ನವೆಂಬರ್ 7ರಿಂದ ‘ವಾರ್ಡ್ ಒನ್’ ಅಭಿಯಾನದ ಎರಡನೇ ಹಂತ ಆರಂಭ; 50ಕ್ಕೂ ಹೆಚ್ಚು ವಾರ್ಡ್ಗಳ ಆಯ್ಕೆ
ಮೊದಲ ಹಂತಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ; ಡಿಸೆಂಬರ್ ಮಧ್ಯದವರೆಗೆ ಅಭಿಯಾನ ವಿಸ್ತರಣೆ – ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡುವಂತೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
2min read
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ‘ವಾರ್ಡ್ ಒನ್’ ಅಭಿಯಾನದ ಎರಡನೇ ಹಂತವು ನವೆಂಬರ್ 7ರಿಂದ ಆರಂಭವಾಗಲಿದ್ದು, 50ಕ್ಕೂ ಹೆಚ್ಚು ವಾರ್ಡ್ಗಳನ್ನು ಈ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ ನಡೆದ ವರ್ಚುವಲ್ ಸಭೆಯಲ್ಲಿ ಅಭಿಯಾನದ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಮೊದಲ ಹಂತದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಇದೇ ಉತ್ಸಾಹದಲ್ಲಿ ಎರಡನೇ ಹಂತದ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಭಿಯಾನದ ಗುರಿ ತಲುಪುವ ಆತುರದಲ್ಲಿ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಪ್ರತಿಯೊಂದು ವಾರ್ಡ್ನಲ್ಲೂ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸಾರ್ವಜನಿಕರಿಗೆ ದೀರ್ಘಕಾಲಿಕ ಪರಿಹಾರ ಒದಗಿಸುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಅಭಿಯಾನವನ್ನು ಡಿಸೆಂಬರ್ ಮಧ್ಯದವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ 704 ರಸ್ತೆ ಗುಂಡಿಗಳ ಮುಚ್ಚುವಿಕೆ
ಮೊದಲ ಹಂತದಲ್ಲಿ ಆಯ್ಕೆ ಮಾಡಿದ್ದ 43 ವಾರ್ಡ್ಗಳ ವ್ಯಾಪ್ತಿಯಲ್ಲಿ 357.41 ಕಿ.ಮೀ. ರಸ್ತೆಗಳನ್ನು ಪರಿಶೀಲಿಸಿ, ಒಟ್ಟು 704 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿದ್ದ 342 ಬ್ಲಾಕ್ ಸ್ಪಾಟ್ಗಳಿಂದ 426.6 ಟನ್ ಕಸ ತೆರವುಗೊಳಿಸಲಾಗಿದೆ. ಅಲ್ಲದೆ, 820 ಸ್ಥಳಗಳಿಂದ 1,141.2 ಟನ್ ಕಟ್ಟಡ ತ್ಯಾಜ್ಯ ಹಾಗೂ ಇತರ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಇದರೊಂದಿಗೆ 29.68 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ದುರಸ್ತಿಗೊಳಿಸಲಾಗಿದ್ದು, 455.15 ಕಿ.ಮೀ. ವ್ಯಾಪ್ತಿಯ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಸಂಘಟನೆಗಳ ಸಹಭಾಗಿತ್ವಕ್ಕೆ ಒತ್ತು
ಎರಡನೇ ಹಂತದಲ್ಲಿ ಆಯ್ಕೆ ಮಾಡಲಿರುವ ವಾರ್ಡ್ಗಳಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹಾಗೂ ವಿವಿಧ ನಾಗರಿಕ ಸಂಘಟನೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯರ ಸಹಭಾಗಿತ್ವದಿಂದ ವಾರ್ಡ್ಗಳಲ್ಲಿನ ನೈಜ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರ ಕಲ್ಪಿಸಲು ಸಾಧ್ಯವಾಗಲಿದೆ. ಸ್ವಚ್ಛತಾ ಕಾರ್ಯಗಳು ಹಾಗೂ ಇತರ ಅಭಿವೃದ್ಧಿ ಚಟುವಟಿಕೆಗಳ ಕುರಿತು ನಿವಾಸಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರನ್ನು ಅಭಿಯಾನದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಇಲಾಖೆಗಳ ನಡುವೆ ಸಮನ್ವಯ ಅಗತ್ಯ
ಕ್ಷೇತ್ರಮಟ್ಟದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಎಲ್ಲಾ ಇಲಾಖೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ವಿಶೇಷವಾಗಿ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಮರಗಳ ನಿರ್ವಹಣೆ ಹಾಗೂ ತೆರವು ಕಾರ್ಯಗಳನ್ನು ಸುಗಮಗೊಳಿಸಬೇಕು ಎಂದರು.
ಬಿಡಿಎ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಸಂಗ್ರಹವಾಗಿರುವ ಕಸವನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳು ಸಾರ್ವಜನಿಕರಿಗೆ ಗೋಚರಿಸುವಂತಿರಬೇಕು. ಈ ನಿಟ್ಟಿನಲ್ಲಿ ಸಮುದಾಯದೊಂದಿಗೆ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಿ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಂಕ್ಷನ್ಗಳ ಅಭಿವೃದ್ಧಿ, ರಸ್ತೆ ಸುರಕ್ಷತೆಗೆ ಆದ್ಯತೆ
ನಗರದಲ್ಲಿ ಕಸದ ಸಮಸ್ಯೆಯನ್ನು ನಿಯಂತ್ರಿಸುವ ಕಾರ್ಯದ ಜೊತೆಗೆ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ನಗರದ ಪ್ರಮುಖ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸುವಾಗ ಲೇನ್ ಮಾರ್ಕಿಂಗ್ ಹಾಗೂ ರಿಫ್ಲೆಕ್ಟರ್ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಬಂದಿರುವ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಎರಡನೇ ಹಂತದ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಐದು ನಗರ ಪಾಲಿಕೆಗಳ ಆಯುಕ್ತರು, ಅಪರ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Read this:ಬೆಂಗಳೂರಿನಲ್ಲಿ ನವೆಂಬರ್ 1ರಿಂದ ‘ವಾರ್ಡ್ ಒನ್’ ಅಭಿಯಾನ ಆರಂಭ; 43 ವಾರ್ಡ್ಗಳ ಆಯ್ಕೆ








