ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳ ಪದಕ ಸಾಧನೆ: ರಾಜ್ಯಪಾಲ ಡಾ. ಸುಧಾ ಯಾದವ್ ಅಭಿನಂದನೆ
ಏಷ್ಯನ್, ಕಾಮನ್ವೆಲ್ತ್ ಹಾಗೂ ಪ್ಯಾರಾ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಕರ್ನಾಟಕ ಮತ್ತು ಭಾರತದ ಕೀರ್ತಿ ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳ ಸಾಧನೆಯನ್ನು ರಾಜ್ಯಪಾಲ ಡಾ. ಸುಧಾ ಯಾದವ್ ಶ್ಲಾಘಿಸಿದ್ದಾರೆ.
2min read
ಬೆಂಗಳೂರು: ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ ಹಾಗೂ ಪ್ಯಾರಾ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ಭಾರತ ಮತ್ತು ಕರ್ನಾಟಕದ ಕೀರ್ತಿ ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯಪಾಲ ಡಾ. ಸುಧಾ ಯಾದವ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಜಪಾನ್ನಲ್ಲಿ ನಡೆದ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್, ಅಥ್ಲೆಟಿಕ್ಸ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿದ ಎಂ.ಆರ್. ಪೂವಮ್ಮ, ಗಾಲ್ಫ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದ ಪ್ರಣವಿ ಊರ್ಸ್ ಹಾಗೂ ಹಾಕಿಯಲ್ಲಿ ಚಿನ್ನದ ಪದಕ ಗೆದ್ದ ಮೊಹಿತ್ ಎಚ್.ಎಸ್. ಅವರ ಸಾಧನೆಯನ್ನು ರಾಜ್ಯಪಾಲರು ಶ್ಲಾಘಿಸಿದ್ದಾರೆ.
ಇದೇ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಶೂಟಿಂಗ್ ಕ್ರೀಡಾಪಟು ತಿಲೋತ್ತಮಾ ಸೇನ್ ಹಾಗೂ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಕಂಚಿನ ಪದಕ ಪಡೆದ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಮತ್ತು ಅಥ್ಲೆಟಿಕ್ಸ್ ಕ್ರೀಡಾಪಟು ಸ್ನೇಹಾ ಎಸ್.ಎಸ್. ಅವರ ಸಾಧನೆಗೂ ಅಭಿನಂದನೆ ತಿಳಿಸಿದ್ದಾರೆ.
ಸ್ಕಾಟ್ಲೆಂಡ್ನಲ್ಲಿ ನಡೆದ 23ನೇ ಕಾಮನ್ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಶಿಲ್ಪಾ ಕೆ.ಎಸ್. ಅವರ ಸಾಧನೆಯನ್ನೂ ರಾಜ್ಯಪಾಲರು ಪ್ರಶಂಸಿಸಿದ್ದಾರೆ.
ಜಪಾನ್ನಲ್ಲಿ ನಡೆದ 5ನೇ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಸೌಮ್ಯ ಹಾಗೂ ಬೆಳ್ಳಿ ಪದಕ ಪಡೆದ ರಾಧಾ ವೆಂಕಟೇಶ್ ಅವರನ್ನು ಅಭಿನಂದಿಸಿರುವ ರಾಜ್ಯಪಾಲರು, ಕಂಚಿನ ಪದಕ ವಿಜೇತರಾದ ಶರತ್ ಮಕನಹಳ್ಳಿ ಶಂಕರಪ್ಪ (ಪ್ಯಾರಾ ಅಥ್ಲೆಟಿಕ್ಸ್), ಸ್ವಾತಿಕ್ ಪಾಟೀಲ್, ತೇಜಸ್ ನಂದಕುಮಾರ್ ಮತ್ತು ನಿರಂಜನ್ ಮುಕುಂದನ್ (ಪ್ಯಾರಾ ಈಜು), ಪಲ್ಲವಿ ಕಳುವೆಹಳ್ಳಿ ಮಂಜುನಾಥ್ (ಪ್ಯಾರಾ ಬ್ಯಾಡ್ಮಿಂಟನ್) ಅವರ ಸಾಧನೆಯನ್ನೂ ಶ್ಲಾಘಿಸಿದ್ದಾರೆ.
“ಕ್ರೀಡಾಪಟುಗಳ ಪರಿಶ್ರಮ, ಶಿಸ್ತು, ಸಮರ್ಪಣೆ ಮತ್ತು ಛಲ ಯುವಜನತೆಗೆ ಸ್ಫೂರ್ತಿಯಾಗಿದೆ. ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕರ್ನಾಟಕ ಹಾಗೂ ಭಾರತದ ಕೀರ್ತಿಯನ್ನು ಹೆಚ್ಚಿಸಿರುವ ಈ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಾಧನೆ ಮಾಡಿ ದೇಶದ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಗೌರವ ತಂದುಕೊಡಲಿ” ಎಂದು ರಾಜ್ಯಪಾಲ ಡಾ. ಸುಧಾ ಯಾದವ್ ಹಾರೈಸಿದ್ದಾರೆ.
Read this:ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್: ಜಪಾನ್ನ ಡೆನ್ಸೊ ಐರಿಸ್ ಚಾಂಪಿಯನ್









