- Home
- Karnataka
- Infrastructure
- Energy & Power
ಪಶ್ಚಿಮ ಘಟ್ಟದ ವಿದ್ಯುದ್ದೀಕೃತ ರೈಲು ಮಾರ್ಗಕ್ಕೆ KPTCLನಿಂದ ವಿದ್ಯುತ್ ಬಲ
ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದ 12 ಟ್ರಾಕ್ಷನ್ ಉಪಕೇಂದ್ರಗಳಿಗೆ ವಿದ್ಯುತ್ ಸಂಪರ್ಕ; ವಂದೇ ಭಾರತ್ ಸಂಚಾರಕ್ಕೆ 24x7 ತಾಂತ್ರಿಕ ಮೇಲ್ವಿಚಾರಣೆ ವ್ಯವಸ್ಥೆ
3min read
ಬೆಂಗಳೂರು: ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು, ಭಾರಿ ಮಳೆ ಹಾಗೂ ಸವಾಲಿನ ಭೌಗೋಳಿಕ ಪರಿಸ್ಥಿತಿಯ ನಡುವೆ ವಿದ್ಯುದ್ದೀಕರಣಗೊಂಡಿರುವ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸುಗಮ ಸಂಚಾರಕ್ಕೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಅಗತ್ಯ ವಿದ್ಯುತ್ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಮಾರ್ಗದ 12 ರೈಲ್ವೆ ಟ್ರಾಕ್ಷನ್ ಉಪಕೇಂದ್ರಗಳಿಗೆ (RTSS) KPTCLನ 12 ಉಪಕೇಂದ್ರಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ನವೆಂಬರ್ 13ರಂದು ಆರಂಭವಾಗಲಿರುವ ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯು ಪಶ್ಚಿಮ ಘಟ್ಟದ ಈ ಹೊಸ ವಿದ್ಯುದ್ದೀಕೃತ ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲು ಸಂಚಾರಕ್ಕೆ ಮತ್ತಷ್ಟು ವೇಗ ನೀಡಲಿದೆ.
ಈ ಯೋಜನೆಯಡಿ ಅಗತ್ಯ ವಿದ್ಯುತ್ ಮೂಲಸೌಕರ್ಯ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿ, KPTCL, ರೈಲ್ವೆ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು ಕ್ರಮ ಕೈಗೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಪ್ರಸರಣ ಜಾಲದ ಬಲವರ್ಧನೆ, ಉಪಕೇಂದ್ರಗಳ ಸಾಮರ್ಥ್ಯ ಹೆಚ್ಚಳ ಹಾಗೂ ರೈಲ್ವೆ ಟ್ರಾಕ್ಷನ್ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿತ್ತು.
ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು, ತೀವ್ರ ಏರಿಳಿತ, ನಿರಂತರ ಮಳೆ ಮತ್ತು ಸಂಕೀರ್ಣ ಭೌಗೋಳಿಕ ಪರಿಸ್ಥಿತಿಗಳಲ್ಲಿ ಪ್ರಸರಣ ಮೂಲಸೌಕರ್ಯ ನಿರ್ಮಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿತ್ತು. ಈ ಸವಾಲುಗಳ ನಡುವೆಯೂ KPTCLನ ಎಂಜಿನಿಯರ್ಗಳು ಮತ್ತು ತಾಂತ್ರಿಕ ಸಿಬ್ಬಂದಿ ಹಗಲು-ರಾತ್ರಿ ಕಾರ್ಯನಿರ್ವಹಿಸಿ, ಅಗತ್ಯ ಪ್ರಸರಣ ಮಾರ್ಗಗಳು, ಗ್ರಿಡ್ ಬಲವರ್ಧನೆ ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದಾರೆ.
ಯೋಜನೆಯ ಭಾಗವಾಗಿ ಹೊಸ ಓವರ್ಹೆಡ್ ಪ್ರಸರಣ ಮಾರ್ಗಗಳು, ಭೂಗತ ಕೇಬಲ್ಗಳು, LILO ಸಂಪರ್ಕಗಳು, ಸ್ವಿಚಿಂಗ್ ಕೇಂದ್ರಗಳು ಹಾಗೂ ಉಪಕೇಂದ್ರಗಳ ಪರಿವರ್ತಕ ಸಾಮರ್ಥ್ಯ ಹೆಚ್ಚಳ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
“ಪಶ್ಚಿಮ ಘಟ್ಟದಂತಹ ದುರ್ಗಮ ಪ್ರದೇಶದಲ್ಲಿ ವಿದ್ಯುದ್ದೀಕೃತ ರೈಲು ಮಾರ್ಗಕ್ಕೆ ನಿರಂತರ ಮತ್ತು ವಿಶ್ವಾಸಾರ್ಹ ಟ್ರಾಕ್ಷನ್ ವಿದ್ಯುತ್ ಒದಗಿಸುವುದು ದೊಡ್ಡ ತಾಂತ್ರಿಕ ಜವಾಬ್ದಾರಿಯಾಗಿದೆ. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ KPTCL ಸಿಬ್ಬಂದಿ ಶ್ರಮಿಸಿ ಅಗತ್ಯ ಪ್ರಸರಣ ಮೂಲಸೌಕರ್ಯವನ್ನು ಸಜ್ಜುಗೊಳಿಸಿದ್ದಾರೆ. ಅವರ ತಾಂತ್ರಿಕ ಕೌಶಲ್ಯ, ಬದ್ಧತೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಪ್ರಯತ್ನ ಶ್ಲಾಘನೀಯ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಹೊಸ ರೈಲು ಸಂಪರ್ಕವು ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಪ್ರಯಾಣವನ್ನು ಸುಗಮಗೊಳಿಸುವುದರ ಜತೆಗೆ ಮಂಗಳೂರು, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಸೇರಿದಂತೆ ಕರಾವಳಿ ಪ್ರದೇಶಗಳ ಪ್ರವಾಸೋದ್ಯಮ, ಆತಿಥ್ಯ ವಲಯ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಇಂಧನ ಸಚಿವರ ನಿರ್ದೇಶನದಂತೆ KPTCL ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅವರು ಅಧಿಕಾರಿಗಳೊಂದಿಗೆ ವಿಶೇಷ ಸಿದ್ಧತಾ ಪರಿಶೀಲನೆ ನಡೆಸಿ, ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೂ ಮುನ್ನ ಸಂಬಂಧಿತ ಉಪಕೇಂದ್ರಗಳು ಮತ್ತು ಪ್ರಸರಣ ವ್ಯವಸ್ಥೆಗಳ ಕಾರ್ಯಾಚರಣಾ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದಾರೆ.
“ಪಶ್ಚಿಮ ಘಟ್ಟದ ಸವಾಲಿನ ಭೌಗೋಳಿಕ ಪರಿಸ್ಥಿತಿಯಲ್ಲಿ ರೈಲು ಸಂಚಾರಕ್ಕೆ ವಿಶ್ವಾಸಾರ್ಹ ಟ್ರಾಕ್ಷನ್ ವಿದ್ಯುತ್ ಒದಗಿಸಲು ವಿವಿಧ ಹಂತಗಳಲ್ಲಿ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ವಂದೇ ಭಾರತ್ ಸಂಚಾರದ ಸಂದರ್ಭದಲ್ಲಿ ಪ್ರಮುಖ KPTCL ಉಪಕೇಂದ್ರಗಳು ಮತ್ತು ಸಂಪರ್ಕ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ 24 ಗಂಟೆಗಳ ಕಾಲ ನಿರಂತರ ಮೇಲ್ವಿಚಾರಣೆ ನಡೆಸಲಾಗುವುದು,” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
12 ರೈಲ್ವೆ ಟ್ರಾಕ್ಷನ್ ಉಪಕೇಂದ್ರಗಳಿಗೆ ಅಗತ್ಯವಾದ ಗ್ರಿಡ್ ಸಂಪರ್ಕ, ಉಪಕೇಂದ್ರಗಳ ಸಾಮರ್ಥ್ಯ ವೃದ್ಧಿ ಹಾಗೂ ಪ್ರಸರಣ ಮೂಲಸೌಕರ್ಯ ಕಲ್ಪಿಸುವಲ್ಲಿ KPTCL ತಂಡಗಳು ಮಹತ್ವದ ಪಾತ್ರ ವಹಿಸಿವೆ. ವಿಶೇಷವಾಗಿ ಘಾಟ್ ಪ್ರದೇಶದ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಿದ ಎಂಜಿನಿಯರ್ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.
KPTCLನ ಪ್ರಮುಖ ತಾಂತ್ರಿಕ ಕಾಮಗಾರಿಗಳು:
- 12 KPTCL ಉಪಕೇಂದ್ರಗಳಿಂದ 12 ರೈಲ್ವೆ ಟ್ರಾಕ್ಷನ್ ಉಪಕೇಂದ್ರಗಳಿಗೆ ವಿದ್ಯುತ್ ಸಂಪರ್ಕ.
- ಸಿದ್ದಾಪುರಕ್ಕೆ 4.5 ಕಿ.ಮೀ. ಉದ್ದದ 66 ಕೆ.ವಿ. ಪ್ರಸರಣ ಮಾರ್ಗ ನಿರ್ಮಾಣ.
- ಸಕಲೇಶಪುರ RTSSಗೆ 220 ಕೆ.ವಿ. ಭೂಗತ ಹಾಗೂ ಓವರ್ಹೆಡ್ ಪ್ರಸರಣ ಸಂಪರ್ಕ.
- ನೆರಳಕಟ್ಟೆಗೆ 2.760 ಕಿ.ಮೀ. ಉದ್ದದ 220 ಕೆ.ವಿ. ಭೂಗತ ಕೇಬಲ್ ಅಳವಡಿಕೆ.
- ಜೋಕಟ್ಟೆ, ಮುಲ್ಕಿ, ಬಾರ್ಕೂರು ಮತ್ತು ಸೇನಾಪುರಕ್ಕೆ 110 ಕೆ.ವಿ. ಪ್ರಸರಣ ಮಾರ್ಗ, LILO ಸಂಪರ್ಕ ಹಾಗೂ ಸ್ವಿಚಿಂಗ್ ಮೂಲಸೌಕರ್ಯ.
- ಅಂಚೆಪಾಳ್ಯ ಮತ್ತು ಯಾಚೇನಹಳ್ಳಿ ಉಪಕೇಂದ್ರಗಳಲ್ಲಿ 220/66 ಕೆ.ವಿ. ಪರಿವರ್ತಕ ಸಾಮರ್ಥ್ಯ ಹೆಚ್ಚಳ.
- ಮುರುಡೇಶ್ವರ, ಕುಮಟಾ ಮತ್ತು ಕಾರವಾರ RTSSಗಳಿಗೆ ಅಸ್ತಿತ್ವದಲ್ಲಿರುವ KPTCL ಪ್ರಸರಣ ಜಾಲದ ಮೂಲಕ ವಿದ್ಯುತ್ ಪೂರೈಕೆ.
- ವಂದೇ ಭಾರತ್ ಸಂಚಾರದ ಹಿನ್ನೆಲೆಯಲ್ಲಿ 24x7 ತಾಂತ್ರಿಕ ಮೇಲ್ವಿಚಾರಣೆ ಮತ್ತು ತುರ್ತು ಸ್ಪಂದನಾ ವ್ಯವಸ್ಥೆ.
ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ರೈಲು ಮಾರ್ಗದಲ್ಲಿ ವಂದೇ ಭಾರತ್ ಸೇವೆ ಆರಂಭವಾಗುತ್ತಿರುವುದು ರಾಜ್ಯದ ರೈಲು ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಈ ಮಾರ್ಗದ ವಿದ್ಯುತ್ ರೈಲು ಸಂಚಾರಕ್ಕೆ ಅಗತ್ಯವಾದ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯಲ್ಲಿ KPTCL ಅಭಿವೃದ್ಧಿಪಡಿಸಿರುವ ಪ್ರಸರಣ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸಲಿದೆ.
Read this:PRR-2ಗೆ ಅನುಮೋದಿತ ಬಡಾವಣೆ ಬಲಿ ಬೇಡ: ‘ದಿ ಗಾರ್ಡನ್ಸ್’ ನಿವಾಸಿಗಳ ಆಗ್ರಹ




