ಕರಾವಳಿ, ಪಶ್ಚಿಮ ಘಟ್ಟ ನೀತಿಗಳ ಮರುಪರಿಶೀಲನೆಗೆ ಸಿಎಂ ಮನವಿ
CRZ ನಕ್ಷೆ ದೋಷ ಸರಿಪಡಿಸಿ; ಸಾಂಪ್ರದಾಯಿಕ ಮೀನುಗಾರರ ಹಿತ ರಕ್ಷಣೆಗೆ ಆದ್ಯತೆ
2min read
ನವದೆಹಲಿ: ಕರ್ನಾಟಕದ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಗೆ ಸಂಬಂಧಿಸಿದಂತೆ ರಾಜ್ಯದ ವಾಸ್ತವ ಪರಿಸ್ಥಿತಿಗಳನ್ನು ಪರಿಗಣಿಸಿ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಹಾಗೂ ಸಡಿಲಿಕೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು, ಕರಾವಳಿ ಜನರ ಜೀವನೋಪಾಯ ಹಾಗೂ ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
CRZ ನಕ್ಷೆಗಳ ದೋಷ ಸರಿಪಡಿಸಲು ಆಗ್ರಹ
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮೀನುಗಾರರು ಮತ್ತು ವಸತಿ ಪ್ರದೇಶಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಪ್ರಸ್ತುತ ಅನುಮೋದಿತ ಕರಾವಳಿ ವಲಯ ನಿರ್ವಹಣಾ ಯೋಜನೆಯ (CZMP) ನಕ್ಷೆಗಳಲ್ಲಿ ಹಲವು ದೋಷಗಳಿದ್ದು, ಕಂದಾಯ ದಾಖಲೆಗಳು, ನವೀಕೃತ ಉಪಗ್ರಹ ಚಿತ್ರಣಗಳು ಹಾಗೂ ಸ್ಥಳ ಪರಿಶೀಲನೆ ಆಧರಿಸಿ ಸರ್ವೆ ಸಂಖ್ಯೆವಾರು ತಿದ್ದುಪಡಿ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಗೋವಾ ಮಾದರಿಯಲ್ಲಿ ಕರ್ನಾಟಕಕ್ಕೂ CRZ ಸಡಿಲಿಕೆ
ಕರಾವಳಿ ಭಾಗದ ಜನರ ಸಾಂಪ್ರದಾಯಿಕ ಮೀನುಗಾರಿಕೆ, ದೋಣಿ ದುರಸ್ತಿ, ಬಲೆ ತಯಾರಿ, ಮೀನು ಸಂಸ್ಕರಣೆ ಹಾಗೂ ಹಳೆಯ ಮನೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ CRZ ನಿಯಮಗಳ ಅಡಿಯಲ್ಲಿ ಅಗತ್ಯ ಅವಕಾಶ ನೀಡಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.
ಪರಿಸರ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ಗೋವಾ ರಾಜ್ಯಕ್ಕೆ ನೀಡಿರುವ CRZ ನಿಯಮಗಳಲ್ಲಿನ ಸಡಿಲಿಕೆಗಳನ್ನು ಕರ್ನಾಟಕಕ್ಕೂ ಅನ್ವಯಿಸುವಂತೆ ಅವರು ಮನವಿ ಮಾಡಿದ್ದಾರೆ.
ಪಶ್ಚಿಮ ಘಟ್ಟ ESA ಅಧಿಸೂಚನೆ ಮರುಪರಿಶೀಲನೆಗೆ ಒತ್ತಾಯ
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಗೆ ಕೃಷಿ ಭೂಮಿ, ತೋಟಗಳು ಮತ್ತು ಮಾನವ ವಸತಿ ಪ್ರದೇಶಗಳನ್ನು ಸೇರಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ವೈಜ್ಞಾನಿಕ ಸಮೀಕ್ಷೆ ಹಾಗೂ ಭೌತಿಕ ಪರಿಶೀಲನೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಸಮಗ್ರ ಅಧ್ಯಯನ ಮತ್ತು ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿ, ರಾಜ್ಯದೊಂದಿಗೆ ಚರ್ಚೆ ನಡೆಸಿ ಅಧಿಸೂಚನೆ ಹೊರಡಿಸುವಂತೆ ಅವರು ಕೋರಿದ್ದಾರೆ.
ಪರಿಸರ ಸಂರಕ್ಷಣೆ ಜತೆಗೆ ಜನರ ಜೀವನೋಪಾಯ ರಕ್ಷಣೆ
ಮ್ಯಾಂಗ್ರೋವ್ಗಳು, ಮರಳಿನ ದಿಬ್ಬಗಳು ಹಾಗೂ ಆಮೆಗಳ ಸಂತಾನೋತ್ಪತ್ತಿ ಪ್ರದೇಶಗಳಂತಹ CRZ-I ಪ್ರದೇಶಗಳ ರಕ್ಷಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ, ವೈಜ್ಞಾನಿಕ ಆಧಾರಿತ ನಿಯಮಗಳ ಮೂಲಕ ಪರಿಸರ ರಕ್ಷಣೆ ಮತ್ತು ಸ್ಥಳೀಯರ ಜೀವನೋಪಾಯ ಎರಡನ್ನೂ ಸಮತೋಲನಗೊಳಿಸಬಹುದು ಎಂದು ತಿಳಿಸಿದ್ದಾರೆ.
No ratings yet







