್ರತೆ ಇಲ್ಲದಂತಾಗಿರುವ ಘಟನೆಗಳನ್ನು ಖಂಡಿಸಿ, ವಕೀಲರ ವೃತ್ತಿಪರ ಸುರಕ್ಷತೆ ಮತ್ತು ಜೀವ ರಕ್ಷಣೆಗೆ ಬಲವಾದ ಕಾನೂನು ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯಾದ್ಯಂತ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ವೈಟ್ಫೀಲ್ಡ್ನಲ್ಲಿ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದಲ್ಲಿ ವಕೀಲ ಶ್ರೀರಾಮ್ ಅವರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲೆ ನಡೆದ ಕೊಲೆ ಯತ್ನದ ಘಟನೆಗಳು ವಕೀಲ ಸಮುದಾಯದಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ. ವಕೀಲರ ಮೇಲಿನ ಹಲ್ಲೆ, ಬೆದರಿಕೆ ಮತ್ತು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಕೀಲರ ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿತ್ತು.
ಬೆಂಗಳೂರು ವಕೀಲರ ಸಂಘದ (Advocates' Association, Bengaluru) ಕರೆಯ ಮೇರೆಗೆ ನಡೆದ ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳ ವಕೀಲರ ಸಂಘಗಳು ಬೆಂಬಲ ವ್ಯಕ್ತಪಡಿಸಿದವು. ಅಕ್ಟೋಬರ್ 29ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು.
ಬೆಳಿಗ್ಗೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರ ತಂಡ ವಿವಿಧ ನ್ಯಾಯಾಲಯಗಳ ಕಲಾಪ ಕೊಠಡಿಗಳಿಗೆ ತೆರಳಿ, ಅಂದು ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣಗಳಲ್ಲಿ ಪ್ರತಿಕೂಲ ಆದೇಶಗಳನ್ನು ನೀಡದಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಬಳಿಕ ಕರ್ನಾಟಕ ಹೈಕೋರ್ಟ್ನ ಗೋಲ್ಡನ್ ಗೇಟ್ ಬಳಿ ಜಮಾಯಿಸಿದ ವಕೀಲರು ಪ್ರತಿಭಟನೆ ನಡೆಸಿ, ವಕೀಲರ ಜೀವ ಮತ್ತು ವೃತ್ತಿಪರ ಸ್ವಾತಂತ್ರ್ಯಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು.
ಗೃಹ ಸಚಿವರಿಗೆ ಮನವಿ ಸಲ್ಲಿಕೆ: ನಾಲ್ಕು ಪ್ರಮುಖ ಬೇಡಿಕೆಗಳು
ಪ್ರತಿಭಟನೆಯ ಬಳಿಕ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಆರ್. ರಾಜಣ್ಣ, ಉಪಾಧ್ಯಕ್ಷ ಶಿವಮೂರ್ತಿ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ, ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್ ಸೇರಿದಂತೆ ಪದಾಧಿಕಾರಿಗಳ ನಿಯೋಗವು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಕರ್ನಾಟಕದ ವಕೀಲ ಸಮುದಾಯದ ಪರವಾಗಿ ಮನವಿ ಸಲ್ಲಿಸಿತು.
ವಕೀಲರ ಮೇಲಿನ ದಾಳಿ, ಹತ್ಯೆ ಮತ್ತು ಬೆದರಿಕೆ ಪ್ರಕರಣಗಳನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಹಾಗೂ ಕಾನೂನು ರಕ್ಷಣೆಯನ್ನು ಮತ್ತಷ್ಟು ಬಲಪಡಿಸುವಂತೆ ನಿಯೋಗವು ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿತು.
1. ಹತ್ಯೆ ಪ್ರಕರಣಗಳ ಆರೋಪಿಗಳ ತಕ್ಷಣದ ಬಂಧನ: ವಕೀಲರಾದ ಮಂಜುನಾಥ್ ಮತ್ತು ಶ್ರೀರಾಮ್ ಅವರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕ್ರಿಯೆಯ ಮೂಲಕ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಯಿತು. ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಕೊಲೆ ಯತ್ನ ಪ್ರಕರಣದಲ್ಲಿನ ಆರೋಪಿಗಳ ವಿರುದ್ಧವೂ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
2. ವಕೀಲರ ರಕ್ಷಣಾ ಕಾಯ್ದೆಗೆ ಬಲ ತುಂಬಲು ತಿದ್ದುಪಡಿ: ವಕೀಲರ ಮೇಲಿನ ಹಲ್ಲೆ, ಬೆದರಿಕೆ ಮತ್ತು ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 2023ರ ವಕೀಲರ ಮೇಲಿನ ಹಿಂಸಾಚಾರ ತಡೆ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ, ಇಂತಹ ಅಪರಾಧಗಳನ್ನು ಜಾಮೀನು ರಹಿತ ಪ್ರಕರಣಗಳನ್ನಾಗಿ ಪರಿಗಣಿಸುವ ಕಾನೂನು ತಿದ್ದುಪಡಿ ತರಬೇಕು. ತಪ್ಪಿತಸ್ಥರಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನು ರೂಪಿಸಬೇಕು ಎಂದು ಮನವಿ ಮಾಡಲಾಯಿತು.
3. ಪೊಲೀಸ್ ಠಾಣೆಗಳಲ್ಲಿ ವಕೀಲರಿಗೆ ಗೌರವಯುತ ವರ್ತನೆಗೆ SOP: ಕಕ್ಷಿದಾರರ ಪರವಾಗಿ ದೂರು ಸಲ್ಲಿಸಲು ಅಥವಾ ಪ್ರಕರಣಗಳ ವಿಚಾರವಾಗಿ ಪೊಲೀಸ್ ಠಾಣೆಗಳಿಗೆ ತೆರಳುವ ವಕೀಲರಿಗೆ ಗೌರವಯುತವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (Standard Operating Procedure – SOP) ರೂಪಿಸಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.
4. ನಾಗರಿಕ ವ್ಯಾಜ್ಯಗಳಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಕಡಿವಾಣ: ನಾಗರಿಕ ಸ್ವರೂಪದ ವ್ಯಾಜ್ಯಗಳು ಮತ್ತು ಆಸ್ತಿ ವಿವಾದಗಳಲ್ಲಿ ಪೊಲೀಸರು ಅನಗತ್ಯವಾಗಿ ಮಧ್ಯಪ್ರವೇಶಿಸಬಾರದು. ಇಂತಹ ಪ್ರಕರಣಗಳಲ್ಲಿ ಕಾನೂನು ಮತ್ತು ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಸ್ತಕ್ಷೇಪ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಪೊಲೀಸ್ ಠಾಣೆಗಳಲ್ಲಿ ವಕೀಲರಿಗೆ ಗೌರವ ನೀಡಲು SOP ಅಗತ್ಯ
ಪೊಲೀಸ್ ಠಾಣೆಗಳಿಗೆ ಕಕ್ಷಿದಾರರ ಪರವಾಗಿ ತೆರಳುವ ವಕೀಲರಿಗೆ ಸೂಕ್ತ ಗೌರವ ನೀಡುತ್ತಿಲ್ಲ ಎಂಬ ಗಂಭೀರ ಆರೋಪವನ್ನು ಬೆಂಗಳೂರು ವಕೀಲರ ಸಂಘವು ಮುಂದಿಟ್ಟಿದೆ. ಕೆಲ ಸಂದರ್ಭಗಳಲ್ಲಿ ವಕೀಲರಿಗೆ ಕುಳಿತುಕೊಳ್ಳಲು ಮೂಲಭೂತ ವ್ಯವಸ್ಥೆಯನ್ನೂ ಕಲ್ಪಿಸದೆ ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಸಂಘವು ಅಸಮಾಧಾನ ವ್ಯಕ್ತಪಡಿಸಿದೆ.
ನಾಗರಿಕ ವ್ಯಾಜ್ಯಗಳನ್ನು ಬಗೆಹರಿಸುವುದು ನ್ಯಾಯಾಲಯಗಳ ವ್ಯಾಪ್ತಿಗೆ ಬರುವ ವಿಚಾರವಾಗಿದ್ದರೂ, ಕೆಲವು ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ. ಪೊಲೀಸ್ ಠಾಣೆಗಳು ಸಮಾನಾಂತರ ಸಿವಿಲ್ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಒತ್ತಾಯಿಸಿದರು.
ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರು ನಾಗರಿಕ ವ್ಯಾಜ್ಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡದಂತೆ ಈಗಾಗಲೇ ಮಾರ್ಗಸೂಚಿ ಹಾಗೂ SOP ರೂಪಿಸಿದ್ದರೂ, ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳು ಮತ್ತು ಸಹಾಯಕ ಪೊಲೀಸ್ ಆಯುಕ್ತರ ಮಟ್ಟದಲ್ಲಿ ಅವುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪವನ್ನೂ ಸಂಘವು ಮಾಡಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸುಪ್ರೀಂ ಕೋರ್ಟ್ನ ತೀರ್ಪುಗಳು ಮತ್ತು ಪೊಲೀಸ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
ಇದಲ್ಲದೆ, ವಕೀಲರ ಮೇಲಿನ ದಾಳಿ ಪ್ರಕರಣಗಳ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಮತ್ತು ವಕೀಲರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಗೌರವಯುತವಾಗಿ ನಡೆಸಿಕೊಳ್ಳುವಂತೆ ರಾಜ್ಯಾದ್ಯಂತ ಏಕರೂಪದ SOP ಜಾರಿಗೊಳಿಸಬೇಕು ಎಂದು ಸುಬ್ಬಾರೆಡ್ಡಿ ತಿಳಿಸಿದರು. ಈ ವಿಚಾರವಾಗಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿ ಭೂಷಣ್ ಅವರಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Suo Motu PIL) ದಾಖಲಿಸಿಕೊಳ್ಳುವಂತೆ ಮನವಿ ಮಾಡಿರುವುದಾಗಿಯೂ ಹೇಳಿದರು.
ಜಾಮೀನು ರಹಿತ ಪ್ರಕರಣ, ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಗೂ ರಾಜ್ಯ ವಕೀಲರ ಪರಿಷತ್ತಿನ ಒತ್ತಾಯ
ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಆರ್. ರಾಜಣ್ಣ ಮಾತನಾಡಿ, ಶಾಸನಬದ್ಧ ಸಂಸ್ಥೆಯಾಗಿರುವ ರಾಜ್ಯ ವಕೀಲರ ಪರಿಷತ್ತಿಗೆ ಬಂದ್ ಅಥವಾ ನ್ಯಾಯಾಲಯ ಕಲಾಪ ಬಹಿಷ್ಕಾರಕ್ಕೆ ಕರೆ ನೀಡುವ ಅಧಿಕಾರವಿಲ್ಲ. ಆದಾಗ್ಯೂ, ವಕೀಲರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ವಕೀಲರ ಸಂಘದ ಹೋರಾಟಕ್ಕೆ ಪರಿಷತ್ತು ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ವಕೀಲರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಜಾಮೀನು ರಹಿತ ಅಪರಾಧಗಳನ್ನಾಗಿ ಮಾಡುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಮಟ್ಟದ ಮೇಲ್ವಿಚಾರಣೆ ಇರಬೇಕು. ವಕೀಲರ ಮೇಲೆ ಹಲ್ಲೆ ಅಥವಾ ಕಿರುಕುಳ ನಡೆದ ಸಂದರ್ಭದಲ್ಲಿ ರಾಜ್ಯ ವಕೀಲರ ಪರಿಷತ್ತು ಅಥವಾ ಸಂಬಂಧಪಟ್ಟ ವಕೀಲರ ಸಂಘಕ್ಕೆ ತಕ್ಷಣ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೆ, ಇಂತಹ ಅಪರಾಧಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರಾಜ್ಯ ವಕೀಲರ ಪರಿಷ
Read this:ಶಾಂತಿಯುತ ಪ್ರತಿಭಟನೆ ಮೂಲಭೂತ ಹಕ್ಕು; ಕಾನೂನು ಪಾಲನೆಯೂ ಅಗತ್ಯ: ಹೈಕೋರ್ಟ್






